Advertisement

School: 1 ನೇ ತರಗತಿಗೆ ಪ್ರವೇಶಕ್ಕೆ 6 ವರ್ಷ ತುಂಬಿರಬೇಕು: ಹೈಕೋರ್ಟ್‌

09:18 PM Aug 09, 2023 | Team Udayavani |

ಬೆಂಗಳೂರು: ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

Advertisement

ಈ ಸಂಬಂಧ 2022ರ ಜುಲೈ 26ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನಾಲ್ಕು ವರ್ಷದ ತಮ್ಮ ಪುತ್ರಿ ಪ್ರಸಕ್ತ ವರ್ಷದಲ್ಲಿ ಎಲ್‌ಕೆಜಿ ಕಲಿಯಲು ಅನುಮತಿಸಬೇಕು ಎಂದು ಕೋರಿ ಮಗುವಿನ ತಂದೆ ಬೆಂಗಳೂರು ನಿವಾಸಿ ಅನಿಕೇತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಅಧಿಸೂಚನೆಯನ್ನು ಎತ್ತಿ ಹಿಡಿದು ಆದೇಶಿಸಿತು.

ಮಾರ್ಗಸೂಚಿ ತಂದಿರುವ ಹಿಂದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಉದ್ದೇಶಿವಿದೆ ಅನ್ನುವುದು ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಮನದಟ್ಟು ಆಗಿದೆ. ಹೀಗಾಗಿ, ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿ ಅದೇ ತರಗತಿಯಲ್ಲಿ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಮಾರ್ಗಸೂಚಿಯಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಲ್ಲದೇ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅಳವಡಿಸಿಕೊಂಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ಮತ್ತು ಗರಿಷ್ಠ ಅರ್ಹತಾ ಮಾನದಂಡವನ್ನು ಸರಿಯಾಗಿ ಮಾರ್ಪಾಡು ಮಾಡಿದೆ. ವಿದ್ಯಾಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿರುವ ಪ್ರವೇಶಾತಿ ಮಾರ್ಗಸೂಚಿಗಳು ಸಿಂಧುವಾಗಿದ್ದು, ಎನ್‌ಇಪಿಗೆ ಅನುಗುಣವಾಗಿವೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು 2020ರ ಮೇ 11ರ ಅಧಿಸೂಚನೆಯ ಪ್ರಕಾರ ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 5.5 ವರ್ಷ ಆಗಿರಬೇಕು. ಎಲ್‌ಕೆಜಿಗೆ ಮಗು ಸೇರಿಸಲು 3.5 ವರ್ಷ ಆಗಿರಬೇಕು ಎಂದು ಹೇಳಲಾಗಿದೆ. ಈ ಅಧಿಸೂಚನೆಯು ತಮಗೆ ಅನ್ವಯವಾಗುತ್ತದೆಯೇ ವಿನಾ ಹೊಸ ಅಧಿಸೂಚನೆ ಅನ್ವಯಿಸುವುದಿಲ್ಲ ಎಂದು ವಾದಿಸಿದ್ದರು.

Advertisement

ರಾಜ್ಯ ಸರ್ಕಾರದ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ಅವರು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009ರ ನಿಬಂಧನೆಗಳು ಮತ್ತು ಎನ್‌ಇಪಿಯನ್ನು ಗಮನದಲ್ಲಿಟ್ಟುಕೊಂಡು ಒಂದನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಿಷಿಕಾಳನ್ನು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಕೋರಿದ್ದರು. ಇದನ್ನು ಮನ್ನಿಸಿ, ಈ ಸಂಬಂಧ ಶಾಲೆಯು ಶುಲ್ಕವನ್ನೂ ಪಾವತಿಸಿಕೊಂಡಿತ್ತು. ಆದರೆ, 2023ರ ಜೂನ್‌ 1ಕ್ಕೆ ಸರಿಯಾಗಿ ತಿಷಿಕಾ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಆಕೆ ಎಲ್‌ಕೆಜಿಗೆ ಪ್ರವೇಶ ಪಡೆಯಲು ಅರ್ಹಳಲ್ಲ ಎಂದು ಶಾಲೆ ಹೇಳಿತ್ತು. ಇದರ ಹಿನ್ನೆಲೆಯಲ್ಲಿ ತಿಷಿಕಾ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next