Advertisement

ಕಲಿಕೆಯಲ್ಲಿ ಹಿಂದುಳಿದವರ ದಾಖಲಾತಿಗೆ ಶಾಲೆಗಳ ಹಿಂದೇಟು

12:59 AM Jun 05, 2019 | Team Udayavani |

ಕಾರ್ಕಳ: ಖಾಸಗಿ ಅನುದಾನಿತ ರಹಿತ ಶಾಲೆಗಳಲ್ಲಿ ಹೆತ್ತವರಿಗೆ ಸಕಾರಣವನ್ನು ನೀಡದೇ ಒತ್ತಾಯ ಪೂರ್ವಕವಾಗಿ ವರ್ಗಾವಣೆ ಪತ್ರ ನೀಡುವ ಪ್ರಮೇಯ ಇದೀಗ ವ್ಯಾಪಕವಾಗಿ ಶಾಲೆಗಳಲ್ಲಿ ಕಂಡುಬರುತ್ತಿದೆ. ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಬೇಕೆಂಬ ಏಕೈಕ ಕಾರಣದಿಂದ ಕಲಿಕೆಯಲ್ಲಿ ಹಿಂದುಳಿದಿರುವ 9ನೇ ತರಗತಿ ವಿದ್ಯಾರ್ಥಿಗಳನ್ನು ಅದೇ ಶಾಲೆಯಲ್ಲಿ 10ನೇ ತರಗತಿಗೆ ಸೇರಿಸಿಕೊಳ್ಳುವಲ್ಲಿ ಕೆಲವೊಂದು ಸಂಸ್ಥೆಗಳ ಮುಖ್ಯಸ್ಥರು ಹಿಂದೇಟು ಹಾಕುತ್ತಿರುವುದನ್ನು ಪ್ರಶ್ನಿಸಿ ಹೆತ್ತವರು ಮಾಡಿಕೊಂಡ ಮನವಿಗೆ ಶಿಕ್ಷಣ ಇಲಾಖೆ ದಿಟ್ಟ ಕ್ರಮ ಕೈಗೊಂಡಿದೆ.

Advertisement

ಪರೋಕ್ಷವಾಗಿ ಮಕ್ಕಳನ್ನು ಶಾಲೆಯಿಂದ ಹೊರ ಹಾಕುತ್ತಿರುವ ಇಂತಹ ಸನ್ನವೇಶ ವ್ಯಾಪಕವಾಗಿ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಮಕ್ಕಳನ್ನು ಮಾನಸಿಕವಾಗಿ ಕೊರಗುವಂತೆ ಮಾಡವುದಲ್ಲದೇ ಮಾನಸಿಕ ಖನ್ನತೆ ಗೊಳಪಡಿಸಿದಂತಾಗುವುದು. ಮಕ್ಕಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಇಂತಹ ಕ್ರಮದ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ತೀರ್ಮಾನ ಕೈಗೊಂಡಿದ್ದು, ಈ ರೀತಿ ವರ್ತಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಆತ್ಮಹತ್ಯೆಗೆ ಯತ್ನ
ಕಾರ್ಕಳದ ಪ್ರತಿಷ್ಠಿತ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿಯೋರ್ವ ಅದೇ ಶಾಲೆಯಲ್ಲಿ 10ನೇ ತರಗತಿ ಕಲಿಯಲು ಮುಂದಾದ ವೇಳೆ ಶಾಲೆ ಸೀಟು ನಿರಾಕರಿಸಿದೆ. ಇದರಿಂದ ನೊಂದ ಆ ವಿದ್ಯಾರ್ಥಿ ಮಲ್ಲಿಗೆ ಕೃಷಿಗೆ ಬಳಸುವ ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಈತ ಕಲಿಕೆಯಲ್ಲಿ ಹಿಂದುಳಿದಿದ್ದಾನೆ ಎಂಬ ಕಾರಣಕ್ಕಾಗಿ ಶಾಲಾ ಮುಖ್ಯಸ್ಥರು ದಾಖಲಾತಿಗೊಳಿಸಲು ನಿರಾಕರಿಸಿದ್ದರು. ಇದೇ ಶಾಲೆಯಲ್ಲಿ ಒಟ್ಟು 3 ವಿದ್ಯಾರ್ಥಿಗಳನ್ನು ದಾಖಲಾತಿಗೊಳಿಸಲು ಶಾಲಾ ಮುಖ್ಯಸ್ಥರು ನಿರಾಕರಿಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಬಳಿಕ ಆ ವಿದ್ಯಾರ್ಥಿಗಳ ಹೆತ್ತವರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿ ದೂರು ನೀಡಿದ್ದು ಬಳಿಕ ಶಾಲೆಯಲ್ಲಿ ಸೀಟು ದೊರೆತಿದೆ.

