Advertisement

School: ಮಕ್ಕಳ ದುಸ್ಥಿತಿ ಕಂಡರೂ ಶಾಲೆಗಿಲ್ಲ ಕಾಯಕಲ್ಪ 

03:16 PM Aug 24, 2023 | Team Udayavani |

ಬೇಲೂರು: ಸರ್ಕಾರಗಳು ಶಾಲೆಗಳ ಅಭಿವೃದ್ಧಿಗೆ, ಮೂಲ ಸೌಕರ್ಯ ಕಲ್ಪಿಸಲು ಎಷ್ಟೇ ಅನುದಾನ ನೀಡಿದರೂ ಶಾಲೆಗಳಲ್ಲಿ ಅವ್ಯವಸ್ಥೆ ತಪ್ಪಿದ್ದಲ್ಲ, ಇದಕ್ಕೆ ನಿದರ್ಶನ ಎನ್ನುವಂತೆ ಪಟ್ಟಣದಲ್ಲಿಯ ಶಾಲೆ. ಶಿಥಿಲ ಕಟ್ಟಡ, ಶಾಲೆ ಮುಂಭಾಗ ಗಿಡಗಳು ಬೆಳೆದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತವಾರಣ ವಿಲ್ಲದ ಸ್ಥಳದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾ ಣ ವಾಗಿರುವುದು ಶೋಚನೀಯ ಸಂಗತಿ.

Advertisement

ಬೇಲೂರು ಪಟ್ಟಣದ ನೆಹರೂ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. 1965 ರಲ್ಲಿ ನಿರ್ಮಾಣವಾಗಿರುವ ಶಾಲೆ ದುಸ್ಥಿತಿ ಯಲ್ಲಿದ್ದರೂ ಸರ್ಕಾರ, ಶಿಕ್ಷಣ ಇಲಾಖೆ ಶಾಲಾ ಕೊಠಡಿಗಳಿಗೆ ಕಾಯಕಲ್ಪ ನೀಡಲು ಮಾತ್ರ ಮುಂದಾಗದಿರುವುದು ವಿಪರ್ಯಾಸದ ಸಂಗತಿ.

ಎರಡು ಕಡೆ ಶಾಲೆ:ನೆಹರು ನಗರದಲ್ಲಿ ಹಾಸನ ರಸ್ತೆಯಲ್ಲಿ ಎರಡು ಕೊಠಡಿ ಮತ್ತು ಹಳೆಬೀಡು ರಸ್ತೆಯ ಎರಡು ಕೊಠಡಿಗಳಲ್ಲಿ ಎರಡು ಕಡೆ ಶಾಲೆ ನಡೆಯುತ್ತಿದ್ದು, ಇವುಗಳ ನಡುವಿನ ಅಂತರ ಅರ್ಧ ಕಿ.ಮೀ ಇದೆ. ಹಾಸನ ರಸ್ತೆಯ ಶಾಲೆಯಲ್ಲಿ 1ರಿಂದ 3ನೇ ತರಗತಿವರೆಗೆ ನಡೆಯುತ್ತಿದೆ. ಇನ್ನೊಂದು ಕೊಠಡಿ ಶಿಥಿಲವಾಗಿ ಮಳೆಗಾಲ ಬಂದರೆ ಸೋರು ವುದರಿಂದ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲಾಗಿದೆ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ:  ಹಳೇಬೀಡು ರಸ್ತೆಯಲ್ಲಿರುವ ಶಾಲೆಯಲ್ಲಿ ಎರಡು ಕೊಠಡಿಗಳಿದ್ದು, ಒಂದರಲ್ಲಿ 4 ರಿಂದ 7 ನೇ ತರಗತಿ ವರೆಗೆ ನಡೆಯುತ್ತಿದ್ದರೆ, ಇನ್ನೊಂದು ಕೊಠಡಿಯಲ್ಲಿ ಮುಖ್ಯ ಶಿಕ್ಷಕರ ಸ್ಥಳ, ಅಕ್ಷರ ದಾಸೋಹ ಆಹಾರ ಪದಾರ್ಥಗಳ ಶೇಖರಣೆ ಹಾಗೂ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶಾಲೆಯ ಅವ್ಯವಸ್ಥೆಯನ್ನು ನೋಡಿದರೆ ಮಕ್ಕಳಿಗೆ ಶಿಕ್ಷಣ ಕಲಿಯಲು ಪೂರಕವಾದ ವಾತವಾರಣ ಇಲ್ಲದಂತಾಗಿದ್ದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೂಡ ಕಡಿಮೆ ಇದೆ.

