Advertisement

ಬಾಗಿಲು ಮುಚ್ಚುವ ಹಂತದ ಶಾಲೆಗಳು

04:29 PM Dec 27, 2019 | Suhan S |

ಶಿರಸಿ: ಮಲೆನಾಡು ಜಿಲ್ಲೆಗಳ ಅನುದಾನಿತ ಶಿಕ್ಷಣ ಸಂಸ್ಥೆಗಳು ಸಂಕಟಕ್ಕೆ ಸಿಲುಕಿವೆ. ಈ ಜಿಲ್ಲೆಗಳ ಸಾಕ್ಷರತೆ ಹೆಚ್ಚಳಕ್ಕೆ ಹಾಗೂ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದ ಸಂಸ್ಥೆಗಳು ಬಾಗಿಲು ಹಾಕುವ ಅಪಾಯಕ್ಕೆ ಬಂದು ನಿಂತಿದೆ. ನಾಡಿನ ಹೆಸರಾಂತ ಲೇಖಕರು, ವಿಜ್ಞಾನಿಗಳಿಗೆ ಅಕ್ಷರ ಜ್ಞಾನ ನೀಡಿದ್ದ ಶಿಕ್ಷಣ ಸಂಸ್ಥೆಗಳೂ ಕಷ್ಟದಲ್ಲಿವೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಸರಕಾರದ ಆದೇಶ ಉರುಳಾಗಿದೆ.

Advertisement

ಏನಿದು ಸಮಸ್ಯೆ?: ಅತ್ತ 65-70 ವರ್ಷ ಶಿಕ್ಷಣ ನೀಡಿದ್ದ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಸಂಕಷ್ಟಕ್ಕೆ ಸ್ವತಃ ಶಿಕ್ಷಣ ಇಲಾಖೆ ನಿಯಮಗಳೇ ಅಡ್ಡಿ. ಕಳೆದ 1960ರ ದಶಕದಲ್ಲಿ ಜಾರಿಗೆ ತರಲಾದ ಶಿಕ್ಷಣ ಕಾನೂನು ಅನುದಾನಿತ ಶಿಕ್ಷಣ ಸಂಸ್ಥಗಳಿಗೆ ಮುಳುವಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವಾಗ ಪ್ರತಿ ತರಗತಿಗೆ ಕನಿಷ್ಠ 25 ಮಕ್ಕಳಾದರೂ ಇರಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ.

ಮಲೆನಾಡು ಜಿಲ್ಲೆಗಳಲ್ಲಿ ಮುಖ್ಯವಾಗಿ ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ನಗರಕ್ಕೆ ಹೊಂದಿಕೊಂಡ ಪ್ರೌಢ ಶಾಲೆಗಳು ಪೇಚಿಗೆ ಸಿಲುಕಿವೆ. ಪೇಟೆಯಿಂದ 6-8 ಕಿಮೀ ದೂರದ ಯಡಳ್ಳಿ, ನೀರ್ನಳ್ಳಿ, 15-20 ಕಿಮೀ ದೂರದ ಸಂಪಖಂಡ, ವಾನಳ್ಳಿ, ಹೆಗಡೆಕಟ್ಟಾದಂತಹ ಅನುದಾನಿತ ಶಾಲೆಗಳೂ ಈ ಪೇಚಿಗೆ ಸಿಲುಕಿವೆ. ಒಂದು ಕಾಲಕ್ಕೆ 60-70 ಮಕ್ಕಳಿರುತ್ತಿದ್ದ ಶಾಲೆಗಳ ತರಗತಿಗಳಲ್ಲಿ ಇಂದು ಮೂರೂ ತರಗತಿಗಳಿಗೆ ಸೇರಿ 60-70 ಮಕ್ಕಳಿದ್ದಾರೆ. ಇದೇ ಕಾರಣವಿಟ್ಟು ಶಾಲೆಗಳಿಗೆ ನೋಟಿಸ್‌ ನೀಡಲಾಗುತ್ತಿದೆ. ಮೊದಲೇ 3-4 ಕಿಮೀ ನಡೆದು ಬರುತ್ತಿದ್ದ ಮಕ್ಕಳಿಗೆ ಇದೂ ಇಲ್ಲದೇ ಹೋದರೆ ಕಷ್ಟವಿದೆ.

ಸುಣ್ಣ ಬೆಣ್ಣೆ!: ಈ ಸಮಸ್ಯೆ ಯಾವುದೇ ಸರಕಾರಿ ಪ್ರೌಢಶಾಲೆಗಳಿಗೆ ಇಲ್ಲ. ಅಲ್ಲಿ ಮಕ್ಕಳು ಎಷ್ಟೇ ಇದ್ದರೂ ಅನುದಾನಿತ ಶಾಲೆಗಳಿಗೆ ಇರುವ ಸಂಖ್ಯಾ ಕೊರತೆ ಕಾಡುವುದಿಲ್ಲ. ಗ್ರಾಮೀಣ ಭಾಗದಲ್ಲಿ ಜನಸಂಖ್ಯೆ ಇಳಿಯುತ್ತಿರುವುದರಿಂದಾಗಿ ಇಂಥಹ ಸಮಸ್ಯೆಗಳು ಹೆಚ್ಚುತ್ತಿವೆ ಎನ್ನಲಾಗಿದೆ.

