ಅಮೆರಿಕ : ಕೋವಿಡ್-19ನ ದಾಳಿಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿದ್ದು, ಬೆಸಗಿ ರಜೆ ಎಂದು ಆರಾಮಗಿ ಕಾಲ ಕಳಿಯಬೇಕಿದ್ದ ಮಕ್ಕಳಿಂದ ಹಿಡಿದು ಸದಾ ಕೆಲಸ ಎಂದು ಬೀಗುತ್ತಿದ್ದ ಹೆತ್ತವರು ಮತ್ತೆ ಆರೋಗ್ಯಕ್ಕಾಗಿ ಪಾರ್ಕ್ ವಾಕಿಂಗ್ ಅಂತ ಸುತ್ತಾಡುತ್ತಿದ್ದ ವಯೋವೃದ್ಧರನ್ನು ಈ ಡೆಡ್ಲಿ ವೈರಸ್ ನಾಲ್ಕು ಗೋಡೆಗಳ ಮಧ್ಯ ಬಂಧಿ ಮಾಡಿದೆ.
ಅದರಲ್ಲಂತೂ ಶೈಕ್ಷಣಿಕ ವ್ಯವಸ್ಥೆಯ ಕೋವಿಡ್ ವಕ್ರದೃಷ್ಟಿ ಕೊಂಚ ಹೆಚ್ಚಾಗಿಯೇ ಬಿದ್ದಿದ್ದು, ಮಕ್ಕಳು ಪಠ್ಯ ಮತ್ತು ಪಠೇತ್ಯರ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ ಹೆತ್ತವರಿಗೂ ಮಕ್ಕಳ ಭವಿಷ್ಯದ ಕುರಿತು ಚಿಂತೆ ಕಾಡುತ್ತಿದ್ದು, ಶಿಕ್ಷಣ ಸಂಸ್ಥೆಗಳು ಪ್ರಾರಂಭಕ್ಕೆ ಯಾವಾಗ ಸಮಯ ಒದಗಿ ಬರುತ್ತದೆ ಎಂದು ಕಾಯುತ್ತಿದ್ದಾರೆ.
ಇದೆಲ್ಲದರ ನಡುವೆ ಇಲ್ಲೋರ್ವ ಗ್ರಂಥಪಾಲಕಿ ಮಕ್ಕಳನ್ನು ಓದಿನತ್ತ ಸೆಳೆಯಲು ವಿಭಿನ್ನ ಮಾರ್ಗವೊಂದನ್ನು ಕಂಡುಕೊಂಡಿದ್ದು, ಲಾಕ್‌ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ದೃಷ್ಟಿಯಿಂದ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳಸಲು ನೆರವಾಗಿದ್ದಾರೆ.
ಹೌದು ವರ್ಜೀನಿಯಾ ಮೂಲದ ಗ್ರಂಥಾ ಪಾಲಕಿಯೊಬ್ಬರು ವಿದ್ಯಾರ್ಥಿಗಳ ಜ್ಞಾನರ್ಜನೆಯನ್ನು ವೃದ್ಧಿಸುವತ್ತ ಕಾರ್ಯಾಚರಿಸಿದ್ದು, ಡ್ರೋನ್ ಮೂಲಕ ಮನೆ ಬಾಗಿಲಿಗೆ ಪುಸ್ತಕಗಳನ್ನು ಕಳುಹಿಸುತ್ತಿದ್ದಾರೆ.
ಸ್ಥಳೀಯ ಶಾಲೆಯೊಂದರ ಗ್ರಂಥಾಲಯದಲ್ಲಿ ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿರುವ ಕೆಲ್ಲಿ ಪಾಸ್ಸೆ ಈ ವಿನೂತನ ಯೋಜನೆಯನ್ನು ಪ್ರಾರಂಭಿಸಿದ್ದು, ಪರಿಸ್ಥಿತಿ ತಿಳಿ ಆಗುವವರೆಗೂ ಬೇರೆ ಶಾಲೆಗಳಲ್ಲೂ ಇದೇ ನಿಯಮವನ್ನು ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆನ್ಲ„ನ್ ಫಾರ್ಮ್ ಮೂಲಕ ಯಾವೆಲ್ಲಾ ಪುಸ್ತಗಳು ಬೇಕೆಂದು ತಿಳಿದುಕೊಂಡು, ಅವುಗಳನ್ನು ಪ್ಯಾಕ್ ಮಾಡಿ ಡ್ರೋನ್ ಮೂಲಕ ಕಳುಹಿಸುಕೊಡುತ್ತಿರುವ ಪಾಸ್ಸೆ ಅವರ ಕಾರ್ಯ ವೈಖರಿಗೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.