Advertisement

ಇಂದಿನಿಂದ ಶಾಲೆಗಳು ಓಪನ್‌-2023-24 ಶೈಕ್ಷಣಿಕ ವರ್ಷ ಆರಂಭ, ಮೇ 31 ರಿಂದ ತರಗತಿ ಪ್ರಾರಂಭ

10:50 PM May 28, 2023 | Team Udayavani |

ಬೆಂಗಳೂರು: ಸರ್ಕಾರದ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಇಂದಿನಿಂದ (ಮೇ 29 ಸೋಮವಾರ) ಶಾಲೆಗಳು ತೆರೆಯಲಿವೆ. 31ರಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನಾರಂಭಗೊಳ್ಳಲಿವೆ.

Advertisement

ಮೇ 29 ಮತ್ತು 30ರಂದು ಶಾಲೆಗಳನ್ನು ಸಂಪೂರ್ಣ ಸ್ವತ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿದೆ.

ಬೇಸಿಗೆ ರಜೆ ಮುಕ್ತಾಯಗೊಂಡಿದ್ದು ಮಂಗಳವಾರ ಮತ್ತು ಬುಧವಾರ ಪ್ರತಿ ತರಗತಿ ಕೊಠಡಿ, ಆವರಣ, ಆಟದ ಮೈದಾನ, ಲೈಬ್ರರಿ ಸೇರಿ ಇಡೀ ಶಾಲೆಯನ್ನು ಸ್ವತ್ಛಗೊಳಿಸಬೇಕು. ಮಕ್ಕಳು ತರಗತಿಯಲ್ಲಿ ಕೂತು ಪಾಠ ಕೇಳಲು ಆರೋಗ್ಯಕರ ರೀತಿಯಲ್ಲಿ ಶಾಲೆಯನ್ನು ಸಜ್ಜುಗೊಳಿಸಬೇಕು. ಶಾಲಾ ಕೊಠಡಿ, ಶೌಚಾಲಯ, ಕಾಂಪೌಂಡ್‌ ಸೇರಿ ಶಾಲೆಯ ಯಾವುದೇ ಭಾಗ ಮಳೆ ಮತ್ತಿತರ ಕಾರಣದಿಂದ ಹಾನಿಯಾಗಿದ್ದರೆ ಅವುಗಳ ದುರಸ್ತಿಗೆ ಕ್ರಮ ವಹಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಇಲಾಖೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಸೂಚಿಸಿದೆ.

ಎಸ್‌ಡಿಎಂಸಿ ಸಭೆ: ಪ್ರತಿ ಶಾಲೆಯಲ್ಲೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಪ್ರಾರಂಭೋತ್ಸವ ಹೇಗೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಬೇಕು. ಶಾಲಾ ವೇಳಾಪಟ್ಟಿ, ವಿಷಯವಾರು ಕ್ರಿಯಾ ಯೋಜನೆ, ಶಿಕ್ಷಕರ ವೇಳಾಪಟ್ಟಿ, ಶಾಲಾಭಿವೃದ್ಧಿ ಯೋಜನೆ, ಶಾಲಾ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಿಕೊಳ್ಳಬೇಕು. ಮುಖ್ಯ ಶಿಕ್ಷಕರು ಶಿಕ್ಷಕರೊಂದಿಗೆ ಸಭೆ ನಡೆಸಿ ವಿವಿಧ ಕಾರ್ಯಭಾರಗಳ ಹಂಚಿಕೆ ಮಾಡಬೇಕು.

ವಿದ್ಯಾರ್ಥಿಗಳಿಗೆ ಸ್ವಾಗತ: ಮೇ 31ರ ಶಾಲೆ ಆರಂಭದ ದಿನ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ, ಚಾಕಲೇಟ್‌ ಅಥವಾ ಇನ್ಯಾವುದೇ ಸಿಹಿ ನೀಡಿ ಬರಮಾಡಿಕೊಳ್ಳಬೇಕು. ಅಂದು ಬಿಸಿಯೂಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಬೇಕೆಂದು ಸೂಚಿಸಲಾಗಿದೆ.

Advertisement

ಕಳೆದ ಸಾಲಿನಲ್ಲಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿರುವ, ಶಾಲೆಗೆ ಬಾರದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಾಲೆಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next