Advertisement

ಜನವರಿ ಬಳಿಕವೇ ಶಾಲೆ ? ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಿರ್ಧಾರ

12:02 AM Nov 24, 2020 | sudhir |

ಬೆಂಗಳೂರು: ಶಾಲಾರಂಭದ ಕುರಿತು ಮೂಡಿದ್ದ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ಕೊರೊನಾ ಎರಡನೇ ಅಲೆ ವ್ಯಾಪಿ ಸುವ ಭೀತಿಯ ಹಿನ್ನೆಲೆಯಲ್ಲಿ ಡಿ. 31ರ ವರೆಗೆ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸುವುದಿಲ್ಲ ಎಂದು ಸರಕಾರ ಸೋಮವಾರ ಘೋಷಿಸಿದೆ.

Advertisement

ಡಿಸೆಂಬರ್‌ 3ನೇ ವಾರದಲ್ಲಿ ಪರಿಸ್ಥಿತಿ ಅವಲೋಕಿಸಿ ಖಚಿತ ನಿರ್ಧಾರಕ್ಕೆ ಬರಲಿದ್ದು, ಅಲ್ಲಿ ವರೆಗೆ ಆನ್‌ಲೈನ್‌ ತರಗತಿ ಹಾಗೂ ಸಂವೇದಾ, ಯೂ-ಟ್ಯೂಬ್‌ ಕ್ಲಾಸ್‌ಗಳು ಮುಂದುವರಿಯಲಿವೆ ಎಂದು ಸರಕಾರ ಹೇಳಿದೆ.

ಶಾಲೆಗಳ ಆರಂಭ ಸಂಬಂಧ ವಿಧಾನಸೌಧದಲ್ಲಿ ಸೋಮವಾರ ಸಿಎಂ ಯಡಿಯೂರಪ್ಪ ಅವರು ಶಿಕ್ಷಣ, ಆರೋಗ್ಯ ಸಹಿತ ವಿವಿಧ
ಇಲಾಖೆಗಳ ಸಭೆ ನಡೆಸಿದರು. ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮತ್ತು ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಭಾಗವಹಿಸಿದ್ದರು.

ಸಭೆಯಲ್ಲಿ ಡಿಸೆಂಬರ್‌ ಅಂತ್ಯದ ವರೆಗೆ ಪ್ರಾಥಮಿಕ, ಪ್ರೌಢಶಾಲೆ, ಪಿಯು ತರಗತಿ ಆರಂಭ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು. ಜತೆಗೆ ಡಿಸೆಂಬರ್‌ 3ನೇ ವಾರದಲ್ಲಿ ಇನ್ನೊಮ್ಮೆ ಸಭೆ ಸೇರಿ ತಜ್ಞರ ಸಲಹೆ, ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಕೋವಿಡ್‌ ನಿರ್ವಹಣೆಗೆ ರಚಿಸಿರುವ ತಜ್ಞರ ಸಲಹಾ ಸಮಿತಿಯ ಶಿಫಾರಸಿನಂತೆ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದರು.

ಎರಡನೇ ಅಲೆ ಆತಂಕ
ರಾಜ್ಯದಲ್ಲಿ ಎಂಜಿನಿಯರಿಂಗ್‌, ಪದವಿ ತರಗತಿಗಳು ಆರಂಭವಾಗಿದ್ದರೂ ಶೇ. 5ರಷ್ಟು ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ಬರುತ್ತಿಲ್ಲ.

Advertisement

ಕಾಲೇಜು ಆರಂಭ, ಕೋವಿಡ್‌ ಎರಡನೇ ಅಲೆ ಯಾವುದೇ ಸಂದರ್ಭದಲ್ಲಿ ಜಾಸ್ತಿಯಾಗ ಬಹುದಾಗಿದ್ದು, ಪುಟ್ಟ ಮಕ್ಕಳಿಗೆ ಸಮಸ್ಯೆ ಆಗಬಾರದೆಂದು ತಜ್ಞರು ಡಿಸೆಂಬರ್‌ ಅಂತ್ಯದ ವರೆಗೂ ಶಾಲಾರಂಭ ಬೇಡ ಎಂದಿದ್ದಾರೆ. ಮುಂದೆ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಿಎಂ ಹೇಳಿದರು.

