Advertisement
ನನ್ನ ಮಗಳು ಈಗ ಮೂರನೇ ತರಗತಿ. ಕಳೆದ ಶೈಕ್ಷಣಿಕ ವರ್ಷ ಮುಗಿಯುವವರೆಗೂ ನಾವು ಬೆಂಗಳೂರಿನಲ್ಲಿದ್ದೆವು. ಅಲ್ಲಿ ಬೆಳಿಗ್ಗೆ 8 ಗಂಟೆಗೇ ಶಾಲೆ ಆರಂಭವಾಗುತ್ತಿತ್ತು. ಹಾಗಾಗಿ 7.50 ರ ಒಳಗೆ ನಾವು ಅವಳನ್ನು ಶಾಲೆಗೆ ಬಿಡಬೇಕಿತ್ತು. ಅಲ್ಲಿನ ಶಾಲೆ ನಾವು ವಾಸವಿದ್ದ ಅಪಾರ್ಟ್ ಮೆಂಟ್‌ನ ಎದುರಿಗೇ ಇದ್ದುದರಿಂದ 7.45ಕ್ಕೆ ಮನೆ ಬಿಟ್ಟರೆ ಸಾಕಿತ್ತು. ನಾನು ಬೆಳಿಗ್ಗೆ 5.30ಕ್ಕೆ ಎದ್ದು, ಮಗಳ ಶಾರ್ಟ್ ಬ್ರೇಕ್ ಹಾಗೂ ಲಂಚ್ ಬ್ರೇಕ್ ಗೆ ಬೇಕಾದ ತಿಂಡಿ ಹಾಗೂ ಅಡುಗೆಯನ್ನು ತಯಾರಿಸಿ ನಂತರ ಅವಳನ್ನು ಎಬ್ಬಿಸುತ್ತಿದ್ದೆ. ಎದ್ದ ಕೂಡಲೇ ಬ್ರಶ್, ನಂತರ ಸ್ನಾನ, ಆಮೇಲೆ ತಿಂಡಿ ತಿನ್ನಿಸಿ, ಯೂನಿಫಾರ್ಮ್ ಹಾಕಿ, ಶೂಸ್ ಹಾಕಿ ಎಷ್ಟೇ ಬೇಗ ಅಂತ ರೆಡಿಯಾದರೂ ಗಡಿಯಾರ 7.45 ತೋರಿಸುತ್ತಿತ್ತು.
Related Articles
Advertisement
ಫಜೀತಿಗಳು ಒಂದಾ ಎರಡಾ…
ಒಮ್ಮೆ ವಿದ್ಯಾರ್ಥಿಗಳನ್ನೆಲ್ಲಾ ಲಾಲ್‌ಬಾಗ್‌ಗೆ ಫೀಲ್ಡ್ ಟ್ರಿಪ್ ಕರೆದುಕೊಂಡು ಹೋಗಿದ್ದರು. ಸೋಮವಾರದಿಂದ ಗುರುವಾರದವರೆಗೆ ಬ್ರೌನ್ ಕಲರ್ ರೆಗ್ಯುಲರ್ ಯುನಿಫಾರ್ಮ್ ಮತ್ತು ಶುಕ್ರವಾರ ಹೌಸ್ ಯುನಿಫಾರ್ಮ್ ಅಂದರೆ ಹೌಸ್ ಟಿ ಶರ್ಟ್ ಮತ್ತು ವೈಟ್ ಸ್ಕರ್ಟ್ ಧರಿಸಬೇಕು ಎಂಬುದು ನಿಯಮ. ಆದರೆ ವಾರದ ಮಧ್ಯದ ದಿನ ಫೀಲ್ಡ್ ಟ್ರಿಪ್‌ಗೆ ಹೌಸ್ ಟಿ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರಿಂದ ಆ ವಾರ ಶುಕ್ರವಾರ ರೆಗ್ಯುಲರ್ ಯುನಿಫಾರ್ಮ್ ಹಾಕಿಕೊಂಡು ಬರುವಂತೆ ಹೇಳಿದ್ದರು. ಆ ಬಗ್ಗೆ ನೋಟ್ ಕೂಡಾ ಕಳುಹಿಸಿದ್ದರು. ನಾನು ಓದಿ ಸೈನ್ ಕೂಡಾ ಮಾಡಿದ್ದೆ. ಆದರೆ ಶುಕ್ರವಾರ ಬಂದಾಗ ಗಡಿಬಿಡಿಯಲ್ಲಿ ಎಂದಿನಂತೆ ಹೌಸ್ ಯುನಿಫಾರ್ಮ್ ಹಾಕಿಸಿ ಕರೆದುಕೊಂಡು ಹೋದೆ. ಶಾಲೆಯ ಹತ್ತಿರ ಹೋಗಿ ನೋಡಿದ್ರೆ ಎಲ್ಲರೂ ರೆಗ್ಯುಲರ್ ಯುನಿಫಾರ್ಮ್ ಹಾಕ್ಕೊಂಡಿದ್ದಾರೆ. ಆಗ ನೆನಪಾಯ್ತು ಡೈರಿ ನೋಟ್ ! ಖಚಿತ ಪಡಿಸಿಕೊಳ್ಳಲು ಮಗಳ ಬಳಿ ಕೇಳಿದಾಗ ಅವಳೂ ಕೂಡಾ “ಹೌದು, ಇವತ್ತು ರೆಗ್ಯುಲರ್ ಯುನಿಫಾರ್ಮ್ ಹಾಕಬೇಕಿತ್ತು’ ಅಂದ್ರು. ಮನೇಲೇ ಹೇಳ್ಬಾರ್ದಿತ್ತಾ ಅಂತ ಕೇಳಿದ್ದಕ್ಕೆ, ನಿಂಗೆ ಮರೆತು ಹೋದ ಹಾಗೆ ನಂಗೂ ಮರೆತು ಹೋಯ್ತು ಅಂತ ಉತ್ತರ ಕೊಟ್ಟಳು. ಇರಲಿ ಬಿಡು, ಮ್ಯಾಮ್ ಹತ್ರ ಇದನ್ನೇ ಹೇಳು ಅಂದರೆ “ಊಹೂಂ, ನಾನು ಹೋಗಲ್ಲ. ಮ್ಯಾಮ್ ಬೈತಾರೆ’ ಅಂತ ಅಳಲು ಶುರು ಮಾಡಿದ್ರು. ನಮ್ಮ ವಾದ ಮತ್ತು ಪ್ರತಿವಾದಗಳನ್ನು ಕೇಳಿಸಿಕೊಂಡ ಸೆಕ್ಯುರಿಟಿ ಗಾರ್ಡ್, ನಿಮ್ಮ ಮನೆ ಇಲ್ಲೇ ಹತ್ತಿರ ಅಲ್ವಾ, ಹೋಗಿ ಚೇಂಜ್ ಮಾಡಿಕೊಂಡು ಬನ್ನಿ ಮ್ಯಾಮ್. ಪ್ರೇಯರ್ ಮಿಸ್ ಆಗುತ್ತೆ ಅಷ್ಟೇ ಅಂತ ಜಡ್ಜ್ಮೆಂಟ್ ಕೊಟ್ಟರು. ಈ ಥರದ ಫಜೀತಿಗಳು ಒಂದಾ ಎರಡಾ…
ಯುದ್ದ ಗೆದ್ದ ಅನುಭವ..
