Advertisement

ಉತ್ತಮ ದಾಖಲಾತಿಯ ಶಾಲೆಗೆ ಬೇಕಿದೆ ಅಗತ್ಯ ಸೌಲಭ್ಯ 

09:08 PM Sep 16, 2021 | Team Udayavani |

ತಲ್ಲೂರು: ಬೈಂದೂರು ವಲಯದ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ದಾಖಲಾತಿಯಾಗಿದ್ದು, ಇದಲ್ಲದೆ ಈ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಈ ಶಾಲೆಗೆ ಹೆಚ್ಚುವರಿ ಕಟ್ಟಡ, ಆಟದ ಮೈದಾನ ಸೇರಿದಂತೆ ಹಲವು ಮೂಲ ಸೌಕರ್ಯಗಳ ಆವಶ್ಯಕತೆಯಿದೆ.

Advertisement

ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನಕಟ್ಟೆಯಲ್ಲಿರುವ ಈ ಸರಕಾರಿ ಶಾಲೆಯಲ್ಲಿ ಪ್ರಸ್ತುತ 210 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಒಂದನೇ ತರಗತಿಗೆ 31 ದಾಖಲಾತಿಯಾಗಿದ್ದು, ಒಟ್ಟಾರೆ 62 ಮಕ್ಕಳು ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಇಲ್ಲಿ 195 ವಿದ್ಯಾರ್ಥಿಗಳಿದ್ದರು.

ಆಂಗ್ಲ ಮಾಧ್ಯಮ ತರಗತಿ ಆರಂಭ:

2004ರಲ್ಲಿ ಆರಂಭಗೊಂಡ ಮಾವಿನಕಟ್ಟೆ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. ಮೊದಲ ವರ್ಷವೇ ಈ ತರಗತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 20 ಮಕ್ಕಳು ಸೇರ್ಪಡೆಯಾಗಿದ್ದಾರೆ. ಇನ್ನೂ ಸಹ ದಾಖಲಾತಿ ಪ್ರಕ್ರಿಯೆ ನಡೆಯುತ್ತಲೇ ಇದೆ.

ಹೆಚ್ಚುವರಿ ಕಟ್ಟಡ ಬೇಡಿಕೆ:

Advertisement

ಶಾಲೆಯಲ್ಲಿ ಈಗ ಒಂದರಿಂದ 7ನೇ ತರಗತಿಯ ಜತೆಗೆ ಆಂಗ್ಲ ಮಾಧ್ಯಮ ತರಗತಿಯು ಆರಂಭಗೊಂಡಿರುವುದರಿಂದ ಮಕ್ಕಳಿಗೆ ಪಾಠ- ಪ್ರವಚನಕ್ಕೆ ಕೊಠಡಿ ಕೊರತೆ ಎದುರಾಗಿದೆ. ತುರ್ತಾಗಿ ಈ ಶಾಲೆಗೆ ಹೆಚ್ಚುವರಿ ಕಟ್ಟಡದ ಅಗತ್ಯತೆಯಿದೆ.

ಶೌಚಾಲಯ, ಪೀಠೊಪಕರಣ:

ಇದಲ್ಲದೆ 200ಕ್ಕೂ ಅಧಿಕ ಮಂದಿ ಮಕ್ಕಳಿರುವುದರಿಂದ ಈಗಿರುವ ಶೌಚಾಲಯದಲ್ಲಿ ಅಷ್ಟೊಂದು ಮಕ್ಕಳಿಗೆ ಬಳಕೆಗೆ ಕಷ್ಟ. ಹಾಗಾಗಿ ಹೆಚ್ಚುವರಿ ಶೌಚಾಲಯದ ಅಗತ್ಯತೆಯೂ ಇದೆ. ಇನ್ನು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಬೆಂಚ್‌, ಡೆಸ್ಕ್ ಸಹಿತ ಇನ್ನಿತರ ಪೀಠೊಕರಣಗಳು ಬೇಕಾಗಿವೆ. ಈ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖೆ, ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕಿದೆ.

ಹೆಚ್ಚುವರಿ ಶಿಕ್ಷಕರು ಅಗತ್ಯ :

ಸದ್ಯ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿ 8 ಮಂದಿ ಶಿಕ್ಷಕ – ಶಿಕ್ಷಕಿಯರಿದ್ದಾರೆ. ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಂಡಿರುವುದರಿಂದ ಹೆಚ್ಚುವರಿ ಶಿಕ್ಷಕರ ಅಗತ್ಯತೆಯೂ ಇದೆ. ಇನ್ನು ಶಾಲೆಯಲ್ಲಿ ಸದ್ಯ ಇರುವಂತಹ ಆಟದ ಮೈದಾನ ಕಿರಿದಾಗಿದ್ದು, ಶಾಲೆಗೆ ವಿಶಾಲವಾದ ಆಟದ ಮೈದಾನದ ಅಗತ್ಯವಿದೆ. ಇದರೊಂದಿಗೆ ಶಾಲೆಯ ಆವರಣದ ಸುತ್ತಲೂ ಆವರಣ ಗೋಡೆಯ ನಿರ್ಮಾಣವಾಗಬೇಕಿದೆ.

ಸೌಲಭ್ಯಗಳು ಬೇಕಿವೆ:  ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. ಉತ್ತಮ ದಾಖಲಾತಿಯೂ ಆಗಿರುವುದರಿಂದ ಕೆಲವೊಂದು ಅಗತ್ಯ ಸೌಲಭ್ಯಗಳು ಬೇಕಾಗಿವೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.ಗೌರಿ,  ಮುಖ್ಯೋಪಾಧ್ಯಾಯಿನಿ

ಆಟದ ಮೈದಾನ ಅಗತ್ಯ :

ಗ್ರಾಮೀಣ ಭಾಗದ ಈ ಶಾಲೆಗೆ ಉತ್ತಮ ದಾಖಲಾತಿಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಅಗತ್ಯ ಸೌಕರ್ಯಗಳು ಸಹ ಬೇಕಾಗಿವೆ. ಪ್ರಮುಖವಾಗಿ ವಿಸ್ತೃತವಾದ ಆಟದ ಮೈದಾನದ ಬೇಡಿಕೆಯಿದೆ. ಇನ್ನು ಮಕ್ಕಳ ಸಂಖ್ಯೆಗೆ ತಕ್ಕಂತೆ ಬಳಕೆಗೆ ಅನುಕೂಲವಾಗುವಂತೆ ಶೌಚಾಲಯದ ಅಗತ್ಯವೂ ಇದೆ. ಇದಲ್ಲದೆ ಪೀಠೊಪಕರಣಗಳು ಸಹ ಬೇಕಾಗಿವೆ.ಸಿದ್ಧಿಕಿ, ಎಸ್‌ಡಿಎಂಸಿ ಅಧ್ಯಕ್ಷರು

 

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next