ನವದೆಹಲಿ: ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಹರಡಲಿದೆ ಎಂಬ ಭಯದ ಹಿನ್ನೆಲೆಯಲ್ಲಿ ಭಾರತದಲ್ಲಿ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.14ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ದೇಶಾದ್ಯಂತ ನಡೆಸಿದ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ:ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!
ಸ್ಥಳೀಯ ಆನ್ ಲೈನ್ ಪ್ಲ್ಯಾಟ್ ಫಾರಂ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ, ಒಮಿಕ್ರಾನ್ ಸೋಂಕು ಹೆಚ್ಚಳವಾಗಬಹುದು ಎಂಬ ಆತಂಕದಿಂದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿವರಿಸಿದೆ.
ಒಂದೇ ವಾರದಲ್ಲಿ 25ಕ್ಕಿಂತಲೂ ಅಧಿಕ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಹಿಂದಿನ ಡೆಲ್ಟಾ ಸೋಂಕಿಗಿಂತಲೂ ಒಮಿಕ್ರಾನ್ ಅತೀ ಕ್ರಿಪ್ರವಾಗಿ ಹರಡಲಿದೆ ಎಂಬುದನ್ನು ವಿಜ್ಞಾನಿಗಳು ಕೂಡಾ ಖಚಿತಪಡಿಸಿದ್ದಾರೆ.
ಒಮಿಕ್ರಾನ್ ವೈರಸ್ ನ ಭಯದ ಕುರಿತು ಭಾರತದ 308 ಜಿಲ್ಲೆಗಳಿಂದ 15,875 ಪೋಷಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು, ಇದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಒಮಿಕ್ರಾನ್ ವೈರಸ್ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದ ವೈದ್ಯರುಗಳು ತಿಳಿಸಿದ ಅಂಶವನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದ್ದು, 25 ವರ್ಷದೊಳಗಿನ ವಯೋಮಾನದವರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಹೇಳಿದೆ.
ಈ ವಾರಾಂತ್ಯದವರೆಗೆ ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳುಹಿಸುವುದಾಗಿ ಶೇ.58ರಷ್ಟು ಪೋಷಕರು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ತಿಳಿಸಿದೆ. ಆದರೆ ಭಾರತದಲ್ಲಿ ಈವರೆಗೆ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಒಂದು ವೇಳೆ ಭಾರತದಲ್ಲಿಯೂ ಪ್ರಕರಣ ಪತ್ತೆಯಾದರೆ, ಶೇ.5ರಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು ಅನುಮಾನ ಎಂದು ಹೇಳಿದೆ.