ಕಳೆದ ಶೈಕ್ಷಣಿಕ ವರ್ಷ ಮುಗಿದ ನಂತರ ನಾವು ಉಡುಪಿಗೆ ಬಂದು ನೆಲೆಸಿದೆವು. ಇಲ್ಲಿನ ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಹಾಗಾಗಿ ಇಲ್ಲಿ ನನಗೆ ಆರಾಮ, ಬೆಳಗ್ಗಿನ ಗಡಿಬಿಡಿಗಳಿಲ್ಲ ಅಂತ ಭಾವಿಸಿದ್ದೆ. ಆದರೆ ಯಾವಾಗ ಶಾಲೆ ಶುರುವಾಯಿತೋ; ಆಗ ನನ್ನ ಎಣಿಕೆ ತಪ್ಪು ಅಂತ ನನಗೆ ಗೊತ್ತಾಯಿತು. ಊಟದ ಡಬ್ಬಿ ಕೊಡಬೇಕಾಗಿಲ್ಲ, ಆದರೂ ಶಾರ್ಟ್ ಬ್ರೇಕ್‌ಗೆ ತಿಂಡಿ ಕಳುಹಿಸಬೇಕು! ಮತ್ತೆ ಇಲ್ಲಿ ಶಾಲೆ ದೂರ ಇರುವುದರಿಂದ ಸ್ಕೂಲ್ ಬಸ್‌ನಲ್ಲಿ ಹೋಗುವ ವ್ಯವಸ್ಥೆ ಇದೆ. ಹಾಗಾಗಿ ಸ್ಕೂಲ್ ಬಸ್ ಬರುವುದರೊಳಗೆ ನಾವು ನಿಗದಿತ ಜಾಗದಲ್ಲಿ ಹಾಜರಿರಬೇಕು. ಜೊತೆಗೆ, ಶಾಲೆ ದೂರ ಇರುವುದರಿಂದ ಯಾವುದಾದರೂ ಅಗತ್ಯ ವಸ್ತು ತಪ್ಪಿಹೋದರೆ ತಲುಪಿಸಲು ಸಾಧ್ಯವಿಲ್ಲ. ಹಾಗಾಗಿ ಎರಡೆರಡು ಬಾರಿ ನೋಡಿ ಖಚಿತ ಮಾಡಿಕೊಳ್ಳುವುದು ಅನಿವಾರ್ಯ. ಬೆಂಗಳೂರೇ ಇರಲಿ, ಉಡುಪಿಯೇ ಇರಲಿ, ನಮ್ಮ ಬೆಳಗ್ಗಿನ ಗಡಿಬಿಡಿಗೆ ಮುಕ್ತಿ ಇಲ್ಲ ಎಂಬ ಸತ್ಯ ನನಗೀಗ ಅರಿವಾಗಿದೆ.
ಬೆಳಿಗ್ಗೆ 7.45ಕ್ಕೆ ಮಗಳನ್ನು ಸ್ಕೂಲ್ ಬಸ್ ಹತ್ತಿಸಿ ಮನೆಗೆ ಬಂದು ಕಾಫಿ ಲೋಟ ಹಿಡಿದು ಕುಳಿತಾಗ, ಒಂದು ಯುದ್ಧ ಗೆದ್ದ ನಂತರದ ಸಂಭ್ರಮಾಚರಣೆಯಂತೆ ಭಾಸವಾಗುತ್ತದೆ. ನನ್ನ ಮಗಳೀಗ ಮೂರನೇ ತರಗತಿ. ಇನ್ನು ಹತ್ತು-ಹದಿನಾಲ್ಕು ವರ್ಷ ಈ ಗಡಿಬಿಡಿ ಇದ್ದೇ ಇದೆ. ಈ ಗಡಿಬಿಡಿಯಲ್ಲೂ ಒಂದು ಸುಖವಿದೆ: ಮುಂದೆ ಮಗಳು ದೊಡ್ಡವಳಾಗಿ ಅವಳ ಕೆಲಸ ಅವಳೇ ಮಾಡಿಕೊಳ್ಳುವಾಗ ನಾನು ಈ ಗಡಿಬಿಡಿಯ ಸುಖವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎನ್ನುವ ಅರಿವೂ ನನಗಿದೆ.
–ಅನ್ನಪೂರ್ಣ ಶ್ಯಾನುಭೋಗ್, ಉಡುಪಿ