ಒಂದು ಕಡೆ ಸರಕಾರ ಜುಲೈ ಒಂದರಿಂದ ಹೊಸ ಶೈಕ್ಷಣಿಕ ವರ್ಷದ ಆರಂಭ ಎಂದು ಹೇಳುತ್ತಿದ್ದರೆ, ಮತ್ತೂಂದು ಕಡೆ ಈಗಾಗಲೇ ಖಾಸಗಿ ಶಾಲೆಗಳಲ್ಲಿ ಆನ್‌ಲೈನ್ ಪಾಠಗಳು ಶುರುವಾಗಿರುವ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲ, ಜೂ.15ರಿಂದ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವಂತೆಯೂ ಸರಕಾರ ಸೂಚನೆ ನೀಡಿದೆ. ಹಾಗಿದ್ದೂ ಈಗಾಗಲೇ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡಿರುವ ಶಾಲೆಗಳು, ಆನ್‌ಲೈನ್ ತರಗತಿ ಆರಂಭಿಸಿದ್ದು, ಹೆತ್ತವರನ್ನು ಗೊಂದಲಕ್ಕೆ ಸಿಲುಕಿಸಿದೆ. ಜತೆಗೆ ಶುಲ್ಕದ ಬಗ್ಗೆಯೂ ರಾಜ್ಯ ಸರಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಳ್ಳದಿರುವುದು ಹೆತ್ತವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಜೂ.4ರಂದೇ ರಾಜ್ಯ ಸರಕಾರ ಶಾಲಾರಂಭದ ಬಗ್ಗೆ ಪ್ರಕಟನೆೆ ಹೊರಡಿಸಿತ್ತು. ಅಂದರೆ, ಜೂ.15ರಿಂದ ಶಾಲಾ ದಾಖಲಾತಿ ಆರಂಭವಾಗಬೇಕು, ಜು.1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಮೊದಲ ಅವಧಿ ಜು.1ರಿಂದ ಅ. 9ರ ವರೆಗೆ ಇರಲಿದೆ. ಅನಂತರ 10 ದಿನಗಳ ರಜೆ. ಒಟ್ಟು 304 ದಿನಗಳಲ್ಲಿ 66 ರಜಾ ದಿನ, ವಿವೇಚನ ರಜೆ, ದಸರಾ ರಜೆ ಹೊರತುಪಡಿಸಿ ಶಾಲೆಗಳಿಗೆ 223 ದಿನಗಳು ಸಿಗಲಿವೆ ಎಂದಿತ್ತು. ಅಲ್ಲದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಆಯುಕ್ತರೇ ಅಂದು ಪ್ರಕಟನೆ ಹೊರಡಿಸಿ, ಜೂ. 15ರಿಂದ ಆಗಸ್ಟ್ 31ರ ವರೆಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದಿದ್ದರು.
ಇದರ ಮಧ್ಯೆಯೇ ಸರಕಾರ ಪ್ರಕಟಿಸಿರುವಂತೆಯೇ ಶಾಲಾ ದಾಖಲಾತಿ ಆರಂಭಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಪೋಷಕರು, ಶಾಲಾಡಳಿತ ಮಂಡಳಿಗಳು ಶುಲ್ಕವನ್ನು ನಿಗದಿ ಪಡಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ, ಸರಕಾರ ಮಾತ್ರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಳೆದ ವರ್ಷವೂ ಅಳೆದು, ತೂಗಿ ಸರಕಾರ ಬಹಳಷ್ಟು ತಡವಾಗಿ ಶಾಲಾ ಶುಲ್ಕ ನಿಗದಿ ಮಾಡಿತ್ತು. ಶೇ.30ರಷ್ಟು ಶುಲ್ಕವನ್ನು ಕಡಿತಗೊಳಿಸುವಂತೆ ಶಾಲಾಡಳಿತ ಮಂಡಳಿಗಳಿಗೆ ಸೂಚನೆ ನೀಡಿತ್ತು. ವಿಚಿತ್ರವೆಂದರೆ ಆ ಹೊತ್ತಿಗಾಗಲೇ ಎಷ್ಟೋ ಶಾಲೆಗಳು ಪೂರ್ಣ ಶುಲ್ಕವನ್ನು ವಸೂಲಿ ಮಾಡಿಕೊಂಡಿದ್ದವು. ಈಗ ಮತ್ತೆ ಅದೇ ರೀತಿಯಲ್ಲಿ ತಡ ಮಾಡಿದರೆ, ಶಾಲೆಗಳು ಪೂರ್ಣ ಶುಲ್ಕ ಕಟ್ಟುವಂತೆ ಹೆತ್ತವರ ಮೇಲೆ ಒತ್ತಡ ತರಬಹುದು. ಹೀಗಾಗಿ, ಆದಷ್ಟು ಬೇಗ ಸರಕಾರ ಶುಲ್ಕ ನಿಗದಿ ಮಾಡಬೇಕಿದೆ.
ಕಳೆದ ವರ್ಷದಂತೆ ಈಗಲೂ ಕೊರೊನಾ ಹೋಗಿಲ್ಲ. ಸದ್ಯ ಲಾಕ್‌ಡೌನ್ ಜಾರಿಯಲ್ಲಿದ್ದು ಹೆತ್ತವರು ಕೆಲಸ ಕಳೆದುಕೊಂಡು, ದುಡಿಮೆ ಇಲ್ಲದೇ ಕಷ್ಟ ಅನುಭವಿಸಿದ್ದಾರೆ. ಇಂಥ ಸಂದರ್ಭದಲ್ಲಿ ಶುಲ್ಕ ನಿಗದಿ ಮಾಡುವ ಜತೆಗೇ, ಶುಲ್ಕ ಕಡಿತದಂಥ ಕ್ರಮಕ್ಕೂ ಮುಂದಾಗಬೇಕು. ಕನಿಷ್ಠ ಪಕ್ಷ ಕಳೆದ ಬಾರಿಯಂತೆಯೇ ಶೇ.30ರಷ್ಟು ಶುಲ್ಕವನ್ನಾದರೂ ಕಡಿತ ಮಾಡಬೇಕು. ಸದ್ಯ ಶಾಲೆಗಳು ಕೂಡ ತಾವು ನಷ್ಟಕ್ಕೀಡಾಗಿದ್ದೇವೆ, ಶುಲ್ಕ ಕಡಿತ ಬೇಡ ಎಂದು ಸರಕಾರದ ಮುಂದೆ ಬೇಡಿಕೆ ಸಲ್ಲಿಸಿವೆ. ಆದರೆ, ಸರಕಾರ ಹೆತ್ತವರ ಕಷ್ಟವನ್ನೂ ಮನಸ್ಸಿನಲ್ಲಿ ಇರಿಸಿಕೊಂಡು ಶುಲ್ಕ ನಿಗದಿ ಮಾಡಬೇಕು.
ಶಾಲಾರಾಂಭ ಮತ್ತು ಶುಲ್ಕ ನಿಗದಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಯಾರ ಒತ್ತಡಕ್ಕೂ ಮಣಿಯದೇ ರಾಜ್ಯ ಸರಕಾರ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಈ ನಿರ್ಧಾರದಿಂದ ಯಾರಿಗೂ ಅನ್ಯಾಯವಾಗಬಾರದು ಎಂಬುದೂ ಮನಸಿನಲ್ಲಿರಬೇಕು.