Advertisement

ಶಾಲೆ ಶುರುವಾದರೂ ಮೊದಲಿನಂತಿರಲ್ಲ! ; ಕೇಂದ್ರ ಸಚಿವ ಪೋಖ್ರಿಯಾಲ್‌ ಸುಳಿವು

08:37 AM May 16, 2020 | Hari Prasad |

ಹೊಸದಿಲ್ಲಿ: ಕೋವಿಡ್ ಮೂರನೇ ಹಂತದ ಲಾಕ್‌ ಡೌನ್‌ ಮುಗಿದು, ಇನ್ನೇನು 4ನೇ ಹಂತಕ್ಕೆ ಕಾಲಿಡುತ್ತಿರುವಾಗ ದೇಶದ ಬಹುತೇಕ ಹೆತ್ತವರು ಮತ್ತು ಮಕ್ಕಳಿಗೆ ‘ಶಾಲೆಗಳು ಆರಂಭವಾಗುವುದು ಯಾವಾಗ’ ಎಂಬ ಪ್ರಶ್ನೆ ಕಾಡುತ್ತಿದೆ.

Advertisement

ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ರನ್ನು ಕೇಳಿದರೆ, ಅವರು ಸದ್ಯಕ್ಕಂತೂ ಶಾಲೆಗಳು ಪುನಾರಂಭಗೊಳ್ಳುವ ಲಕ್ಷಣವಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ.

ಗುರುವಾರ ಶಿಕ್ಷಕರೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದ ಸಚಿವ ನಿಶಾಂಕ್‌, ನಮಗೆ ನಮ್ಮ ವಿದ್ಯಾರ್ಥಿಗಳ ಆರೋಗ್ಯವೇ ಮುಖ್ಯ. ಹಾಗಾಗಿ, ವೈರಸ್‌ನಿಂದಾಗಿ ಉಂಟಾಗಿರುವ ಗೊಂದಲದ ಪರಿಸ್ಥಿತಿಯೆಲ್ಲ ನಿವಾರಣೆಯಾದ ಬಳಿಕವೇ ಶಾಲೆಗಳು ಪುನಾರಂಭಗೊಳ್ಳಲಿವೆ ಎಂದು ಹೇಳಿದ್ದಾರೆ.

ಜತೆಗೆ, ಶಾಲೆ ಆರಂಭವಾದ ಬಳಿಕ ಮಕ್ಕಳ ಆಸನ ವ್ಯವಸ್ಥೆ, ಸಮಯ, ತರಗತಿಗಳ ಮತ್ತಷ್ಟು ವರ್ಗೀಕರಣ ಸೇರಿದಂತೆ ಹಲವು ಬದಲಾವಣೆಗಳು ಆಗಲಿವೆ ಎಂದಿದ್ದಾರೆ.

ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತಿತರ ಉನ್ನತ ಶಿಕ್ಷಣ ಸಂಸ್ಥೆಗಳ ಪುನಾರಂಭ ಕುರಿತು ಈಗಾಗಲೇ ವಿವಿಗಳ ಧನಸಹಾಯ ಆಯೋಗ (ಯುಜಿಸಿ) ನಿರ್ಧಾರ ಘೋಷಿಸಿ ಆಗಿದೆ. ಆದರೆ, ಶಾಲೆಗಳ ಪುನಾರಂಭಕ್ಕೆ ಸಂಬಂಧಿಸಿ ಎನ್‌ಸಿಇಆರ್‌ಟಿ ನಿರ್ಧಾರ ಕೈಗೊಳ್ಳಲಿದೆ ಎಂದರು.

Advertisement

ಹಲವು ನಿಯಮಗಳು: ಶಾಲೆಗಳು ಸದ್ಯಕ್ಕೆ ಆರಂಭವಾಗುವುದು ಅನುಮಾನವೇ ಆಗಿದ್ದರೂ, ಅವುಗಳು ಪುನಾರಂಭಗೊಳ್ಳುವ ಸಂದರ್ಭದಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂಬ ಸೂಚನೆಯನ್ನು ಸಚಿವರು ಶಿಕ್ಷಕರಿಗೆ ನೀಡಿದ್ದಾರೆ.

ಶಾಲೆ ಆರಂಭಗೊಳ್ಳುವ ಮುನ್ನವೇ ಶಾಲಾ ಮಟ್ಟದಲ್ಲಿ ಸಂಬಂಧಪಟ್ಟ ಎಲ್ಲರ ಪಾತ್ರ ಹಾಗೂ ಹೊಣೆಗಾರಿಕೆಗಳನ್ನು ಶಾಲಾ ಆಡಳಿತ ಮತ್ತು ಶಿಕ್ಷಕರು ನಿರ್ಧರಿಸಬೇಕು, ಶಾಲೆಗಳು ಆರಂಭವಾಗುವ ಮೊದಲು ಮತ್ತು ಅನಂತರ ಕೈಗೊಳ್ಳಬೇಕಾದ ಆರೋಗ್ಯ ಹಾಗೂ ನೈರ್ಮಲ್ಯ ಕಾಪಾಡುವ ಕ್ರಮಗಳು, ಇತರೆ ಸುರಕ್ಷತಾ ಮಾನದಂಡಗಳು, ಶಾಲಾ ಕ್ಯಾಲೆಂಡರ್‌ ಬದಲಾವಣೆ ಮತ್ತು ವಾರ್ಷಿಕ ಪಠ್ಯಕ್ರಮಗಳಲ್ಲಿ ಹೊಂದಾಣಿಕೆ ಇತ್ಯಾದಿಗಳನ್ನು ಮೊದಲೇ ನಿಗದಿಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ಜತೆಗೆ, ಲಾಕ್‌ ಡೌನ್‌ ಅವಧಿಯಲ್ಲಿ ಮಕ್ಕಳು ಮನೆ ಆಧಾರಿತ ವ್ಯಾಸಂಗ ವ್ಯವಸ್ಥೆಗೆ ಹೊಂದಿಕೊಂಡಿದ್ದ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಆಗದಂತೆ ಅವರನ್ನು ಔಪಚಾರಿಕ ವ್ಯಾಸಂಗಕ್ಕೆ ಹೊಂದಿಕೊಳ್ಳುವಂತೆ ಮಾಡುವುದು, ಅವರ ಭಾವನಾತ್ಮಕ ಯೋಗಕ್ಷೇಮ ನೋಡಿಕೊಳ್ಳುವುದು ಕೂಡ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ ನಿಶಾಂಕ್‌.

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೂ ಆ್ಯಪ್‌
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗ‌ಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್‌ ಡೌನ್‌ ಲೋಡ್‌ ಮಾಡಿ ಕೊಂಡು, ಕೋವಿಡ್ ವೈರಸ್‌ ಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುತ್ತಿರಬೇಕು ಎಂಬ ಸಲಹೆಯನ್ನೂ ಸಚಿವ ನಿಶಾಂಕ್‌ ನೀಡಿದ್ದಾರೆ. ಜತೆಗೆ, ಶಾಲೆ ಆರಂಭವಾಗುವವರೆಗೂ ಸ್ವಯಂ, ಸ್ವಯಂಪ್ರಭ, ದೀಕ್ಷಾ ಇತ್ಯಾದಿಗಳ ಮೂಲಕ ಆನ್‌ ಲೈನ್‌ ಶಿಕ್ಷಣ ವ್ಯವಸ್ಥೆ ಮುಂದುವರಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next