Advertisement

ನಗುಮೊಗದೊಂದಿಗೆ ಶಾಲೆಯತ್ತ ಹೆಜ್ಜೆಹಾಕಿದ ವಿದ್ಯಾರ್ಥಿಗಳು

04:50 AM May 29, 2018 | Team Udayavani |

ಮಹಾನಗರ: ಒಂದು ತಿಂಗಳ ಕಾಲ ಬೇಸಗೆ ರಜೆ ಅನುಭವಿಸಿದ ವಿದ್ಯಾರ್ಥಿಗಳು ಲಗುಬಗೆಯಿಂದ ಮತ್ತೆ ಶಾಲೆಗೆ ಆಗಮಿಸಿದ್ದಾರೆ. ಒಂದು ಕಡೆ ಹೊಸತಾಗಿ ಮಕ್ಕಳನ್ನು ಸೇರ್ಪಡೆಗೊಳಿಸುವಲ್ಲಿ ಶಿಕ್ಷಕರು, ಇತರ ಸಿಬಂದಿ ಬ್ಯುಸಿ ಇದ್ದರೆ, ಉಳಿದಂತೆ ಅಡಿಗೆ ಸಿಬಂದಿ ಮಕ್ಕಳಿಗೆ ಬಿಸಿ ಊಟ ತಯಾರಿಸುವಲ್ಲಿ ನಿರತರಾಗಿದ್ದರು. ಮಕ್ಕಳೆಲ್ಲಾ ರಜೆ ಮಜ ಮುಗಿಸಿ ಬೇಸರದ ಮೊಗದಿಂದ ಶಾಲೆಗೆ ಆಗಮಿಸಿದ್ದರೂ ಈ ಬಾರಿ ಶಾಲಾ ಆರಂಭೋತ್ಸವ ಇರುವ ಕಾರಣ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಇಂದು ಶಾಲಾ ಆರಂಭೋತ್ಸವ ಇರುವುದರಿಂದ ನಿನ್ನೆ ಅದಕ್ಕಾಗಿ ವಿದ್ಯಾರ್ಥಿಗಳು ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸುತ್ತಿದ್ದರು. ವಿದ್ಯಾರ್ಥಿಗಳೇ ಶಾಲೆಯನ್ನು ಗುಡಿಸಿ, ಶುಚಿಗೊಳಿಸಿ ಬೆಂಚು, ಡೆಸ್ಕ್ ಗಳನ್ನು ಕ್ಲಾಸಿನಲ್ಲಿ ಒಪ್ಪ ಓರಣವಾಗಿ ಇಡುತ್ತಿರುವ ದೃಶ್ಯ ಕಂಡುಬಂದಿತು. ಹೊಸ ಪುಸ್ತಕ, ಕೊಡೆ, ರೈನ್‌ಕೋಟ್‌ ಧರಿಸಿ ವಿದ್ಯಾರ್ಥಿಗಳು ಲಗುಬಗೆಯಿಂದ ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆಂಗ್ಲ ಮಾಧ್ಯಮದ ವ್ಯಾಮೋಹ ಹೆಚ್ಚಿದ ಕಾರಣ ಹೆತ್ತವರು ಈ ಬಾರಿ ಖಾಸಗಿ ಆಂಗ್ಲ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಿದ್ದಾರೆ.

Advertisement


ಕ್ಷೀಣಿಸುತ್ತಿರುವ ಸರಕಾರಿ ಶಾಲೆಯ ದಾಖಲಾತಿ
ಮಳಲಿ:
ಆಂಗ್ಲ ಹಾಗೂ ಖಾಸಗಿ ಶಾಲೆಯ ವ್ಯಾಮೋಹ ಜಾಸ್ತಿಯಾಗಿದ್ದರೂ, ಮಳಲಿಯ ಸರಕಾರಿ ಪ್ರಾಥಮಿಕ ಶಾಲೆಗೆ ಈ ಬಾರಿ 26 ಮಕ್ಕಳು ಹೊಸತಾಗಿ ಸೇರ್ಪಡೆಗೊಂಡಿದ್ದಾರೆ. ಬೇರೆ ಸರಕಾರಿ ಶಾಲೆಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿರುವುದು ಆಶಾ ಭಾವನೆ ಮೂಡಿಸಿದೆ. ಒಂದು ಕಾಲದಲ್ಲಿ ಸುಮಾರು 100 ಮಕ್ಕಳು ದಾಖಲಾಗುತ್ತಿದ್ದ ಶಾಲೆಗೆ ಇತ್ತೀಚೆಗೆ 25 ಮಕ್ಕಳು ಹೊಸತಾಗಿ ಸೇರ್ಪಡೆಗೊಂಡಿರುವುದೇ ಹೆಚ್ಚು. ಕಳೆದ ಬಾರಿ 24 ಮಕ್ಕಳು ದಾಖಲುಗೊಂಡಿದ್ದಾರೆ ಎಂದು ಪ್ರಾಥಮಿಕ ಶಾಲೆ ಮಳಲಿಯ ಪದವೀಧ ರೇತರ ಮುಖ್ಯ ಶಿಕ್ಷಕಿ ನೇತ್ರಾವತಿ ತಿಳಿಸಿದ್ದಾರೆ.