ಮನಸ್ಸು ಮಾಡಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ದಶಮಾನೋತ್ಸವಕ್ಕೆ ಆಗಮಿಸುತ್ತಿರುವ ಶಿಕ್ಷಣ ಸಚಿವ ಸುರೇಶಕುಮಾರಗೂ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೂ ಈ ಸಮಸ್ಯೆ ಗೊತ್ತಿಲ್ಲದಿಲ್ಲ. ಸರಕಾರ ಸಚಿವ ಸಂಪುಟ ಸಭೆಯಲ್ಲಿ, ಶಾಸನ ಸಭೆಯಲ್ಲಿ ತಿದ್ದುಪಡಿ ತರಬಹುದು. ಮಲೆನಾಡು ಹಾಗೂ ಕರಾವಳಿ ಗುಡ್ಡಗಾಡು ಜಿಲ್ಲೆಯಲ್ಲಿ ತರಗತಿ ಒಂದಕ್ಕೆ 25ಕ್ಕಿದ್ದ ಸಂಖ್ಯೆಯನ್ನು 12ರಿಂದ 15ಕ್ಕೆ ಇಳಿಸಬಹುದು. ಹೀಗೆ ಮಾಡಿದರೆ ಅನೇಕ ಅನುದಾನಿತ ಶಾಲೆಗಳೂ ಉಳಿಯುತ್ತವೆ. ಗ್ರಾಮೀಣ ಭಾಗದ ಮಕ್ಕಳಿಗೂ ಪ್ರೌಢ ಶಿಕ್ಷಣ ಸಿಗಲಿದೆ.

Advertisement

ನಿರ್ವಹಣೆ ಸ್ವ-ಸಹಾಯ ಸಂಘಗಳಿಗೆ ನೀಡಲಿ: ಈಗಾಗಲೇ ಮಕ್ಕಳ ಕೊರತೆಯಿಂದ ಗ್ರಾಮೀಣ ಭಾಗದ ಕಿಪ್ರಾ ಹಂತದ ಕೆಲ ಶಾಲೆಗಳು ಬಾಗಿಲು ಹಾಕಿವೆ. ಇದರ ಕಟ್ಟಡಗಳು ಅನಾಥವಾಗಿದ್ದು, ಸ್ಥಳೀಯ ಯುವಕ ಯುವತಿ ಸಂಘ ಅಥವಾ ಸ್ವ ಸಹಾಯ ಸಂಘಗಳಿಗೆ ನಿರ್ವಹಣೆಗೆ ಬಿಟ್ಟುಕೊಟ್ಟರೆ ಕಟ್ಟಡಗಳು ಕೂಡ ಬಳಕೆಯಲ್ಲಿ ಉಳಿಯಲಿವೆ.

ವರ್ಗಾವಣೆ ನ್ಯಾಯವಾ?: ಈ ಮಧ್ಯೆ ಈ ಬಾರಿ ನಡೆದ ಕಡ್ಡಾಯ ವರ್ಗಾವಣೆಯಲ್ಲಿ 50-55 ವರ್ಷ ಮೇಲ್ಪಟ್ಟ ಮಹಿಳೆಯರಿಗೂ 150 ಕಿಮೀ ಆಚೆಗೂ ವರ್ಗಾವಣೆ ಮಾಡಿದ ಪ್ರಕರಣಗಳು ನ್ಯಾಯಾಲಯದ ಕಟಕಟೆ ಏರಿವೆ. ಮುಂದಿನ ವರ್ಷದಿಂದ 50 ವರ್ಷ ಮೇಲ್ಪಟ್ಟವರಿಗೆ ವರ್ಗಾವಣೆ ಇಲ್ಲ ಎಂದು ಹೇಳಲಾಗಿದ್ದರೂ, ಈಗ ಆದವರ ಕತೆ ಏನು ಎಂಬುದು ಪ್ರಶ್ನೆಯಾಗಿದೆ. ಈ ವರ್ಗಾವಣೆಗೆ ನ್ಯಾಯ ಕೊಡಿಸವಂತೆ ಆಗ್ರಹಿಸಲಾಗಿದೆ.

ಇನ್ನಷ್ಟು ಆಗ್ರಹ: ವಿದ್ಯಾರ್ಥಿಗಳ ಸಂಖ್ಯಾ ಬಲಕ್ಕಿಂತ ತರಗತಿ ಬಲದ ಮೇಲೆ ಶಿಕ್ಷಕರ ನೇಮಕಗೊಳಿಸಬೇಕು. ಗುಡ್ಡಗಾಡು ಜಿಲ್ಲೆಗಳಿಗೆ ಎಲ್ಲ ಶಿಕ್ಷಕರ ನೇಮಕಾತಿ ಗೊಳಿಸಬೇಕು. ಅನುದಾನಿತ ಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರ ಹುದ್ದೆ ಕೂಡ ಭರಣ ಮಾಡಿಕೊಡಬೇಕು.

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next