ವಾಡಿ: ಶಾಲೆಗೆ ಬೀಗ ಬಿದ್ದು ವರ್ಷಗಳೇ ಕಳೆದಿವೆ. ತರಗತಿ ಕೋಣೆಗಳಲ್ಲೀಗ ಮದ್ಯದ ಬಾಟಲಿಗಳು ಬಿದ್ದಿವೆ. ಆಟದ ಅಂಗಳದಲ್ಲಿ ದನ-ಕರುಗಳು ಹುಲ್ಲು ಮೇಯುತ್ತಿವೆ. ಪಾಠಗಳಿಂದ ದೂರ ಉಳಿದ ವಿದ್ಯಾರ್ಥಿಗಳು ತಮ್ಮದೇ ಶಾಲೆ ಎದುರು ಹಸುಗಳ ಮಧ್ಯೆ ಮೈಮರೆಯುತಿದ್ದಾರೆ. ಬೂಟು, ಬೆಲ್ಟಾ, ಟಾಯ್ ಧರಿಸಿ ಪುಸ್ತಕ ಹಿಡಿದು ಬರುತ್ತಿದ್ದ ಗ್ರಾಮೀಣ ಮಕ್ಕಳು ಈಗ ಊಟದ ಬುತ್ತಿ, ಬೆತ್ತ ಹಿಡಿದು ದನಗಳ ಕಾಯುವಂತಾಗಿದೆ.
ಮಹಾಮಾರಿ ಕೊರೊನಾ ಹಳ್ಳಿಗಾಡಿನ ವಿದ್ಯಾವಂತ ಹುಡುಗರ ಬಾಳಿನ ಮೇಲೆ ಕ್ರೌರ್ಯ ಮೆರೆದಿರುವುದು ವಾಸ್ತವ ಸತ್ಯ. “ಬಾ ಮರಳಿ ಶಾಲೆಗೆ’ ಎನ್ನುತ್ತಿದ್ದ ಸರ್ಕಾರ ಸೋಂಕಿನ ಭೀತಿಯಿಂದ ಶಾಲೆಗೆ ಬೀಗ ಜಡಿದಿದೆ. ಶಾಲೆ, ಶಿಕ್ಷಣ ಮತ್ತು ಶಿಕ್ಷಕರಿಂದ ದೀರ್ಘ ಕಾಲ ದೂರ ಉಳಿದ ಮಕ್ಕಳ ಮಾನಸಿಕ ಸ್ಥಿತಿಮಿತಿ ಹದಗೆಟ್ಟಿದೆ. ಸರಕಾರ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಾಲೆಗಳನ್ನು ಬಂದ್ ಮಾಡಿದ್ದರೆ, ಹಸಿವಿಗೆ ಹೆದರಿದ ಪೋಷಕರು ಹಸುಗಳ ಹಿಂದೆ ಮಕ್ಕಳನ್ನು
ಕಳುಹಿಸುತ್ತಿದ್ದಾರೆ.
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸಮರ್ಪಕವಾದ ಕಾಂಪೌಂಡ್ ಇಲ್ಲದ ಕಾರಣ ಮಕ್ಕಳ ಆಟದ ಮೈದಾನ ಅಕ್ಷರಶಃ ಗೋಮಾಳವಾಗಿ ಪರಿವರ್ತನೆಯಾಗಿದೆ. ತಾವು ಪಾಠ ಕೇಳಲು ಬರುತ್ತಿದ್ದ ಶಾಲೆ ಅಂಗಳದಲ್ಲಿ ತಾವೇ ದನ ಕಾಯುವ ಸ್ಥಿತಿ ಬರುತ್ತದೆ ಎಂದು ವಿದ್ಯಾರ್ಥಿಗಳು ಕನಸು ಮನಸ್ಸಿನಲ್ಲೂ ಯೋಚಿಸಿರಲಿಕ್ಕಿಲ್ಲ. ಈ ಮನಕಲುಕುವ ಘಟನೆಗಳು ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿವೆ. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ದನಗಳ ಜತೆಗೆ ಊರಿನ ದನಗಳನ್ನು ಕೂಲಿಗಾಗಿ ಕಾಯಲು ಮುಂದಾಗಿದ್ದಾರೆ. ಶಾಲೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಒಂದೆಡೆಯಾದರೆ, ವಿದ್ಯಾರ್ಥಿಗಳು ಜೀವನೋ ಪಾಯಕ್ಕೆ ಅನ್ಯಮಾರ್ಗ ತುಳಿದಿರುವ ಆತಂಕ ಇನ್ನೊಂದೆಡೆಯಾಗಿದೆ.
ಶಾಲೆ ತೆರೆಯದೆ ವರ್ಷವೇ ಕಳೆಯಿತು. ಆಟದ ಅಂಗಳದಲ್ಲಿ ಸಾಕಷ್ಟು ಹುಲ್ಲು-ಮುಳ್ಳುಕಂಟಿ ಬೆಳೆದಿವೆ. ಊರಿನ ಪುಂಡ ಹುಡುಗರೆಲ್ಲ ಸಂಜೆ ಆಗುತ್ತಿದ್ದಂತೆ ಶಾಲೆಗೆ ನುಗ್ಗುತ್ತಾರೆ. ಮದ್ಯ ಕುಡಿದು ಬಾಟಲಿ ಬಿಸಾಡುತ್ತಾರೆ. ಪರಿಣಾಮ ಇಡೀ ಶಾಲೆ ಆವರಣದಲ್ಲಿ ಗಾಜುಗಳು ಹರಡಿಕೊಂಡಿವೆ. ಕಾಂಪೌಂಡ್ ನಿರ್ಮಾಣ ಅರ್ಧಂಬರ್ಧ ಆಗಿದ್ದರಿಂದ ದನಕರುಗಳು ಶಾಲೆಗೆ ಬರುತ್ತವೆ. ಶಾಲೆ ವಂಚಿತ ಮಕ್ಕಳು ಅನಿವಾರ್ಯವಾಗಿ ದನ ಕಾಯಲು ಹೋಗುತ್ತಿದ್ದಾರೆ.
ಭೀಮಣ್ಣ ಕೇಸಬಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ,
ಸರ್ಕಾರಿ ಪ್ರೌಢ ಶಾಲೆ, ರಾವೂರ
*ಮಡಿವಾಳಪ್ಪ ಹೇರೂರ