ಪೂರ್ವ ಸಿದ್ಧತೆ

ಮಕ್ಕಳಿಗೆ ಶಾಲೆಯಲ್ಲಿ ಮನರಂಜನೆ ಜತೆಗೆ ಶಾಲಾ ಆರಂಭೋತ್ಸವವನ್ನು ಆಚರಿಸಲು ಶಿಕ್ಷಣ ಇಲಾಖೆ ಸೂಚಿಸಿರುವುದರಿಂದ ಶಿಕ್ಷಕರು, ಮಕ್ಕಳೆಲ್ಲಾ ಸೇರಿ ಇದಕ್ಕೆ ಸಿದ್ಧರಾಗುತ್ತಿದ್ದಾರೆ. ಈ ಸಮಾರಂಭದಲ್ಲಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಬಡಗ ಎಕ್ಕಾರು
ಎಕ್ಕಾರು:
ಬಡಗದ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 28ರಂದು ಶಾಲಾ ತರಗತಿ ಹಾಗೂ ಪರಿಸರ ಸ್ವಚ್ಛಗೊಳಿಸಲಾಯಿತು. ಶಾಲೆಯನ್ನು ತಳಿರು ತೋರಣ ಕಟ್ಟಿ ಸಿಂಗಾರಿಸಲಾಗಿತ್ತು. SDMC ಜತೆ ಶಿಕ್ಷಕರ ಸಭೆ ನಡೆಸಲಾಯಿತು. ಬಳಿಕ ಪಾಠ ವೇಳಾ ಪಟ್ಟಿ, ಕ್ರಿಯಾಯೋಜನೆ, ಶಿಕ್ಷಕ ಹಾಗೂ ತರಗತಿಗಳ ವೇಳಾ ಪಟ್ಟಿ ತಯಾರಿಸಲಾಯಿತು. ನೂತನವಾಗಿ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿಗಳನ್ನು ಹೂ, ಉಡುಗೊರೆ ನೀಡಿ ಸ್ವಾಗತಿಸಲಾಯಿತು. ಸಿಹಿ ತಿಂಡಿ ಹಂಚುವಿಕೆ, ಮಧ್ಯಾಹ್ನ ಊಟದ ಜತೆಗೆ ಪಾಯಸ ನೀಡಲಾಯಿತು. 

ತೆಂಕ ಎಕ್ಕಾರು
ಎಕ್ಕಾರು:
ದ.ಕ.ಜಿ.ಪಂ. ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತೆಂಕ ಎಕ್ಕಾರು ಇಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಭರದಿಂದ ಪೂರ್ವ ಸಿದ್ಧತೆಗಳು ಮೇ 28ರಂದು ನಡೆದಿದೆ.  ಸೋಮವಾರ ಶಾಲಾ ತರಗತಿಯನ್ನು ನೀರು ಹಾಕಿ ತೊಳೆದು ಸ್ವಚ್ಛ ಮಾಡಲಾಯಿತು. ಪರಿಸರದಲ್ಲಿರುವ ಕಸ ತೆಗೆಯಲಾಯಿತು. 

Advertisement

ತೋಕೂರು: ಶಾಲಾ  ಪ್ರಾರಂಭೋತ್ಸವಕ್ಕೆ ತಳಿರು ತೋರಣ


ತೋಕೂರು:
ಇಲ್ಲಿನ ಪಡು ಪಣಂಬೂರು ಗ್ರಾಮ ಪಂಚಾಯತ್‌ನ ತೋಕೂರು ಶ್ರೀ ಸುಬ್ರಹ್ಮಣ್ಯ ಅನುದಾನಿತ ಸರಕಾರಿ ಶಾಲೆಯಲ್ಲಿ ಮರಳಿ ಮಕ್ಕಳ ಕಲರವ ಕೇಳಿ ಬರಲು ಸೋಮವಾರ ಶಾಲಾ ವಠಾರವನ್ನು ಶುಚಿಗೊಳಿಸಿ, ತರಗತಿಯನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next