Advertisement

ಶಾಲೆ ಆರಂಭ ವಿಚಾರ ಪಾಲಕ, ಪೋಷಕರ ಅಭಿಪ್ರಾಯ ಮುಖ್ಯ

07:31 AM Jun 06, 2020 | Hari Prasad |

ಬೆಂಗಳೂರು: ಶಾಲೆಗಳನ್ನು ಆರಂಭಿಸುವುದಕ್ಕೆ ಮುನ್ನ ಪಾಲಕ, ಪೋಷಕರ ಅಭಿಪ್ರಾಯ ಸಂಗ್ರಹಿಸಿ ಮುನ್ನಡೆಯುವುದು ಸರಕಾರ ಮತ್ತು ಶಿಕ್ಷಣ ಇಲಾಖೆಗಳ ಜವಾಬ್ದಾರಿ.

Advertisement

ಲಾಕ್‌ಡೌನ್‌ ಪರಿಣಾಮದಿಂದ ತಮ್ಮ ಬದುಕು ಮತ್ತು ಜೀವನ ಕ್ರಮದಲ್ಲಿ ಆಗಿರುವ ಏರುಪೇರು ಮತ್ತು ಅದನ್ನು ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಕ್ಕಳ ಅಭಿಪ್ರಾಯದ ಆಧಾರದಲ್ಲಿಯೂ ರಾಜ್ಯ ಸರಕಾರ ಯೋಚಿಸಬಹುದು.

ಶಾಲೆ ಆರಂಭವನ್ನು ಕಲಿಕೆಯ ದೃಷ್ಟಿಯಿಂದ ಮಾತ್ರ ನೋಡಬಾರದು. ಮಕ್ಕಳ ಆರೈಕೆ, ರಕ್ಷಣೆ, ಪೋಷಣೆ ಹಾಗೂ ಕೆಳಸ್ತರದ ಕುಟುಂಬಗಳ ಜೀವನಾಧಾರ ಕೆಲಸಗಳ ಒತ್ತಡ, ಪೂರಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿಯೂ ಚರ್ಚೆ ನಡೆಯಬೇಕಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಸಂಕಷ್ಟ ಸಂದರ್ಭ ಮಕ್ಕಳ ಜೀವ ರಕ್ಷಣೆ, ಸುರಕ್ಷೆಯ ವಿಚಾರವಾಗಿ ಹೆತ್ತವರ ಭಯ – ಆತಂಕ ತೊಡೆಯಬೇಕಿದೆ.

ಮನುಷ್ಯನೊಬ್ಬ ಸಮಾಜ ಜೀವಿ, ಸಂಘಜೀವಿ. ಶಿಕ್ಷಣ ಮಕ್ಕಳ ಸಾಮಾಜಿಕ ಚಲನವಲನ ಮತ್ತು ಸಮಾಜದ ಎಲ್ಲ ವರ್ಗಗಳ ಜನರ ಒಳಿತಿಗಾಗಿ ಮಕ್ಕಳನ್ನು ಸಮಾಜಮುಖಿಯಾಗಿಸುವ ಒಂದು ಸಾಧನ.

ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಮೂಲಕ ಮಾನವೀಯತೆಯ ನೆಲೆಯಲ್ಲಿ ಹೊಸ ಸಮಾಜವನ್ನು ಕಟ್ಟಿಕೊಳ್ಳಲು ಮಕ್ಕಳನ್ನು ಅಣಿಗೊಳಿಸುವುದು ಶಿಕ್ಷಣದ ಮೂಲ ಉದ್ದೇಶ.

Advertisement

ಈ ಕಾರಣಕ್ಕಾಗಿಯೇ ಯುನೆಸ್ಕೊ ಸಹಿತ ಸಂಸ್ಥೆಗಳೆಲ್ಲ ಶಿಕ್ಷಣವನ್ನು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಬಹುದೊಡ್ಡ ಸಾಧನವನ್ನಾಗಿ ಪರಿಗಣಿಸಿವೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಶಾಲಾರಂಭ ವಿಚಾರವಾಗಿ ವಾಸ್ತವಿಕ ನೆಲೆಗಟ್ಟಿ ನಲ್ಲಿ ಚರ್ಚಿಸಬೇಕೇ ವಿನಾ ಜನರ ದಿಕ್ಕು ತಪ್ಪಿಸುವ ಕೆಲಸ ಆಗಬಾರದು.

