ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 29ರಂದು ಪ್ರಾರಂಭವಾಗಲಿವೆ. ಶೈಕ್ಷಣಿಕ ವರ್ಷಾರಂಭದ ಹಿನ್ನೆಲೆಯಲ್ಲಿ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲು ಶಾಲೆಯಲ್ಲಿ ಪ್ರಾರಂಭೋತ್ಸವವನ್ನೂ ಬುಧವಾರ ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ನೀಡಬೇಕು ಎಂಬ ಯಾವುದೇ ನಿರ್ದೇಶಗಳು ಸರಕಾರದಿಂದ ಬಂದಿಲ್ಲ. ಆದರೆ ಈಗಾಗಲೇ ಕೆಲವು ಶಾಲೆಗಳ ಮುಖ್ಯಸ್ಥರು ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಅಂತಹ ಶಾಲೆಗಳಿಗೆ ಅಗತ್ಯಕ್ಕನುಸಾರವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದ್ದಾರೆ.
ಮೂಲಸೌಕರ್ಯ ಪರಿಶೀಲನೆ
ಉಡುಪಿ: ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಂದು ಆರಂಭ ಗೊಳ್ಳಲಿವೆ. ಜಿಲ್ಲೆಯಲ್ಲಿ ಸುಮಾರು 1.52 ಲಕ್ಷ ವಿದ್ಯಾರ್ಥಿಗಳಿದ್ದಾರೆ. 1,248 ಶಾಲೆಗಳಿವೆ. ಡಿಡಿಪಿಐ ಸೂಚನೆಯಂತೆ ಮಂಗಳವಾರ ಶಿಕ್ಷಕರು ಶಾಲೆಗೆ ಆಗಮಿಸಿ ಶಾಲೆಯ ಶುಚಿತ್ವ ಹಾಗೂ ಇತರ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು. ಬುಧವಾರ ಶಾಲೆಗಳಲ್ಲಿ ಆರಂಭೋತ್ಸವ ನಡೆಯ ಲಿದೆ. ಲಭ್ಯ ಇರುವಲ್ಲಿ ಪಠ್ಯ ಪುಸ್ತಕಗಳ ವಿತರಣೆ ಕೂಡ ನಡೆಯಲಿದೆ.
ಜಿಲ್ಲೆಯಲ್ಲಿ ಸುಮಾರು ಶೇ. 10ರಿಂದ 20ರಷ್ಟು ಶಾಲೆಗಳಿಗೆ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಅಂದಾಜಿಸಲಾಗಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಿದ್ದರೂ ಅಂಥಶಾಲೆಗಳಲ್ಲಿ ಅಕ್ಷರ ದಾಸೋಹಕ್ಕೆ ಸಮಸ್ಯೆಯಾಗಬಹುದು. ಈ ಶಾಲೆಗಳ ಬಗ್ಗೆ ನಿಗಾ ಇಡಲು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಯಾ ವಲಯದ ಬಿಇಒಗಳಿಗೆ ಸೂಚಿಸಲಾಗಿದೆ ಎಂದು ಉಡುಪಿ ಡಿಡಿಪಿಐ ಶೇಷಶಯನ ಕಾರಿಂಜ ಅವರು ತಿಳಿಸಿದ್ದಾರೆ.
ಮಿಂಚಿನ ಸಂಚಾರ
ಅಧಿಕಾರಿಗಳು ಶಾಲಾ ಆರಂಭೋತ್ಸವ ದಿನ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಮೂಲಸೌಕರ್ಯ, ಶಿಕ್ಷಕರು, ವಿದ್ಯಾರ್ಥಿಗಳ ಹಾಜರಾತಿ ಮೊದಲಾದವುಗಳ ಪರಿಶೀಲನೆ ನಡೆಸಲಿದ್ದಾರೆ. ನಾನು ಕೂಡ ಕೆಲವು ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡುತ್ತೇನೆ. ಜಿಲ್ಲೆಯಾದ್ಯಂತ ಅಧಿಕಾರಿಗಳ ‘ಮಿಂಚಿನ ಸಂಚಾರ’ ನಡೆಯಲಿದೆ ಎಂದು ಉಡುಪಿ ಡಿಡಿಪಿಐ ತಿಳಿಸಿದ್ದಾರೆ.