ಬೆಂಗಳೂರು: ರಾಜ್ಯದಲ್ಲಿ 6ರಿಂದ 8ನೇ ತರಗತಿಗಳು ಫೆ. 22, ಸೋಮವಾರ ಆರಂಭವಾಗಲಿವೆ. ಆದರೆ ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಸಹಿತ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಶಾಲೆಗಳಲ್ಲಿ ಅಂದಿನಿಂದ 8ನೇ ತರಗತಿಗೆ ಮಾತ್ರ ಶಾಲೆ, ಅದಕ್ಕಿಂತ ಕಿರಿಯರಿಗೆ ಎಂದಿನಂತೆ ವಿದ್ಯಾಗಮ ಮುಂದುವರಿಯಲಿದೆ. ಈ ಬಗ್ಗೆ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ಮಂಗಳವಾರ (ಫೆ.16) ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.
6ರಿಂದ ದ್ವಿತೀಯ ಪಿಯುವರೆಗೆ ದಿನ ಪೂರ್ತಿ ತರಗತಿ ನಡೆಯಲಿದೆ. ಆರೋಗ್ಯ ಇಲಾಖೆ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ರ್ಯಾಡಮ್ ಕೋವಿಡ್ ಪರೀಕ್ಷೆ ನಡೆಸಲಿದೆ.
ಇದನ್ನೂ ಓದಿ:ಪಿಎಫ್ಐ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ ಗೃಹ ಸಚಿವ ಬೊಮ್ಮಾಯಿ
ಕೇರಳದಿಂದ ಗಡಿಯ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೆಗೆಟಿವ್ ಫಲಿತಾಂಶವಿದ್ದರೆ ಮಾತ್ರ ಶಾಲೆಗೆ ಹಾಜರಾಗಬೇಕು. 6ರಿಂದ 8ನೇ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪಾಲಕ ಅಥವಾ ಪೋಷಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯ. ತರಗತಿಗೆ ಹಾಜರಾಗಬೇಕು ಎಂಬ ಕಡ್ಡಾಯ ನಿಯಮವಿಲ್ಲ ಎಂದು ಸೂಚಿಸಲಾಗಿದೆ.
ಆರರಿಂದ ಎಂಟನೇ ತರಗತಿಯರೆಗೆ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರುವಂತೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.