ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ನಿಯಮ ಬಾಹಿರವಾಗಿ ವಿವಿಧ ಕೆಲಸಗಳ ಮೇಲೆ ನಿಯೋಜನೆ ಮಾಡುತ್ತಿರುವುದು ಗಮನಕ್ಕೆ ಬಂದ ಬೆನ್ನಲ್ಲೇ ಮಾತೃ ಇಲಾಖೆಯಲ್ಲಿ ಮುಂದುವರಿಯು ವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಸೂಚನೆ ಕೊಟ್ಟ ಬಳಿಕವೂ ನಿಯಮ ಬಾಹಿರವಾಗಿ ನಿಯೋಜನೆ ಮಾಡಿದರೆ ಅಂತಹ ಜಿಲ್ಲಾ ಉಪನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ| ಆರ್.ವಿಶಾಲ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ನಿಯಮ ಬಾಹಿರವಾಗಿ ವಿವಿಧ ಕೆಲಸಗಳ ಮೇಲೆ ನಿಯೋಜನೆ ಮಾಡುತ್ತಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿತ್ತು. ತತ್‌ಕ್ಷಣ ಎಚ್ಚೆತ್ತುಕೊಂಡ ಇಲಾಖೆಯು ರಾಜ್ಯದ ಎಲ್ಲ ಉಪನಿರ್ದೇಶಕರು ನಿಯಮಬಾಹಿರ ವಾಗಿ ಮಾಡಿರುವ ಎಲ್ಲ ನಿಯೋಜನೆ ಗಳನ್ನು ಕೂಡಲೇ ರದ್ದುಪಡಿಸಬೇಕು. ಜತೆಗೆ ಕೈಗೊಂಡ ಕ್ರಮದ ಬಗ್ಗೆ ಕೂಡಲೇ ಕಚೇರಿಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದೆ.
“ಮೌಲ್ಯಾಂಕನ ಪರೀಕ್ಷೆ’ಗೆ ವಿರೋಧ
ಬೆಂಗಳೂರು: 3: 5 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ನಡೆಸಲು ನಿರ್ಧರಿಸಿದ್ದ ಮೌಲ್ಯಾಂಕನ ಪರೀಕ್ಷೆ ವಿರುದ್ಧ ರುಪ್ಸಾ ಸಂಘಟನೆ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದೆ.
ಕೂಡಲೇ ಮೌಲ್ಯಾಂಕನ ಪರೀಕ್ಷೆ ನಡೆಸುವ ಕ್ರಮದಿಂದ ಹಿಂದೆ ಸರಿಯಬೇಕು. ಈ ವಿಷಯವನ್ನು ಪ್ರಶ್ನಿಸಿ ಸೋಮವಾರ ಕೋರ್ಟ್‌ನಲ್ಲಿ ದಾವೆ ಹೂಡಲು ಮುಂದಾಗಿದ್ದೇವೆ. ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಪರೀಕ್ಷೆ ಮಾಡಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ ಎಂದು ರುಪ್ಸಾ ಸಂಘಟನೆ ಆರೋಪಿಸಿದೆ.