ಇಂಫಾಲ: ಜನಾಂಗೀಯ ಹಿಂಸಾಚಾರದಿಂದ ಮಣಿಪುರದಲ್ಲಿ ಕಳೆದ ಎರಡು ತಿಂಗಳಿಂದ ಮುಚ್ಚಲಾಗಿದ್ದ ಶಾಲೆಗಳು ಬುಧವಾರ ಪುನರಾರಂಭಗೊಂಡಿವೆ. ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ತುಂಬ ಕಡಿಮೆಯಿತ್ತು. ಆದರೆ, ಶಾಲೆಗಳನ್ನು ಪುನರಾರಂಭಿಸುವ ಮಣಿಪುರ ಸರ್ಕಾರದ ಕ್ರಮ ವನ್ನು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ.
1ರಿಂದ 8ನೇ ತರಗತಿಯ ಶಾಲೆಗಳನ್ನು ಜು.5ರಿಂದ ಪುನರಾರಂಭಿಸಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೋಮವಾರ ಘೋಷಿಸಿದ್ದರು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಪುನಃ ವಿಕೋಪಕ್ಕೆ ಹೋದರು ಕೂಡ ಪ್ರತಿ ದಿನ ಕೆಲ ಗಂಟೆ ಗಳಾದರೂ ಶಾಲೆಗಳನ್ನು ತೆರೆಯಲು ಮಣಿಪುರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅನೇಕ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
“ನಾನು ತುಂಬ ಸಂತೋಷವಾಗಿದ್ದೇನೆ. ಎರಡು ತಿಂಗಳ ಕಾಯುವಿಕೆಯ ನಂತರ ಕೊನೆಗೂ ಶಾಲೆಗಳು ತೆರೆದಿವೆ. ಇದರಿಂದ ನಮ್ಮ ಸ್ನೇಹಿತರು ಮತ್ತು ಶಿಕ್ಷಕರನ್ನು ಭೇಟಿಯಾಗಲು ಸಾಧ್ಯವಾಯಿತು. ಮುಖ್ಯವಾಗಿ, ಹೊಸ ವಿಷಯಗಳನ್ನು ನಾವು ಕಲಿಯುತ್ತೇವೆ” ಎಂದು ವಿದ್ಯಾರ್ಥಿ ಲಿಂಥಾಯ್ ಅಭಿಪ್ರಾಯಪಟ್ಟಿದ್ದಾರೆ.
“ಶಾಲೆಗಳು ಹೀಗೆಯೇ ಮುಂದುವರಿಯುವ ನಿಟ್ಟಿನಲ್ಲಿ ಪರಿಸ್ಥಿತಿ ಮೊದಲಿನಂತೆ ಆಗಲಿ ಎಂಬುದನ್ನು ಬಯಸುತ್ತೇವೆ. ಶಿಕ್ಷಣವೇ ಎಲ್ಲಾ ಪ್ರಗತಿಗೆ ಮೂಲ. ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವಂತಾಗಲಿ ಎಂದು ನಾವು ಆಶಿಸುತ್ತೇವೆ” ಎಂದು ಪೋಷಕರಾದ ಬಾಬೇಶ್ ಶರ್ಮಾ ಹೇಳಿದ್ದಾರೆ.
ಮೇ 3ರಂದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಉಂಟಾದ ಜನಾಂಗೀಯ ಹಿಂಸಾಚಾರದಿಂದ ಇದುವರೆಗೆ 115ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 310 ನಾಗರಿಕರು ಗಾಯಗೊಂಡಿದ್ದಾರೆ. ಸದ್ಯ ಪರಿಸ್ಥಿತಿ ಕೊಂಚ ಸುಧಾರಿಸಿದೆ.