ಹಾಸನ ರಸ್ತೆಯ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಹಳೇಬೀಡು ರಸ್ತೆ ಶಾಲೆಗೆ ಬರಬೇಕಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳ ಸಂಚಾರ ಇರುತ್ತದೆ. ಶಾಲೆಯ ಮುಂಭಾಗ ಶಬ್ದ ಮತ್ತು ವಾಯು ಮಾಲಿನ್ಯ ಕೂಡ ಇದೆ. ಇಷ್ಟೆಲ್ಲ ಅನಾನುಕೂಲ ಇರುವ ಶಾಲೆಗೆ ಕಾಯಕಲ್ಪ ಕಲ್ಪಿಸುವಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ.

Advertisement

ಸರ್ಕಾರಿ ಶಾಲೆಗಳಿಗೆ ಬಡವರ ದಲಿತರ ಮಕ್ಕಳೇ ಹೆಚ್ಚು ದಾಖಲಾಗುತ್ತಾರೆ.  ಸರ್ಕಾರ  ಮಾತ್ರ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫ‌ಲವಾಗಿರುವುದು ಎದ್ದು ಕಾಣುತ್ತಿದೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಸರ್ಕಾರಿ ಶಾಲೆ ಗಳನ್ನು ಉನ್ನತೀಕರಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದದಾಗ ಮಾತ್ರ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಶಾಲೆಯ ಕೊಠಡಿಗಳ ದುರಸ್ತಿ  ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದರೆ ಬಡ, ಮಧ್ಯಮ ವರ್ಗ,  ದುರ್ಬಲ ವರ್ಗದವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ.

ಕೊಠಡಿ ಕೊರತೆ: ಅಧಿಕಾರಿಗಳಿಗೆ ಮಾಹಿತಿ  ನಗರದ ನೆಹರು ನಗರದಲ್ಲಿ ಎರಡು ಕಡೆ  ಶಾಲೆ ನಡೆಯುತ್ತಿದ್ದು, ಶಾಲೆಯಲ್ಲಿ 1ರಿಂದ  7 ನೇ ತರಗತಿಯವರೆಗೆ ಒಟ್ಟು 29 ಮಕ್ಕಳು ಕಲಿಯುತ್ತಿದ್ದಾರೆ. ಕೊಠಡಿಗಳ ಸಂಖ್ಯೆ  ಕಡಿಮೆ ಇರುವುದರಿಂದ ಹಾಸನ ರಸ್ತೆಯ ಶಾಲೆಯಲ್ಲಿ 1 ರಿಂದ 3 ನೇ ತರಗತಿ ವರೆಗೆ 11 ಮಕ್ಕಳಿಗೆ ನಲಿಕಲಿ ಪಾಠ ಮಾಡಲಾಗುತ್ತಿದೆ. ಮಳೆ ಗಾಲದಲ್ಲಿ ಈ ಶಾಲೆಯಲ್ಲಿ ಯಾವುದೇ ತರಗತಿ ಮತ್ತು ಇನ್ನಿತರೆ ಚಟುವಟಿಕೆ ನಡೆಸುವುದಿಲ್ಲ.  ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟಡದ ವಿಚಾರವಾಗಿ ತಿಳಿಸಿದ್ದೇವೆ ಎಂದು ಶಾಲೆಯ ಮುಖ್ಯ ಶಿಕ್ಷಕ ಸುರೇಂದ್ರ ಉದಯವಾಣಿಗೆ ತಿಳಿಸಿದರು.

ಸರ್ಕಾರ ತಾಲೂಕಿನಲ್ಲಿ ಶಿಥಿಲಗೊಂಡಿರುವ ಮತ್ತು ರಿಪೇರಿ ಆಗಬೇಕಿರುವ ಶಾಲೆಗಳ ಮಾಹಿತಿ ನೀಡಲು ಸೂಚನೆ ನೀಡಿದ್ದು,  ಅದರಂತೆ ಸಿಆರ್‌ಪಿಗಳು ಪ್ರತಿ ಶಾಲೆಗೆ ತೆರಳಿ ವರದಿ ನೀಡುತ್ತಿದ್ದಾರೆ. ನೆಹರು ನಗರದ ಶಾಲೆಯನ್ನು ಸಹ ರಿಪೇರಿ ಮಾಡಲು ಕ್ರಮ ಕೈಗೊಳ್ಳುವುದಲ್ಲದೆ  ಶೀಘ್ರವೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.-ಕೆ.ಪಿ.ನಾರಾಯಣ್‌, ಕ್ಷೇತ್ರ ಶಿಕ್ಷಣಾಧಿಕಾರಿ

– ಡಿ.ಬಿ.ಮೋಹನ್‌ಕುಮಾರ್‌

 

Advertisement

Udayavani is now on Telegram. Click here to join our channel and stay updated with the latest news.

Next