ಧಾರವಾಡ: ವರ್ಷದಿಂದ ವರ್ಷಕ್ಕೆ ಶಾಲಾ ದಾಖಲಾತಿಯಲ್ಲಿ ಪ್ರಗತಿ ಕಾಣುತ್ತಿದೆ. ಹೆಚ್ಚು ಮಕ್ಕಳು ಶಾಲೆಗೆ ಸೇರುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದ ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಸಂಖ್ಯೆ 04ರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಾಖಲಾತಿ ಅಕ್ಷರ ಪಲ್ಲಕ್ಕಿ ಶಾಲಾ ಪ್ರಾರಂಭೋತ್ಸವದಲ್ಲಿ ಪಠ್ಯ-ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಈಗಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದರು. ಇಂದು ಸರ್ಕಾರ ಶಾಲಾ ಮಕ್ಕಳಿಗೆ ಉಚಿತ ಪಠ್ಯ-ಪುಸ್ತಕ, ನೋಟ್‌ಬುಕ್, ಸಮವಸ್ತ್ರ, ಶೂ, ಸಾಕ್ಸ್ ಹಾಗೂ ಬೈಸಿಕಲ್ ಮತ್ತು ಮಧ್ಯಾಹ್ನ ಬಿಸಿಯೂಟ, ಹಾಲು ಒಂದನೇಯ ತರಗತಿಯ ಹೆಣ್ಣು ಮಕ್ಕಳಿಗೆ ಹಾಜರಾತಿ ಪೊತ್ಸಾಹಧನ ಪೂರೈಸುತ್ತಿದೆ.
ಇದರಿಂದ ಶಾಲಾ ಹಾಜರಾತಿಯಲ್ಲಿ ಪ್ರಗತಿ ಹೊಂದಿದೆ ಎಂದರು. ಸಾಮಾನ್ಯ ದಾಖಲಾತಿ ಆಂದೋಲನ ಜೂನ್ 1ರಿಂದ 30ರವರೆಗೆ ಜಿಲ್ಲಾದ್ಯಂತ ನಡೆಯಲಿದೆ. ಆದ್ದರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಾಲೆಗೆ ಸೇರಿಸಬೇಕು. ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳು ಶಾಲೆಗೆ ಸೇರಬೇಕು ಹಾಗೂ ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದರು.
ನನ್ನ ನಡೆ ಶಾಲೆ ಕಡೆ ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ, ವಾಹನ, ಟ್ರಾಕ್ಟರ್, ಎತ್ತಿನ ಗಾಡಿಗಳೊಂದಿಗೆ ಏರ್ಪಡಿಸಿದ್ದ ಪ್ರಚಾರಾಂದೋಲನ ಹಾಗೂ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಮಕ್ಕಳಿಗೆ ಹೆಣ್ಣು ಮಕ್ಕಳ ಹಾಜರಾತಿ ಪೊತ್ಸಾಧನದ ಚೆಕ್, ಪಠ್ಯ ಪುಸ್ತಕ, ನೋಟ್ ಬುಕ್, ಸಮವಸ್ತ್ರ,
-ಶೂ, ಸಾಕ್ಸ್, ಸ್ಕೂಲ್ ಬ್ಯಾಗ್ ವಿತರಿಸಿದರು. ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಇಬ್ರಾಹಿಂಪುರ, ಮಹಾನಗರ ಪಾಲಿಕೆ ಸದಸ್ಯ ಯಾಸೀನ್ ಹಾವೇರಿಪೇಟ, ಮುಕ್ತಿಯಾರ್ ಪಠಾಣ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ಇದ್ದರು. ಬಿ.ಇ.ಓ. ಎಸ್.ಎಂ. ಹುಡೇದಮನಿ ವಂದಿಸಿದರು.