Advertisement

ಹಬ್ಬದ ವಾತಾವರಣದಲ್ಲಿ ಶಾಲೆ ಆರಂಭೋತ್ಸವ

04:44 PM May 26, 2018 | Team Udayavani |

ಕಲಘಟಗಿ: ಹೊಸ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವ ಮೇ 29ರಂದು ನಡೆಯಲಿದ್ದು, ಶಿಕ್ಷಕರು ಹಾಗೂ ಶಾಲಾ ಸಮಿತಿಯವರು ಸ್ಥಳೀಯ ಸಮುದಾಯದ ಸಹಕಾರದೊಂದಿಗೆ ಅದ್ಧೂರಿಯಾಗಿ ಹಬ್ಬದ ವಾತಾವರಣದಲ್ಲಿ ಶಾಲೆಗಳನ್ನು ಪ್ರಾರಂಭಿಸಬೇಕೆಂದು ಡಿಡಿಪಿಐ ಎನ್‌. ಎಚ್‌. ನಾಗೂರ ಹೇಳಿದರು.

Advertisement

ಪಟ್ಟಣದ ಜನತಾ ಇಂಗ್ಲಿಷ್‌ ಸ್ಕೂಲ್‌ ಸಭಾಂಗಣದಲ್ಲಿ ಜರುಗಿದ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಶಾಲೆಗಳು ಮೇ 28ರಂದು ಪ್ರಾರಂಭವಾಗಲಿದ್ದು, ಶಾಲಾ ಸ್ವತ್ಛತೆ ಕಾರ್ಯವನ್ನು ಕೈಗೊಂಡು ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮರುದಿನವೇ ಶಾಲೆಗೆ ಹೊಸದಾಗಿ ದಾಖಲಾಗುವ ಒಂದನೇ ತರಗತಿ ಮಕ್ಕಳನ್ನು ಪ್ರೀತಿ ಪೂರ್ವಕವಾಗಿ ಬರಮಾಡಿಕೊಳ್ಳಬೇಕು ಎಂದರು.

ಗ್ರಾಮದ ಪ್ರಸಿದ್ಧ ದೇವಸ್ಥಾನದಿಂದ ಹೂಮಾಲೆಗಳು, ಅಕ್ಷರ ಹಾಗೂ ಪದಗಳಿಂದ ಸಿಂಗರಿಸಿದ ಚಕ್ಕಡಿಯಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಕೂಡ್ರಿಸಿ ಊರಿನಲ್ಲಿ ಮೆರವಣಿಗೆ ಮಾಡುವುದು ಅಕ್ಷರಬಂಡಿಯ ಪರಿಕಲ್ಪನೆಯಾಗಿದೆ ಎಂದು ವಿವರಿಸಿದರು.

ಶಿಕ್ಷಣ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿ ಎಸ್‌.ಎಮ್‌.ಹುಡೇದಮನಿ ಮಾತನಾಡಿ, ಈಗಾಗಲೇ ಪ್ರಕಟಗೊಂಡ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಕಲಘಟಗಿ ತಾಲೂಕು ರಾಜ್ಯಕ್ಕೆ ಎಂಟನೇ ಸ್ಥಾನ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿರುವುದಕ್ಕೆ ತಾಲೂಕಿನ ಎಲ್ಲ ಶಿಕ್ಷಕ ವೃಂದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಕೆ.ಯು. ಶೇಖ್‌ ಮಾತನಾಡಿ, ಮೇ 16ರಿಂದಲೇ ವಿಶೇಷ ದಾಖಲಾತಿ ಆಂದೋಲನ ಜಾರಿಯಲ್ಲಿದ್ದು ಪ್ರವೇಶಗಳು ಪ್ರಾರಂಭಗೊಂಡಿವೆ. ಶಿಕ್ಷಕ ವೃಂದ ಸರ್ಕಾರಿ ಶಾಲಾ ಸಬಲೀಕರಣಕ್ಕಾಗಿ ಶ್ರಮಿಸಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೆ. ಮರಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾ ಧಿಕಾರಿ ಮಹಾವೀರ ಹಂಚಿನಾಳ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈಶ್ವರ ಜವಳಿ, ಶಿಕ್ಷಕರ ಸಂಘದ ಅಧ್ಯಕ್ಷ ಎಲ್‌.ಸಿ. ಹೊಸಮನಿ, ಕಾರ್ಯದರ್ಶಿ ಎಲ್‌.ಎಫ್‌. ಪಾಟೀಲ, ಶಿಕ್ಷಣ ಸಂಯೋಜಕ ಚಂದ್ರಶೇಖರ ಅಳಗೋಡಿ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಹತ್ತಿ ಪ್ರಾರ್ಥಿಸಿದರು. ಎಮ್‌.ಪಿ. ದೊಡಮನಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next