Advertisement

ಶಾಲೆಯೇ ಚುಕುಬುಕು ರೈಲು!

03:40 PM Apr 26, 2019 | pallavi |

ಬೆಟಗೇರಿ: ರೈಲು ಡಬ್ಬಿಯಲ್ಲಿ ಪಾಠ ಹೇಳುವ ಮೇಷ್ಟ್ರು, ರೈಲಿನಲ್ಲಿ ಕುಳಿತು ಪಾಠ ಕೇಳುವ ಮಕ್ಕಳು, ಆಟದೊಂದಿಗೆ ಪಾಠಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಇದು ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯ ಹೂಲಿಕಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ. ಇಲ್ಲಿ ಶಾಲಾ ಕೊಠಡಿಗಳಿಗೆ ರೈಲು ಚಿತ್ರ ಬಿಡಿಸಿ ಥೇಟ್ ರೈಲು ಗಾಡಿಯಂತೆಯೇ ಮಾಡಿದ್ದಾರೆ.

Advertisement

ಸರ್ಕಾರ ಹತ್ತು ಹಲವು ಯೋಜನೆಗಳ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತಿದೆ. ಆದರೆ ಈ ಶಾಲೆಗೆ ವಿಶಿಷ್ಟ ರೀತಿಯ ಬಣ್ಣ ಬಳಿದು, ರೈಲು ಚಿತ್ರ ಬಿಡಿಸಿ, ಶಾಲೆಯ ಚಿತ್ರಣವನ್ನು ಬದಲಿಸಿ ಆಕರ್ಷಣಿಯವಾಗಿ ಕಾಣುವಂತೆ ಮಾಡಿ, ಶಾಲಾ ವಂಚಿತ ಮಕ್ಕಳನ್ನು ಸಹ ಶಾಲೆಯತ್ತ ಸೆಳೆಯಲು ಶಿಕ್ಷಕರು ಹಾಗೂ ಸ್ಥಳೀಯ ಶಿಕ್ಷಣಪ್ರೇಮಿಗಳು ಪ್ರಯತ್ನ ನಡೆಸಿದ್ದಾರೆ.

ಇಂದಿನ ಖಾಸಗಿ ಶಾಲೆಗಳಿಗಳಿಗಿಂತ ತಾವೇನೂ ಕಡಿಮೇ ಇಲ್ಲ ಎನ್ನುವಂತೆ ಈ ಸರಕಾರಿ ಕನ್ನಡ ಶಾಲೆ ಇಂದು ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ. ತುಸು ದೂರದಲ್ಲಿಯೇ ಎರಡ್ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದರೂ ಈ ಶಾಲೆಯಲ್ಲಿ 1-7ನೇ ತರಗತಿವರೆಗೆ ಒಟ್ಟು 75 ಜನ ವಿದ್ಯಾರ್ಥಿಗಳಿದ್ದು, ನಾಲ್ಕು ಶಾಲಾ ಕೊಠಡಿಗಳಿವೆ, ಮೂವರು ಶಿಕ್ಷಕರಿದ್ದಾರೆ. ಆಟದ ಮೈದಾನವೂ ಚಿಕ್ಕದಿದೆ. ಆದರೂ ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸಲು ಆಗಾಗ ಸಿಹಿ ಸಿಹಿಯಾದ ವಿವಿಧ ಖಾದ್ಯಗಳನ್ನು ಮಾಡಿ ತರತರಹದ ಬಿಸಿಯೂಟ ನೀಡುತ್ತಿದ್ದು, ಜೊತೆಗೆ ಶಾಲೆಯ ನಲಿಕಲಿ ತರಗತಿಯ ಕೊಠಡಿಯಲ್ಲಿ ವಿಶಿಷ್ಟವಾಗಿ ಪಠ್ಯದ ವಿವಿಧ ಕಲಿಕಾ ಚಿತ್ರ ಬಿಡಿಸಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ.

