Advertisement

ದುಸ್ಥಿತಿಯಲ್ಲಿ ಶತಮಾನ ಕಂಡ ಶಾಲೆ

12:41 PM Jul 05, 2017 | |

ಹೂವಿನಹಿಪ್ಪರಗಿ: ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇದ್ದೂ ಇಲ್ಲದಂತಿರುವ ಶೌಚಾಲಯ, ಸೋರುತ್ತಿರುವ ಕೋಣೆಗಳು, ಮುರಿದ ಕಿಟಕಿಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊತ್ತು ನಿಂತಿರುವ ಈ ಮಾದರಿ ಶಾಲೆ ಕಥೆಯನ್ನು ಕೇಳ್ಳೋಣ ಬನ್ನಿ. ಶತಮಾನ ಕಂಡ ಈ ಶಾಲೆಯಲ್ಲಿ ಎಂಟು ಶಿಕ್ಷಕರು
ಕಾರ್ಯ ನಿರ್ವಹಿಸುತ್ತಿದ್ದು 1ರಿಂದ 7ನೇ ತರಗತಿವರೆಗೆ 220 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

Advertisement

ಸೋರುವ ಕೊಠಡಿಗಳು: ಶಾಲೆಯಲ್ಲಿ ಒಟ್ಟು 14 ಕೊಠಡಿಗಳಿವೆ. ಅದರಲ್ಲಿ ಮೂರು ಕೊಠಡಿಗಳು ದುಸ್ಥಿತಿಯಲ್ಲಿದ್ದ ಕಾರಣ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆಗಾಲದ ಈ ದಿನಗಳಲ್ಲಿ ಮಳೆ ನೀರಲ್ಲಿಯೇ ಒಂದು ಕೋಣೆಯಲ್ಲಿ ಪಾಠ ಬೋಧನೆ ಮಾಡಬೇಕಾಗಿದೆ. ಹೀಗಾಗಿ ಕೇವಲ ಏಳು ಕೋಣೆಗಳಲ್ಲಿ ಒಂದರಿಂದ ಏಳನೇಯ ತರಗತಿಗಳನ್ನು ಪಾಠ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಳೆ ಬಂತೆಂದರೆ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಗತಿ ದೇವರೆ ಗತಿ. ಎಲ್ಲಿ ಕೂಡಬೇನ್ನುವುದು ಸಹ ತಿಳಿಯದ ಮಾತಾಗುತ್ತದೆ. 

ಶಿಕ್ಷಕರ ಕೊರತೆ: ದೈಹಿಕ ಶಿಕ್ಷಕರು ಈ ಶಾಲೆಯಿಂದ ತೆರಳಿ ಎರಡು ವರ್ಷವಾದರೂ ಬೇರೆ ಶಿಕ್ಷಕರ ನಿಯುಕ್ತಿಯಾಗದೇ ಇಲ್ಲಿಯ ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. 

ಶೌಚಾಲಯದ ಕೊರತೆ: ಶಾಲೆ ಆವರಣದಲ್ಲಿರುವ  ಶೌಚಾಲಯದ ಕಟ್ಟಡಗಳು ಬಳಕೆಗೆ ಯೋಗ್ಯವಿರದೇ ಹಲವು ದಶಕಗಳಾದರೂ ಶಿಕ್ಷಣ ಇಲಾಖೆ ಇತ್ತ ಕಡೆ ಗಮನ ಹರಿಸಿಲ್ಲ. ಸಮೂಹ ಸಂಪನ್ಮೂಲ ಕೇಂದ್ರದ ಪಕ್ಕವೇ ಶೌಚಾಲಯಗಳ ಕಟ್ಟಡವಿದ್ದರೂ ಇಲಾಖೆ ಕಣ್ಣಿಗೆ ಬೀಳದಿರುವುದು ಖೇದಕರ ಸಂಗತಿ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದೂರದ ಬಸ್‌ ನಿಲ್ದಾಣಕ್ಕೆ ತೆರಳಿ ಶೌಚ ಪೂರೈಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಶಾಲೆಗಳಲ್ಲಿ
ಶೌಚಾಲಯ ಕಡ್ಡಾಯವೆಂದು ಸರಕಾರ ಸಾರಿ ಸಾರಿ ಹೇಳಿದರೂ ಇಲಾಖೆಯಲ್ಲಿಯೇ ಸಮರ್ಪಕವಾದ ಅನುಷ್ಠಾನ ಆಗದಿರುವುದು ದುರಂತವೇ ಸರಿ. ಹೀಗಾಗಿ ಶಾಲಾ ಆವರಣದಲ್ಲಿಯೇ ಮೂತ್ರ ವಿಸರ್ಜನೆ ಈ ಶಾಲೆಯಲ್ಲಿ ಹಲವು ವರ್ಷಗಳಿಂದ ನಡೆದು ಬಿಟ್ಟಿದೆ. 