ಈಗ ಶಾಲೆ ಆರಂಭಿಸಿದರೆ ಮಕ್ಕಳಿಗೆ ಸಮಸ್ಯೆ ಯಾಗುವ ಸಾಧ್ಯತೆಯಿದೆ ಎಂದು ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಗಿಯಾದ ವೈದ್ಯಕೀಯ ಮತ್ತು ಆರೋಗ್ಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಸಭೆಗೆ ಮನದಟ್ಟು ಮಾಡಿದರು. ಶಾಲಾರಂಭದ ಬಗ್ಗೆ ನಿರ್ಧರಿಸಲು ಸಭೆ ಕರೆದಿಲ್ಲ, ಚರ್ಚೆ ಮಾಡಲು ಸಭೆ ಮಾಡಿದ್ದೇವೆ. ತಜ್ಞರ ಸಮಿತಿ ರವಿವಾರವೇ ಶಿಫಾರಸು ನೀಡಿದೆ. ತಜ್ಞರ ಶಿಫಾರಸಿಗೂ ಸಭೆಗೂ ಸಂಬಂಧವಿಲ್ಲ ಎಂದು ಸಚಿವ ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಎಲ್ಲರೊಂದಿಗೂ ಚರ್ಚೆ
ಶಾಲೆ ಆರಂಭಿಸಬೇಕು ಮತ್ತು ಬೇಡ ಎಂಬ ಎರಡು ವರ್ಗದ ಒತ್ತಾಯದ ಹಿನ್ನೆಲೆಯಲ್ಲಿ ಮಕ್ಕಳು, ಪೋಷಕರು, ಎಸ್‌ಡಿಎಂಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಿ ಸಿಎಂಗೆ ಸಲ್ಲಿಸಿದ್ದೆವು. ಸಿಎಂ ಸಮ್ಮುಖದಲ್ಲೇ ತೀರ್ಮಾನ ಆಗಬೇಕು ಎಂಬ ಹಿನ್ನೆಲೆಯಲ್ಲಿ ಸಭೆ ನಡೆದಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಹೆಚ್ಚುವರಿ ಶುಲ್ಕ ಕೇಳಿದರೆ ದೂರು ನೀಡಿ
ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳುವಂತಿಲ್ಲ. ಆನ್‌ಲೈನ್‌ ಶಿಕ್ಷಣಕ್ಕೆ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆನ್‌ಲೈನ್‌ ಶಿಕ್ಷಣಕ್ಕಾಗಿ ಹೆಚ್ಚುವರಿ ಶುಲ್ಕ ಕೇಳುವಂತಿಲ್ಲ, ಆನ್‌ಲೈನ್‌ ಶಿಕ್ಷಣ ಪಡೆಯಲೇಬೇಕು ಎಂದು ಬಲವಂತ ಮಾಡುವಂತಿಲ್ಲ. ಶಾಲಾ ಆಡಳಿತ ಮಂಡಳಿಗಳು ಹೆಚ್ಚುವರಿ ಶುಲ್ಕ ಕೇಳಿದರೆ ಹೆತ್ತವರು ದೂರು ನೀಡಬಹುದು ಎಂದೂ ಅವರು ಹೇಳಿದ್ದಾರೆ.

ಸಮಿತಿ ಹೇಳಿದ್ದೇನು?
1 ವಿವಿಧ ರಾಜ್ಯಗಳಲ್ಲಿ ಕೊರೊನಾ 2ನೇ ಅಲೆ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಈಗ ಸೋಂಕು ಇಳಿಮುಖವಾಗಿದ್ದರೂ ಮುಂದೆ ಹೆಚ್ಚಾಗುವ ಆತಂಕವಿದೆ.

2 ಚಳಿಗಾಲದಲ್ಲಿ ಕೊರೊನಾ ಹರಡುವಿಕೆ ಹೆಚ್ಚು ಮತ್ತು ಶ್ವಾಸಕೋಶ ಸಂಬಂಧಿ ರೋಗಗಳು ತೀವ್ರವಾಗಿ ಬಾಧಿಸುತ್ತವೆ.

3 ಹೀಗಾಗಿ ವಿದ್ಯಾರ್ಥಿಗಳ  ಆರೋಗ್ಯದ ಹಿತದೃಷ್ಟಿಯಿಂದ ಡಿಸೆಂಬರ್‌ನಲ್ಲೂ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ.

4 ಡಿಸೆಂಬರ್‌ ಕೊನೆಯ ವಾರದಲ್ಲಿ ಕೊರೊನಾ ಪರಿಸ್ಥಿತಿ ನೋಡಿಕೊಂಡು ಶಾಲೆಗಳನ್ನು ತೆರೆಯಲು ನಿರ್ಧಾರ ಕೈಗೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next