ಬೆಂಗಳೂರು: ಪಠ್ಯದಲ್ಲಿನ ವಿವಾದಾತ್ಮಕ ಅಂಶಗಳನ್ನು ಗುರುತಿಸಿ, ಸರಕಾರಕ್ಕೆ ವರದಿ ಸಲ್ಲಿಸಲು ರೂಪಿಸಿದ ಸಮಿತಿಯು ತನ್ನ ವರದಿಯನ್ನು ಶಿಕ್ಷಣ ಸಚಿವರಿಗೆ ನೀಡಿದೆ. ಪಠ್ಯ ಪುಸ್ತಕದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ತೆಗೆದು ಹಾಕಲು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಪಠ್ಯದಲ್ಲಿರುವ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಅಂಶಗಳನ್ನು ಗುರುತಿಸಲು ರೂಪಿಸಿರುವ ಸಮಿತಿಯು ತನ್ನ ವರದಿ ನೀಡಿದ್ದು, ಅದರಲ್ಲಿ ಟಿಪ್ಪು ಸುಲ್ತಾನನ ವೈಭವೀಕರಣ ಸೇರಿದಂತೆ ಕೆಲವು ಸೂಕ್ಷ್ಮ ಅಧ್ಯಾಯಗಳನ್ನು ತೆಗೆದುಹಾಕುವುದು, ಇದರೊಂದಿಗೆ ಕೆಲ ಹೊಸ ವಿಚಾರಗಳನ್ನು ಸೇರಿಸಲು ಸಲಹೆ ನೀಡಿದೆ ಎನ್ನಲಾಗಿದೆ. ಟಿಪ್ಪು ಸುಲ್ತಾನನ ವಿಚಾರವನ್ನು ಸಂಪೂರ್ಣವಾಗಿ ಪಠ್ಯದಿಂದ ಕೈಬಿಟ್ಟಿಲ್ಲ ಆದರೆ ಟಿಪ್ಪು ಸುಲ್ತಾನನ ವೈಭವೀಕರಣವನ್ನು ಕೈಬಿಟ್ಟಿದೆ ಎಂದು ವರದಿ ತಿಳಿಸಿದೆ.
ವೈದಿಕ ಧರ್ಮದ ದೋಷಗಳಿಂದಾಗಿ ಅನೇಕ ಹೊಸ ಧರ್ಮಗಳು ಉದಯವಾದವು ಎಂಬ ಅಂಶವಿದ್ದ ಆರನೇ ತರಗತಿ ಸಮಾಜ ವಿಜ್ಞಾನ ವಿಷಯ ಸೇರಿದಂತೆ 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರವು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಬದುಕಲು ಸಾಧ್ಯವಿಲ್ಲ: ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಸಂಸದೆ
ಈಶಾನ್ಯ ರಾಜ್ಯಗಳನ್ನು ಆಳಿದ ಅಹೋಮ ರಾಜವಂಶದ ಪಾಠ, ಕಾಶ್ಮೀರ ಕಣಿವೆ ಮತ್ತು ಭಾರತದ ಕೆಲವು ಉತ್ತರ ಭಾಗಗಳಲ್ಲಿ ಆಳಿದ ಕಾರ್ಕೋಟ ರಾಜವಂಶದ ಬಗ್ಗೆ, ಕರ್ನಾಟಕದ ಬಾಬಾಬುಡನ್ ಗಿರಿಯ ಜೊತೆಗೆ ದತ್ತಪೀಠದ ವಿಚಾರಗಳನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.