Advertisement

ಶಾಲೆ ದಿನಕ್ಕೊಂದು ಧ್ವನಿ: ಕೋವಿಡ್ ದೂರವಾಗಲಿ, ಅನಂತರ ಶಾಲೆ ಆರಂಭವಾಗಲಿ

02:31 AM Jun 10, 2020 | Hari Prasad |

ಬೆಂಗಳೂರು: ಕೋವಿಡ್ ಶೂನ್ಯಕ್ಕೆ ಬರುವವರೆಗೂ ಹತ್ತನೇ ತರಗತಿಯವರೆಗಿನ ತರಗತಿ ಆರಂಭಿಸುವುದು ಸಲ್ಲದು. ಸರಕಾರ ಅನಗತ್ಯ ಗೊಂದಲ ಸೃಷ್ಟಿಸುವ ಬದಲು ದೃಢ ನಿಲುವು ಪ್ರಕಟಿಸಬೇಕಿದೆ.

Advertisement

ತರಾತುರಿಯಲ್ಲಿ ಶಾಲೆ ಆರಂಭಿಸಿದರೆ ಮುಂದಾಗುವ ಸಮಸ್ಯೆ- ಸಂಕಷ್ಟಗಳಿಗೆ ಸರಕಾರವೇ ಹೊಣೆಯಾಗಬೇಕಾದೀತು.

ಶಾಲೆಗಳ ಆರಂಭಕ್ಕೆ ಅವಸರದ, ಗೊಂದಲದ ನಿರ್ಧಾರ- ಚಿಂತನೆಗಳಿಗೆ ಮುಂದಾಗುವುದು ಸರಿಯಲ್ಲ ಎನ್ನುವುದು ನನ್ನ ಅನಿಸಿಕೆ. ಶಾಲೆಗಳು 2-3 ತಿಂಗಳು ತಡವಾಗಿ ಆರಂಭವಾದರೆ ಜಗತ್ತು ಮುಳುಗುವುದಿಲ್ಲ. ಶೈಕ್ಷಣಿಕ ವರ್ಷದ ಪಠ್ಯ ಸರಿದೂಗಿಸಲು ಹಲವಾರು ಮಾರ್ಗಗಳಿವೆ. ಮುಖ್ಯವಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಕಾರವು ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವುದು ಸೂಕ್ತ.

ಅಭಿಪ್ರಾಯ ಸಂಗ್ರಹ ಬೇಕಿಲ್ಲ
ಶಾಲೆಗಳ ಆರಂಭದ ವಿಚಾರದಲ್ಲಿ ಹೆತ್ತವರು, ಶಾಲಾಭಿವೃದ್ಧಿ ಸಮಿತಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹದಂತಹ ಕಾರ್ಯ ಕೈಬಿಡುವುದೇ ಒಳಿತು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಸರಕಾರ ದೃಢ ನಿರ್ಧಾರ ಪ್ರಕಟಿಸಿದರೆ ಯಾವ ಹೆತ್ತವರು ತಾನೇ ಬೇಡ ಎನ್ನುತ್ತಾರೆ?

ಮಕ್ಕಳ ನಿಯಂತ್ರಣ ಸಾಧ್ಯವೇ?
ಸಣ್ಣ ಮಕ್ಕಳು ಒಂದೆಡೆಯೇ ಕುಳಿತಿರಬಲ್ಲರೇ? ಸಾಮಾಜಿಕ ಅಂತರ ಪಾಲನೆಯಂತಹ ನಿಯಮ ಪಾಲಿಸಲು ಅವರಿಂದ ಸಾಧ್ಯವೇ? ನನ್ನ ನಿಲುವು ಇಷ್ಟೇ – ಅನುಭವಿಗಳನ್ನು ಕರೆದು ಮಾರ್ಗದರ್ಶನ ಪಡೆಯಲಿ, ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ 10ನೇ ತರಗತಿಯವರೆಗೆ ಶಾಲೆಗಳ ಆರಂಭ ಇಲ್ಲ ಎಂಬ ದೃಢ ನಿಲುವನ್ನು ಸರಕಾರ ಸ್ಪಷ್ಟಪಡಿಸಲಿ.

