Advertisement

ಜುಲೈಯಲ್ಲಿ ಪ್ರೌಢ, ಸೆಪ್ಟಂಬರ್‌ ಬಳಿಕ ಪ್ರಾಥಮಿಕ ಶಾಲೆ ಆರಂಭ?

07:59 AM May 27, 2020 | Hari Prasad |

ಹೊಸದಿಲ್ಲಿ: ಹಂತ ಹಂತವಾಗಿ ಲಾಕ್ ಡೌನ್‌ ಸಡಿಲಿಕೆ ಮಾಡುತ್ತಿರುವ ಮಾದರಿಯಲ್ಲೇ ಶಾಲೆಗಳನ್ನು ಪುನರಾರಂಭಿಸಲು ಮಾನವ ಸಂಪದಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ.

Advertisement

ಮೊದಲಿಗೆ ಪ್ರೌಢಶಾಲೆಯ ತರಗತಿ ಆರಂಭಿಸುವುದು, ಪ್ರಾಥಮಿಕ ಶಾಲೆಯ ಕಿರಿಯ ವಿದ್ಯಾರ್ಥಿಗಳಿಗೆ ಇನ್ನಷ್ಟು ವಿಳಂಬವಾಗಿ ಶಾಲೆ ತೆರೆಯುವ ಚಿಂತನೆ ಕೇಂದ್ರ ಸರಕಾರದ್ದು. ಅಂದರೆ 8ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಜುಲೈಯಿಂದ; 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಸೆಪ್ಟಂಬರ್‌ ಬಳಿಕ ತರಗತಿ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ. ಅದರಲ್ಲೂ ಹಸುರು ಮತ್ತು ಕಿತ್ತಳೆ ಜಿಲ್ಲೆಗಳಲ್ಲಿ ಮಾತ್ರ ಮೊದಲಿಗೆ ಶಾಲೆ ತೆರೆಯಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಇದು ಜಾರಿಗೆ ಬರಲಿದೆ.

ಮಾನವ ಸಂಪದಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಶೈಕ್ಷ ಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಜತೆ ಸೇರಿ ಇದಕ್ಕೆ ಪೂರಕವಾದ ಯೋಜನೆ ರೂಪಿಸುತ್ತಿದೆ. ಇದರ ಅನ್ವಯವೇ ಮಾರ್ಗದರ್ಶಿ ಸೂತ್ರಗಳನ್ನೂ ರಚಿಸಲಾಗುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಮೊದಲು 8ರಿಂದ 12ನೇ ತರಗತಿ
ಈಗಿನ ಯೋಜನೆ ಪ್ರಕಾರ ಜುಲೈಯಲ್ಲಿ ಶಾಲೆ ಆರಂಭವಾದರೆ ಮೊದಲಿಗೆ ತರಗತಿಗಳಿಗೆ ಬರುವುದು 8ರಿಂದ 12ನೇ ತರಗತಿಯ ಮಕ್ಕಳು. ಇವರೂ ಪಾಳಿಯಲ್ಲಿ ಬರಲಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ.

ಸೆಪ್ಟಂಬರ್ ಬಳಿಕ ಪ್ರಾಥಮಿಕ ಶಾಲೆ
ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸದ್ಯಕ್ಕೆ ತರಗತಿ ಆರಂಭವಾಗುವುದು ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಈ ಮಕ್ಕಳು ಸಣ್ಣವರು ಮತ್ತು ಸೂಕ್ಷ್ಮ ಸಂವೇದಿಗಳಾಗಿರುವುದರಿಂದ ಮನೆಯಲ್ಲೇ ಕಲಿಸುವ ವ್ಯವಸ್ಥೆ ಮಾಡಲು ಸೂಚನೆ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಇವರಿಗೆ ಲಾಕ್‌ಡೌನ್‌ ಸಂಪೂರ್ಣ ತೆರವಾದ ಮೇಲೆ ಸೆಪ್ಟಂಬರ್‌ ಬಳಿಕ ಶಾಲೆ ಆರಂಭವಾಗುವ ಸಾಧ್ಯತೆಯೇ ಹೆಚ್ಚು.

Advertisement

ಎಸೆಸೆಲ್ಸಿ ಮಕ್ಕಳಿಗೆ ನಿಬಂಧನೆ
ಬೆಂಗಳೂರು: ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ನಿಯಮ ರೂಪಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಬುತ್ತಿ ತಂದರೂ ಹಂಚಿ ತಿನ್ನದಿರುವ ಬಗ್ಗೆ ನಿಯಮ ರೂಪಿತವಾಗಲಿದೆ. ಹಾಗೆಯೇ ಪೆನ್‌, ಪೆನ್ಸಿಲ್‌, ಸ್ಕೇಲ್‌, ರಬ್ಬರ್‌ ಸಹಿತ ಯಾವುದೇ ಸಾಮಗ್ರಿಗಳನ್ನು ಹಂಚಿಕೊಳ್ಳುವಂತಿಲ್ಲ.

ಶಾಲೆಗಳ ಪುನರಾರಂಭಕ್ಕೆ ಸೂಚಿತ ನಿಯಮಗಳು
– ತರಗತಿಯೊಳಗೆ 6 ಅಡಿ ಸಾಮಾಜಿಕ ಅಂತರ ಕಡ್ಡಾಯ

– ಪ್ರತೀ ಕ್ಲಾಸ್‌ನಲ್ಲಿ 15ರಿಂದ 20 ಮಕ್ಕಳ ಮಿತಿ, ಇದಕ್ಕಾಗಿ ಪಾಳಿ ರೂಪಿಸಬೇಕು

– ಪ್ರತೀ ಬ್ಯಾಚ್‌ಗೂ ಪರ್ಯಾಯ ದಿನ ತರಗತಿ

– ಶಾಲೆಗೆ ಬಾರದ ಬ್ಯಾಚ್‌ಗೆ ಹೋಂ ವರ್ಕ್‌

– ಶಾಲೆಗಳಲ್ಲಿ ಕ್ಯಾಂಟೀನ್‌ ಇರುವುದಿಲ್ಲ

– ಮಕ್ಕಳು ಮನೆಯಿಂದಲೇ ಆಹಾರ ತರಬೇಕು

– ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯೂ ಇಲ್ಲ.

– ಶಾಲೆಗಳ ಒಳಗೆ ಅಲ್ಲಲ್ಲಿ ಸ್ಯಾನಿಟೈಸರ್‌ ಸ್ಟೇಶನ್‌

– ಒಳಬರಲು ಮತ್ತು ಹೊರಹೋಗಲು ಪ್ರತ್ಯೇಕ ಮಾರ್ಗ

– ಮಕ್ಕಳು ಬರುವ ಮುನ್ನ, ಹೋದ ಬಳಿಕ ಕೊಠಡಿ ಶುಚಿಗೊಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next