ಬೆಂಗಳೂರು: ಶಾಲೆಗಳಿಗೆ ನೀಡಿದ್ದ ಮಧ್ಯಾಂತರ ರಜೆ ಮುಗಿದಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಗೆ ನ.1ರಂದು ಎಲ್ಲ ಶಿಕ್ಷಕರು ಹಾಜರಾಗಬೇಕು, 2ರಿಂದ ಶಿಕ್ಷಕರು ಶಾಲೆಗೆ ಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಾಲಾರಂಭಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಅಥವಾ ಸರಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವಿದ್ಯಾಗಮವೂ ತಾತ್ಕಾಲಿಕವಾಗಿ ರದ್ದಾಗಿದೆ. ಹೀಗಾಗಿ ಶಿಕ್ಷಕರು ಶಾಲೆಗೆ ಬಂದು ಯಾವ ಕಾರ್ಯ ಮಾಡಬೇಕು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.
ವಿದ್ಯಾಗಮ ಚಟುವಟಿಕೆಯಲ್ಲಿ ಈವರೆಗೆ ಭಾಗಿಯಾಗಿರುವ ವಿದ್ಯಾರ್ಥಿಗಳ ಕಲಿಕಾ ಸಾಧನೆ ಏನು ಮತ್ತು ಕಲಿಕೆಯಲ್ಲಿನ ಕೊರತೆ ಏನು ಎಂಬುದನ್ನು ಪಟ್ಟಿ ಮಾಡಬೇಕು. ಶಾಲಾರಂಭದ ಬಳಿಕ ಕಲಿಕಾ ಕೊರತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲು ಸಾಧ್ಯವಾಗುತ್ತದೆ. ಬೋಧನಾ ಕಲಿಕಾ ಯೋಜನೆ, ಕಲಿಕಾ ಸಾಮಗ್ರಿ ತಯಾರಿಸುವುದು ಸಹಿತ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಿರುವ ಕಾರ್ಯಗಳನ್ನು ಶಾಲೆಗೆ ಬಂದು ನಡೆಸಬಹುದಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ;ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಫಲಿತಾಂಶಕ್ಕೆ ತಡೆ
ಸೋಮವಾರ ಸಭೆ?
ಶಾಲಾರಂಭಕ್ಕೆ ಸಂಬಂಧಿಸಿ ನ.2ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಹಿತ ಹಿರಿಯ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸುವ ಸಾಧ್ಯತೆಯಿದೆ.