ಶಾಲೆಯ ಶಿಕ್ಷಕರಾದ ಎಸ್‌.ಕೆ.ಮಲ್ಲೇಶ, ಪಿ.ಎಂ.ಬಡ್ಲಿ, ಅತಿಥಿ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹಾದಿಮನಿ ಮತ್ತು ಸದಸ್ಯರು, ಪಾಲಕರು, ಸ್ಥಳೀಯ ಶಿಕ್ಷಣಪ್ರೇಮಿಗಳ ನಿರ್ಧಾರ, ಹಾಗೂ ಅವರ ಸಹಾಯ, ಸಹಕಾರದ ಕೊಡುಗೆಯಿಂದ ಶಾಲೆಗೆ ಹೊಸ ಬಣ್ಣ ಬಳಿದು ಶಾಲೆಯ ಕೊಠಡಿಗಳ ಮುಂಭಾಗದ ಚಿತ್ರಣವನ್ನು ಒಂದು ರೈಲು ಬೋಗಿಯಂತೆ ಚಿತ್ರಿಸಿ ಬಣ್ಣ ಬಳಿಯಲಾಗಿದೆ. ಶಾಲೆಯನ್ನು ಆಕರ್ಷಕ ರೈಲಿನಂತೆ ಮಾಡುವುದರಿಂದ ಶಾಲೆಯ ಮಕ್ಕಳ ಹಾಜರಾತಿ ಹೆಚ್ಚುತ್ತಿದೆ. ಅಲ್ಲದೇ ಮಕ್ಕಳು ಹೊಸ ಹುರುಪಿನಿಂದ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಶಾಲೆಗೆ ಹೊಸತೊಂದನ್ನು ಮಾಡಬೇಕೆಂದು ಆಲೊಚಿಸಿ ರೈಲು ಇಂಜಿನ್‌ ಮತ್ತು ಡಬ್ಬಿಗಳ ತರಹ ಚಿತ್ರ ಬಿಡಿಸಿದ್ದೆವೆ. ಈಗ ನಿತ್ಯ ಮಕ್ಕಳು ರೈಲು ಹತ್ತಿ ಇಳಿದಂತೆ ಖುಷಿ ಪಡುತ್ತಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಎಸ್‌.ಎಲ್.ಗುಂಡಕಲ್ಲಿ ಅವರು ಹೇಳುತ್ತಾರೆ.

ಇಲ್ಲಿಯ ಹೂಲಿಕಟ್ಟಿ ತೋಟದ ಶಾಲೆಯ ಸಮಗ್ರ ಅಭಿವೃದ್ಧಿಗೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ-ಸದಸ್ಯರು, ಪಾಲಕರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ನೀಡುತ್ತಿರುವ ಸಹಾಯ, ಸಹಕಾರ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ. ಶಿಕ್ಷಕರ ಪ್ರಾಮಾಣಿಕ ಸೇವೆಯಿಂದ ಶಾಲೆಯ ಸಮಗ್ರ ಪ್ರಗತಿ, ಮಕ್ಕಳ ದಾಖಲಾತಿಯೂ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ ಅಂಬುವುದು ಶಿಕ್ಷಣ ಪ್ರೇಮಿಗಳ ಅನಿಸಿಕೆ.

ನಮ್ಮ ಶಾಲೆಗೆ ರೈಲು ತರಹ ಹಚ್ಚಿದ ಬಣ್ಣ ನೋಡಾಕ್‌ ಬಾಳ್‌ ಖುಷಿ ತಂದಿದೆ. ನಮಗೂ ರೈಲಿನಲ್ಲಿ ಹತ್ತಿ ಇಳಿದಂತೆ ಮನಸ್ಸಿಗೆ ಒಂಥರಾ ತುಂಬಾ ಖುಷಿ ಅನಸ್ತ್ತ್ರೈತಿ.
•ಶಿವಾನಂದ ಕೋಣಿ 7ನೇ ತರಗತಿ ಶಾಲೆಯ ವಿದ್ಯಾರ್ಥಿ
ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ನಾವು ಇಂತಹ ವಿನೂತನ ಪ್ರಯತ್ನ ಮಾಡಿದ್ದೇವೆ. ಸ್ಥಳೀಯ ಶಿಕ್ಷಣಪ್ರೇಮಿಗಳು, ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆಟದ ಮೈದಾನ ಹಾಗೂ ಶಾಲಾ ಕೊಠಡಿಗಳ ಕೊರತೆಯಿಂದ ಸ್ವಲ್ಪ ಸಮಸ್ಯೆ ಎದುರಾಗುತ್ತಿದೆ.
•ಎಸ್‌.ಎಲ್.ಗುಂಡಕಲ್ಲಿ, ಮುಖ್ಯ ಶಿಕ್ಷಕ
ಶಾಲೆಯ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ-ಸದಸ್ಯರು ಹಾಗೂ ಶಿಕ್ಷಣಪ್ರೇಮಿಗಳ ಸಹಾಯ ಸಹಕಾರ ಮೆಚ್ಚುವಂತದು. ಶಾಲೆಯು ಅಚ್ಚುಕಟ್ಟಾಗಿ ಅಂದವಾಗಿದ್ದರೆ ಮಕ್ಕಳ ಕಲಿಕೆಗೆ ಪೂರಕವಾಗುತ್ತದೆ. ಈ ಶಾಲೆಗೆ ಇನ್ನೂ ಅವಶ್ಯಕ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.
•ಜಿ.ಬಿ. ಬಳಿಗಾರ, ಬಿಇಒ ಗೋಕಾಕ ಶೈಕ್ಷಣಿಕ ವಲಯ.
ಅಡಿವೇಶ ಮುಧೋಳ
Advertisement
Advertisement

Udayavani is now on Telegram. Click here to join our channel and stay updated with the latest news.

Next