ಬೆಂಚ್‌ಗಳ ಕೊರತೆ: ಈ ಶಾಲೆಯಲ್ಲಿ  ವಿದ್ಯಾರ್ಥಿಗಳು ಕೂಡುವ ಬೆಂಚುಗಳು ಕೇವಲ 6ರಿಂದ 7ನೇ ತರಗತಿ ಮಕ್ಕಳಿಗಿದ್ದು 1ರಿಂದ 5ನೇ ತರಗತಿ ಮಕ್ಕಳಿಗೆ ಬೆಂಚುಗಳಿಲ್ಲದೇ ಮಕ್ಕಳು ನೆಲದ ಮೇಲೆ ಕೂಡಬೇಕಾಗಿದೆ. ಶಾಲಾ
ಪ್ರವೇಶದ್ವಾರವಿಲ್ಲದೇ ದನ ಕರುಗಳು ಸರಾಗವಾಗಿ ನುಗ್ಗಿ ದಾಂಧಲೇ ಮಾಡುತ್ತಿವೆ. 

Advertisement

ಅವಶ್ಯಕತೆಗಳು: ಶಾಲಾ ಆವರಣದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ ಸುಸಜ್ಜಿತವಿಲ್ಲದೇ ತುಂಬಾ ತೊದರೆಯಾಗಿದೆ. ಟ್ಯಾಂಕ್‌ ಮೇಲಿನಿಂದ ನೀರನ್ನು ಕೊಡದಿಂದ ತುಂಬಿ ತೆಗೆದುಕೊಳ್ಳಬೇಕಾಗಿದೆ. ಅದಕ್ಕೊಂದುನಲ್ಲಿ
ಕೂಡಿಸುವ ವ್ಯವಸ್ಥೆಯಾಗಬೇಕಾಗಿದೆ. ಶಾಲೆ ಸುತ್ತಲೂ ಪೂರ್ತಿ ತಡೆಗೋಡೆ ಇದ್ದರೂ, ಅದರಳತೆ ಕಡಿಮೆಯಾಗಿದ್ದರಿಂದ ವಿದ್ಯಾರ್ಥಿಗಳು, ಕಿಡಿಗೇಡಿಗಳು ಗೋಡೆ ಜಿಗಿದು ಆವರಣವನ್ನು ಗಲೀಜು ಮಾಡುತ್ತಾರೆ. ಹೀಗಾಗಿ ತಡೆಗೋಡೆಯನ್ನು
ಇನ್ನೂ ಎರಡು ಅಡಿ ಎತ್ತರಿಸುವುದು ಅನಿವಾರ್ಯವಾಗಿದೆ.

