Advertisement

ಶಾಲಾ ಶುಲ್ಕ ವಾಪಸಾತಿಗೆ ಕ್ರಮ ಕೈಗೊಳ್ಳಿ

07:47 PM Mar 13, 2021 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಕೆಲ ಖಾಸಗಿ ಶಾಲೆಗಳು 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೂ ತರಗತಿ ನಡೆಸುತ್ತಿದ್ದಾರೆ. ಅಂತಹ ಶಾಲೆಗಳಿಗೆ ನೋಟಿಸ್‌ ನೀಡಿ, ಜತೆಗೆ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕ ವಾಪಸಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಡಿಡಿಪಿಐಗೆ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನಿಯಮಾನುಸಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಿಲ್ಲ. ಆದರೆ, ಈ ನಿಯಮ ಉಲ್ಲಂಘನೆ ಮಾಡಿ ಕೆಲ ಖಾಸಗಿ  ಶಾಲೆಗಳು 5ನೇ ತರಗತಿಯೊಳಗಿನ ತರಗತಿ ನಡೆಸುತ್ತಿದ್ದಾರೆ ಎಂದು ಶಶಿಕಲಾ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಕೋವಿಡ್‌-19ರ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಶೇ.70ರಷ್ಟು ಮಾತ್ರ ಶುಲ್ಕ ಕಟ್ಟಿಸಿಕೊಳ್ಳಬೇಕು. ಆದರೆ ಶೇ.100ರಷ್ಟು ಶುಲ್ಕವನ್ನು ಕೆಲವು ಖಾಸಗಿ ಶಾಲೆಗಳು ಕಟ್ಟಿಸಿಕೊಳ್ಳುತ್ತಿವೆ. ಇಂತಹ ಶಾಲೆಗಳ ಮಾಹಿತಿ ಪಡೆದು ಕ್ರಮಕೈಗೊಳ್ಳಬೇಕು ಎಂದರು.

ಡಿಡಿಪಿಐ ಕೆ.ರವಿಶಂಕರ್‌ ರೆಡ್ಡಿ ಪ್ರತಿಕ್ರಿಯಿಸಿ, ಕೋವಿಡ್‌-19ರ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ಪಡೆಯಬಾರದು ಎಂದು ಈಗಾಗಲೇ ಖಾಸಗಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಈ ಕುರಿತು ಎಲ್ಲ ಬಿಇಒಗಳ ಜತೆ ಚರ್ಚಿಸಿ ನಿಯಮ ಉಲ್ಲಂಘಿಸಿರುವ ಖಾಸಗಿ ಶಾಲೆಗಳಿಗೆ ನೋಟಿಸ್‌ ನೀಡಲಾಗುವುದು. ನಿಯಮ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಉಳಿಯುವ ಹಾಸ್ಟೆಲ್‌ ಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅ ಧಿಕಾರಿಗಳಿಗೆ ಜಿಪಂ ಅಧ್ಯಕ್ಷರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಹಲವು ವಸತಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯಗಳಲ್ಲಿ ತರಕಾರಿ, ರೇಷನ್‌, ಕುಡಿಯುವ ನೀರು, ಸೋಲಾರ್‌ ವ್ಯವಸ್ಥೆ ಸಮಸ್ಯೆ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಈಗ ಕಡಿಮೆ ಇದೆ. ಆದಾಗ್ಯೂ ಅವರಿಗೆ ಸಮರ್ಪಕವಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಹಾಸ್ಟೆಲ್‌ಗ‌ಳಲ್ಲಿ ಮಾತ್ರ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ತಾಲೂಕು, ಹೋಬಳಿ ಹಾಗೂ ಹಳ್ಳಿ ಹಂತದ ಹಾಸ್ಟೆಲ್‌ಗ‌ಳಲ್ಲಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಇಂತಹ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿದ್ದಾರೆ. ಅವರಿಗೆ ತೊಂದರೆ ಮಾಡಬೇಡಿ ಎಂದು ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ವಿಷಯ ಪ್ರಸ್ತಾಪಿಸಿ, ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ನಾವು ಮಾತನಾಡಬಾರದು. ಆದರೂ, ಸಿಮೆಂಟ್‌ ಇಟ್ಟಿಗೆಯಿಂದ ಬಾಕ್ಸ್‌ ಚರಂಡಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಇದು ಎಷ್ಟು ಸರಿ ಎಂದು ಲೋಕೋಪಯೋಗಿಇಂಜಿನಿಯರನ್ನು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಸತೀಶ್‌ ಮಾತನಾಡಿ, ಕಡಿಮೆ ಮಳೆ ನೀರು ಹರಿಯುವ ಸ್ಥಳಗಳಲ್ಲಿ ಸಿಮೆಂಟ್‌ ಇಟ್ಟಿಗೆಯಿಂದ ಕಾಮಗಾರಿ ನಡೆಸಲು ಕೇಂದ್ರ ಕಚೇರಿಯಿಂದ ಸೂಚನೆ ಇದೆ. ಕಾಮಗಾರಿ ಗುಣಮಟ್ಟದಲ್ಲಿ ಲೋಪವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕೌಶಲ್ಯ ತಿಪ್ಪೇಸ್ವಾಮಿ, ತ್ರಿವೇಣಿ ಜಿ. ಶಿವಪ್ರಸಾದ್‌ ಗೌಡ, ಆರ್‌.ನರಸಿಂಹರಾಜು, ಜಿಪಂ ಸಿಇಒ ಡಾ.ಕೆ.ನಂದಿನಿದೇವಿ ಸೇರಿದಂತೆ ಜಿಲ್ಲಾಮಟ್ಟದ ಅಧಿ  ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next