ಸಮಯ, ಹಣ ಮತ್ತು ಮಾರುಕಟ್ಟೆ
ಆನ್‌ಲೈನ್‌ ಶಿಕ್ಷಣದ ಬಗ್ಗೆ ಸಾಕಷ್ಟು ಸದ್ದು ಮಾಡುತ್ತಿರುವ ನವ ಉದಾರವಾದಿ ಖಾಸಗಿ ಸಂಸ್ಥೆಗಳು ಮಾರುಕಟ್ಟೆ ಚಾಲಿತ ಮೌಲ್ಯಗಳಾದ ‘ಸಮಯವು ಹಣ’, ‘ಹಣದ ಮೌಲ್ಯ’, ‘ಸಂಸ್ಥೆಯ ವೆಚ್ಚ’, ‘ಸ್ಮಾರ್ಟ್‌ ಸೇವೆಗಳು’ ಇತ್ಯಾದಿಗಳಿಂದಲೇ ಎಲ್ಲವನ್ನೂ ನೋಡುತ್ತವೆ. ‘ಸಮಯ ಹಣ’ ಆಗಿರುವುದರಿಂದ ಸದ್ಯ ಸರಕಾರವು ಶೈಕ್ಷಣಿಕ ವರ್ಷವನ್ನು ಎರಡು ತಿಂಗಳು ವಿಸ್ತರಿಸಲಾಗದು. ಯಾಕೆಂದರೆ, ಸಮಯವನ್ನು ಹಾಳು ಮಾಡುವ ಮೂಲಕ ಹಣ-ಲಾಭವನ್ನು ಕಳೆದುಕೊಂಡರೆ ಸಂಸ್ಥೆಗಾಗುವ ‘ವೆಚ್ಚ’ ಯಾರು ಭರಿಸುತ್ತಾರೆ ಎಂಬುದು ಜೀವಗಳಿಗಿಂತ ದೊಡ್ಡ ವಿಚಾರವಾಗಿಬಿಡುತ್ತದೆ. ಇಂತಹ ಲಾಬಿಗಳಿಗೆ ಸರಕಾರ ಮಣಿಯಕೂಡದು.

ತರಗತಿ ಕಲಿಕೆಗೆ ಪರ್ಯಾಯವಲ್ಲ
ಆನ್‌ಲೈನ್‌ ಸೇವೆಗಳು ಮತ್ತು ಸಂಪನ್ಮೂಲಗಳು ಕಲಿಯಬೇಕಾದ ವಿಷಯ ಮತ್ತು ಕಲಿಕಾ ಪ್ರಕ್ರಿಯೆಗೆ ಪೂರಕ ನಿಜ. ಆದರೆ ಈ ವಿಧಾನ ಎಂದಿಗೂ ತರಗತಿಯ ಜೀವಂತ ಕಲಿಕೆ ಪ್ರಕ್ರಿಯೆಗೆ ಪರ್ಯಾಯವಾಗದು, ಆಗಲೂಬಾರದು. ಮಕ್ಕಳು ಒಟ್ಟಿಗಿದ್ದು, ಬೆರೆತು, ಸಂಭಾಷಿಸಿ, ಚರ್ಚಿಸಿ, ಪರಸ್ಪರ ಅನುಭವ- ಅವರದೇ ಮಟ್ಟದ ಒಳನೋಟಗಳನ್ನು ಹಂಚಿಕೊಂಡು ಕಲಿತಾಗ ಮಾತ್ರ ಅವರು ಸಮಾಜದ ಭಾಗವಾಗಿ ಬೆಳೆದು ಬರುತ್ತಾರೆ. ಅಂತಹ ಕಲಿಕೆ ಪ್ರಕ್ರಿಯೆ ಮಾತ್ರ ಸಂಬಂಧಗಳನ್ನು ಬೆಸೆದು ಮಾನವೀಯತೆಯನ್ನು ಕಟ್ಟಿಕೊಡಬಲ್ಲುದು. ಸರಕಾರ ಮತ್ತು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next