Advertisement

ಇಂದಿನಿಂದ ಶೈಕ್ಷಣಿಕ ವರ್ಷ; ತೆರೆದುಕೊಳ್ಳಲಿದೆ ಶಾಲೆ…

10:51 PM May 28, 2023 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 29ರಿಂದ ಶಾಲೆಗಳು ತೆರೆದುಕೊಳ್ಳಲಿದ್ದು, 2023-24ನೇ ಸಾಲಿನ ಶೈಕ್ಷಣಿಕ ವರ್ಷ ವಿಧ್ಯುಕ್ತವಾಗಿ ತೆರೆದುಕೊಳ್ಳಲಿವೆ. ಆದರೆ ಮೇ 31ರಂದು ಶಾಲಾ ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿ ತರಗತಿಗಳು ಆರಂಭವಾಗಲಿವೆ.

Advertisement

ಸೋಮವಾರ ಮತ್ತು ಮಂಗಳವಾರ ಶಿಕ್ಷಕರು ಮತ್ತು ಶಾಲಾ ಸಿಬಂದಿ ಮಾತ್ರ ಶಾಲೆಗಳಿಗೆ ತೆರಳಿ, ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಲಿದ್ದಾರೆ.

ಮುಖ್ಯವಾಗಿ ಶಾಲೆಯ ಕೊಠಡಿಗಳು, ಆವರಣ, ಬಿಸಿಯೂಟಕ್ಕೆ ಸಂಬಂಧಿಸಿ ಸ್ವತ್ಛತೆಯ ಕೆಲಸ, ಪ್ರವೇಶೋತ್ಸವದ ಪೂರ್ವ ತಯಾರಿ, ಯುನಿಫಾರ್ಮ್, ಪಠ್ಯಪುಸ್ತಕಗಳನ್ನು ಜೋಡಿಸಿಕೊಳ್ಳುವುದು, ಎಸ್‌ಡಿಎಂಸಿ ಸಭೆ ನಡೆಸುವುದು, ಪಾಠ ಟಿಪ್ಪಣಿ ಸಿದ್ಧಪಡಿಸುವುದು, ಪಾಠಗಳ ಯೋಜನೆ ಮಾಡುವುದು, ಶಾಲಾಭಿವೃದ್ಧಿ ಯೋಜನೆ ತಯಾರಿಸುವುದು, ಶಾಲಾ ಪಂಚಾಂಗ ತಯಾರಿ ಈ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲು ಎರಡು ದಿನಗಳ ಸಮಯಾವಕಾಶ ನೀಡಲಾಗಿದೆ.

ಈ ಬಾರಿ ರಜೆಯಲ್ಲೂ ಶಿಕ್ಷಕರಿಗೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕೆಲಸಗಳು ಇದ್ದವು. ಶಾಲೆಗಳಲ್ಲಿ ಚುನಾವಣೆಯ ಬೂತ್‌ಗಳು ಇದ್ದುದರಿಂದ ಡೆಸ್ಕ್-ಬೆಂಚುಗಳು ಇತರ ವಸ್ತು, ಉಪಕರಣಗಳು ಅಸ್ತವ್ಯಸ್ತವಾಗಿದ್ದು, ಅವುಗಳನ್ನು ಮತ್ತೆ ಜೋಡಿಸಿಕೊಳ್ಳಬೇಕಾದ ಆವಶ್ಯಕತೆಯಿದೆ. ಎರಡು ತಿಂಗಳು ರಜೆಯಿಂದಾಗಿ ಎಲ್ಲ ಕಡೆಗಳಲ್ಲಿ ಧೂಳು ಆವರಿಸಿಕೊಂಡಿದ್ದು, ಸ್ವತ್ಛಗೊಳಿಸಲು ಹೆಚ್ಚು ಸಮಯ ಬೇಕಾದೀತು ಎನ್ನುತ್ತಾರೆ ಶಿಕ್ಷಕರು.

ಬುಧವಾರ ಶಾಲಾ ಪ್ರಾರಂಭೋತ್ಸವ ನಡೆಯಲಿದ್ದು, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸಲಿದೆ. ತೋರಣ, ರಂಗೋಲಿ ಹಾಕಿ ಹಬ್ಬದ ವಾತಾವರಣದ ಮೂಲಕ ಮಕ್ಕಳನ್ನು ಶಾಲೆಗೆ ಸ್ವಾಗತಿಸುವುದು ಪ್ರಾರಂಭೋತ್ಸವದ ವಿಶೇಷ. ಬ್ಯಾಂಡ್‌-ವಾದ್ಯದ ಮೆರವಣಿಗೆ ಮೂಲಕವೂ ಮಕ್ಕಳನ್ನು ಸ್ವಾಗತಿಸಲಾಗುತ್ತದೆ.

Advertisement

ಸೋಮವಾರದಿಂದ ಶಾಲೆಗಳು ತೆರೆದುಕೊಳ್ಳಲಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈಗಾಗಲೇ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆಗಳ ಮುಖ್ಯಶಿಕ್ಷಕರಿಗೆ ಆಯಾ ಬಿಇಒ ಹಂತದಲ್ಲಿ ಸಭೆ ನಡೆಸಿ, ಪೂರ್ವ ತಯಾರಿಗೆ ಸಂಬಂಧಿಸಿದ ಮಾಹಿತಿ ನೀಡಲಾಗಿದೆ. ಮೇ 31ರಂದು ಶಾಲಾ ಪ್ರವೇಶೋತ್ಸವ ನಡೆಯಲಿದೆ.
– ದಯಾನಂದ ನಾಯಕ್‌, ಗಣಪತಿ ಡಿಡಿಪಿಐ ದ.ಕ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next