Advertisement

ಸಾರಿಗೆ ವ್ಯವಸ್ಥೆ ಹೇಗೆ?
ಮಕ್ಕಳನ್ನು ಶಾಲೆಗೆ ಕರೆತರಲು ಶಾಲಾ ಆಡಳಿತ ಮಂಡಳಿಗಳು ಬಸ್‌, ವ್ಯಾನ್‌ ಇತ್ಯಾದಿ ವಾಹನ ವ್ಯವಸ್ಥೆ ಮಾಡಿರುತ್ತವೆ. ಹಲವರು ಆಟೋ ರಿಕ್ಷಾ, ವ್ಯಾನ್‌ಗಳಲ್ಲಿ ಕಳುಹಿಸಿಕೊಡುತ್ತಾರೆ. ಒಂದು ಆಟೋ ರಿಕ್ಷಾದಲ್ಲಿ 10-15 ಮಕ್ಕಳನ್ನು ಕರೆದೊಯ್ಯುತ್ತಾರೆ ಎನ್ನುವುದು ವಾಸ್ತವ. ಒಂದು ವೇಳೆ ಈ ವಾಹನಗಳ ಚಾಲಕರಿಗೋ ಶಾಲೆಯ ಆಯಾ ಗಳಿಗೋ ಸೋಂಕಿನ ಲಕ್ಷಣ ಕಂಡು ಬಂದರೆ, ಯಾವುದಾದರೂ ಒಂದು ಮಗು ಸೋಂಕು ಪೀಡಿತವಾದರೆ ಇಡೀ ಶಾಲೆಯ ಗತಿ ಏನು? ಇದನ್ನೆಲ್ಲ ಸರಕಾರ ಚಿಂತಿಸಿದೆಯೇ.

ಮಾರ್ಗೋಪಾಯ ಏನು?
ಸೆಪ್ಟಂಬರ್‌ನಿಂದ ಶಾಲೆ ಆರಂಭಿಸಿದರೂ ವಿಳಂಬ ಸರಿದೂಗಿಸಲು ಹಲವು ಮಾರ್ಗಗಳಿವೆ. ಅವುಗಳ ಬಗ್ಗೆ ಸರಕಾರ ಚಿಂತಿಸಲಿ.

– ತಿಂಗಳಲ್ಲಿ ಒಂದು ಶನಿವಾರ ಬಿಟ್ಟು ಉಳಿದ ಎಲ್ಲ ಶನಿವಾರ ಪೂರ್ಣ ಶಾಲೆ ನಡೆಯಲಿ

– ಜಯಂತಿಗಳ ರಜೆ, ಅಕ್ಟೋಬರ್‌ ರಜೆ ರದ್ದುಪಡಿಸಿ

– ಪಠ್ಯಗಳನ್ನು 20 ಚಾಪ್ಟರ್‌ ಬದಲು 10ಕ್ಕೆ ಇಳಿಸಿ

– ವಿಶೇಷ ತರಗತಿ ಆಯೋಜಿಸಿ

– ಶೈಕ್ಷಣಿಕ ವರ್ಷವನ್ನು ಮಾರ್ಚ್‌ – ಎಪ್ರಿಲ್‌ ಬದಲು ಮೇ ಮಧ್ಯದವರೆಗೆ ಮುಂದುವರಿಸಿ

ಎಸೆಸೆಲ್ಸಿ ಪರೀಕ್ಷೆ ಇರಲಿ
ಸದ್ಯದ ಸ್ಥಿತಿಯಲ್ಲಿ ಶಿಕ್ಷಕರು ಶಾಲೆಗೆ ಹೋಗಿ ಮಾಡುವುದೇನು ಎಂಬುದರ ಬಗ್ಗೆಯೂ ಸರಕಾರ ಚಿಂತಿಸಲಿ. ಆದರೆ ಎಸೆಸೆಲ್ಸಿ ಪರೀಕ್ಷೆ ಇಲ್ಲದೆ ಪಾಸು ಮಾಡುವ ಪದ್ಧತಿ ಸರಿಯಲ್ಲ.

– ಬಸವರಾಜ ಹೊರಟ್ಟಿ , ಮಾಜಿ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next