ಬ್ಯಾಡಗಿ: ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ತಲುಪಲು ಸರ್ಕಾರಿ ಶಾಲೆಯ ಮಕ್ಕಳಿಂದ ಅಸಾಧ್ಯವಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಉಚಿತ ಸೌಲಭ್ಯಗಳಿಗೆ ಮಾನ್ಯತೆ ಇಲ್ಲದಂತಾಗಿದೆ ಎಂಬುದಕ್ಕೆ ವಿದ್ಯಾರ್ಥಿಗಳಿಲ್ಲದೇ ಬಿಕೋ ಎನ್ನುತ್ತಿರುವ ಶಾಲೆಗಳೇ ಸಾಕ್ಷಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕಳವಳ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ವಿದ್ಯಾವಂತರ ಸಂಖ್ಯೆಯನ್ನಾಧರಿಸಿ ಅಭಿವೃದ್ಧಿ ಮಾನದಂಡ ನಿರ್ಣಯವಾಗುತ್ತಿದೆ. ಹೀಗಾಗಿ ಯಾವುದೇ ಲಾಭವಿಲ್ಲದಿದ್ದರೂ ಸಾಕಷ್ಟು ಭರವಸೆಗಳನ್ನಿಟ್ಟು ಸರ್ಕಾರ ಕೋಟಿಗಟ್ಟಲೇ ಹಣವನ್ನು ವ್ಯಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಶೈಕ್ಷಣಿಕ ಪ್ರಗತಿಯನ್ನು ವಿದ್ಯಾರ್ಥಿಗಳು ಮೊಟಕುಗೊಳಿಸಬಾರದು. ಪ್ರತಿಷ್ಠೆಗಾಗಿ ಶೈಕ್ಷಣಿಕ ಪ್ರಮಾಣಪತ್ರ ಪಡೆಯುವುದನ್ನು ನಿಲ್ಲಿಸಬೇಕು ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳು, ದೇಶದ ಜನರಿಗೆ ಶೈಕ್ಷಣಿಕ ಸ್ವಾತಂತ್ರ ಕೊಡಿಸುವ ಮೂಲಕ ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ಸರ್ಕಾರಕ್ಕೆ ಅಪ್ರತ್ಯಕ್ಷವಾಗಿ ಸಹಕರಿಸುತ್ತಿವೆ, ಹೆಚ್ಚು ಶಿಕ್ಷಣವಂತರನ್ನು ಹೊಂದಿರುವ ಮುಂದುವರಿದ ಬಹುತೇಕ ರಾಷ್ಟ್ರಗಳು ಇಂದು ವಿಶ್ವವನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವಷ್ಟು ಬಲಶಾಲಿಯಾಗಿವೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ವಿದ್ಯಾವಂತರ ಪರಿಶ್ರಮ ಎಂದು ತಿಳಿಸಿದರು.
ಮುಚ್ಚುವ ಹಂತಕ್ಕೆ ಶಾಲೆಗಳು: ಕ್ಯಾನ್‌ಕೋರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಿಶನಕುಮಾರ ಮಾತನಾಡಿ, ಸರ್ಕಾರಿ ಶಾಲೆಗಳಿಂದಲೇ ದೇಶದ ಮಕ್ಕಳು ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಿದ್ದರೇ ದೇಶದ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಕರವಾಗಿರುತ್ತಿತ್ತು, ಸೌಲಭ್ಯಗಳ ಕೊರತೆಯಿಂದ ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಕೆಲವೆಡೆ ಮುಚ್ಚುವ ಹಂತಕ್ಕೆ ತಲುಪಿವೆ ಎಂದು ವಿಷಾದಿಸಿದರು.
ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಅತ್ತಿಗೇರಿ ಹಾಗೂ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 10ನೇ ರ್‍ಯಾಂಕ್ ಪಡೆದು ಸಾಧನೆಗೈದ ಉಮೇಶ್ ಬ್ಯಾಟಪ್ಪನವರ ಹಾಗೂ ಇನ್ನಿತರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಲಲಿತಾ ಬ್ಯಾಟಪ್ಪನವರ, ನಿವೃತ್ತ ಪ್ರೊ| ಡಾ| ಪ್ರೇಮಾನಂದ ಲಕ್ಕಣ್ಣನವರ, ರಾಜೇಂದ್ರ ಕುಂಠೆ, ಗದಿಗೆಯ್ಯ ಹಾವೇರಿಮಠ, ಅಶೋಕ ಬಣಕಾರ, ಶಿವ ಪಾಲನಕರ, ಯು. ಎಸ್.ರುದ್ರದೇವರಮಠ, ಮಲ್ಲಿಕಾರ್ಜುನ ಬಳ್ಳಾರಿ, ಬಿ.ಸಿ.ಹಾವೇರಿಮಠ, ಎಲ್.ಎಸ್. ಹರಿಯಾಳ, ವಿ.ಎಫ್.ಕನ್ನಮ್ಮನವರ, ಎಸ್. ಎಚ್.ಗುಡಗೂರ, ಎ.ಬಿ.ಕುಲಕರ್ಣಿ, ಆಡಳಿತಾಧಿಕಾರಿ ವಿ.ವಿ.ಪಾಟೀಲ, ಮುಖ್ಯಶಿಕ್ಷಕರಾದ ಎಸ್.ಪಿ.ಚರಂತಿಮಠ, ಮಲ್ಲಿಕಾರ್ಜುನ ಮೋರೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪ್ರಶಾಂತ್ ಗೊರವರ ಸ್ವಾಗತಿಸಿದರು. ಎ.ಟಿ.ಪೀಠದ ನಿರೂಪಿಸಿದರು. ನಿಂಗಪ್ಪ ಯಲಿಮಣ್ಣನವರ ವಂದಿಸಿದರು.