ನೇರ ಹೊಣೆ
ಈಗಾಗಲೇ ಹಲವಾರು ಸೂಚನೆ/ಮಾರ್ಗದರ್ಶನ ಗಳನ್ನು ಇಲಾಖೆಯ ವತಿಯಿಂದ ನೀಡಿದ್ದರೂ ಕೆಲವೊಂದು ಶಾಲೆಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದುದರಿಂದ ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಲು ತಿಳಿಸಲಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ನಿಯಮಾನುಸಾರ ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರಗಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಆಗು-ಹೋಗುಗಳಿಗೆ ಆಯಾ ವ್ಯಾಪ್ತಿಯ ಉಪ ನಿರ್ದೇಶಕರು (ಆಡಳಿತ) ಕ್ಷೇತ್ರ ಶಿಕ್ಷಣಾ ಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾರತಮ್ಯ ಮಾಡದಂತೆ ಸೂಚಿಸಲಾಗಿದೆ
ಶಾಲೆಗಳು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು, ಮಕ್ಕಳ ಸುರಕ್ಷತೆ ಒದಗಿಸಿ, ಶಾಲಾ ಶೈಕ್ಷಣಿಕ ವಾತಾವರಣವನ್ನು ಉತ್ತಮವಾಗಿರಿಸುವುದು, ಮಕ್ಕಳಿಗೆ ಮಾನಸಿಕವಾಗಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ -2009ರಡಿ ಯಾವುದೇ ಮಕ್ಕಳಿಗೆ ತಾರತಮ್ಯ ಮಾಡದಂತೆ ಸೂಚಿಸಲಾಗಿದೆ.
-ಶಶಿಧರ್‌ ಜಿ.ಎಸ್‌., ಕ್ಷೇತ್ರ ಶಿಕ್ಷಣಾಧಿಕಾರಿ-ಕಾರ್ಕಳ

Advertisement

ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ
ಈ ರೀತಿ ಹೆತ್ತವ‌ರಿಂದ ಕೋರಿಕೆ/ ಮನವಿ ಪತ್ರ ಪಡೆಯದೇ ಒತ್ತಾಯ ಪೂರ್ವಕವಾಗಿ ಶಾಲೆಯಿಂದ ವರ್ಗಾವಣೆ ಪತ್ರ ನೀಡಿ ಮಕ್ಕಳನ್ನು ಶಾಲೆಯಿಂದ ಹೊರ ಹಾಕುವುದು ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್‌ 16ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಯಾವುದೇ ಶಾಲಾ ಮುಖ್ಯಸ್ಥರು/ ಶಿಕ್ಷಕರು/ ಆಡಳಿತ ಮಂಡಳಿಗಳು ಮಕ್ಕಳಿಗೆ ವರ್ಗಾವಣೆ ಪತ್ರ ನೀಡುವುದಾಗಿ ಪದೇ ಪದೇ ಪೋಷಕರಿಗೆ ನೊಟೀಸ್‌ ನೀಡುವುದು ಕಾನೂನಿನ ಪ್ರಕಾರ ಮೌಖೀಕವಾಗಿ ತಿಳಿಸುವುದು ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿದಂತೆ.

– ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next