ಶಾಲೆಯ ಕೆಲವು ಕೋಣೆಗಳ ಕಿಡಿಕಿ ಹಾಗೂ ಬಾಗಿಲುಗಳು ದುರಸ್ತಿಯಲ್ಲಿದ್ದು ಕಬ್ಬಿಣದ ಸರಳಿಗಳು ಮುರಿದು ಹೋಗಿವೆ. ಈ ಶಾಲೆಯ ಮುಖ್ಯಗುರುಗಳು ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವ ಅನೇಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರಿಂದ ಇಲ್ಲಿವರೆಗೆ ಎರಡು ಕೋಣೆಗಳಿಗೆ ಬಣ್ಣ ಕೊಡಿಸುವಲ್ಲಿಯಶಸ್ವಿಯಾಗಿದ್ದಾರೆ. ಈಗಾಗಲೇ ನಾಲ್ವರು ಹಳೆ ವಿದ್ಯಾರ್ಥಿಗಳಿಂದ ಪ್ರತಿ ಕೋಣೆಗೆ 11,000 ರೂ. ತೆಗೆದುಕೊಂಡು ಎರಡು ಕೋಣೆಗಳಿಗೆ ಬಣ್ಣ ಬಡಿಸಿದ್ದಾರೆ. ಮುಂದಿನ 
ದಿನಗಳಲ್ಲಿ ಇನ್ನೂ ಆರು ಕೋಣೆಗಳಿಗೆ ಬಣ್ಣ, ಇಡ್ಲಿ ಪಾತ್ರೆ, ದ್ವಾರಬಾಗಿಲು, ಒಂದು ಲಕ್ಷ ರೂ. ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ತೆರೆಯಲು ಹಳೆ ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರಿಂದ ಪ್ರಾಯೋಜಕತ್ವ ಪಡೆಯಲು ಮವೊಲಿಸುವೆ. ಈಗಾಗಲೇ 50 ವಿದ್ಯಾರ್ಥಿಗಳನ್ನು ಸೇರಿಸಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದೆ ಎನ್ನುತ್ತಾರೆ ಮುಖ್ಯಗುರುಗಳು. ಇಲ್ಲಿಯ ಮುಖ್ಯಗುರುಗಳು ತಾವು ಮೊದಲಿದ್ದ ಶಾಲೆಯಿಂದ ಇಡ್ಲಿ ಕುಕ್ಕರ್‌ ತಂದು ಪ್ರತಿ
ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಇಡ್ಲಿ ನೀಡುತ್ತಾರೆ. ಶಾಲಾ ಆವರಣದಲ್ಲಿ 60ಕ್ಕೂ ಅಧಿ ಕ ಸಸಿಗಳನ್ನು ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಸಿ ಅವುಗಳ ಪೋಷಣೆಗೆ ನಿತ್ಯ ಶ್ರಮಿಸುತ್ತಾರೆ. 

ಈ ಶಾಲೆಯ ಶೌಚಾಲಯಗಳ ದುರಸ್ತಿಗೆ ಪಂಚಾಯತ್‌ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತಾಗಿ ಯಾವುದೇ ಕೆಲಸವಾಗಿಲ್ಲ ಎಂದು ಸಿ.ಆರ್‌.ಪಿ ಮಲ್ಲಿಕಾರ್ಜುನ ರಾಜನಾಳ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಮಾದರಿ ಶಾಲೆ ಮಾಡುವುದೇ ನನ್ನ ಮುಖ್ಯ ಕನಸಾಗಿದೆ ಎನ್ನುತ್ತಾರೆ ಮುಖ್ಯಗುರು ಎಸ್‌.ಬಿ. ಚೌಧರಿ. ಶಿಕ್ಷಣ ಇಲಾಖೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕೋಟ್ಯಂತರ ರೂ. ಅನುದಾನ ಬರುತ್ತದೆ. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ
ಪ್ರಗತಿಗೆ ಹಾಗೂ ಶಾಲೆಗಳಲ್ಲಿ ಮೂಲ ಸೌಲಭ್ಯ ವೃದ್ಧಿಗೆ ಹಲವು ಯೋಜನೆ ರೂಪಿಸಿದ್ದರೂ ಇನ್ನೂ ಗ್ರಾಮೀಣ ಶಾಲೆಗೆ ತಲುಪುತ್ತಿಲ್ಲ . ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿ
ಒಂದು ತಿಂಗಳಾದರೂ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಹೋರಾಟ ಮಾಡುವ ಪೂರ್ವದಲ್ಲಿಯೇ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಗುರುರಾಜ ಕನ್ನೂರ

Advertisement

Udayavani is now on Telegram. Click here to join our channel and stay updated with the latest news.

Next