Advertisement

26 ಅಡಿ ಆಳದಲ್ಲಿದೆ ಶಾಲೆ, ಕಾಲೇಜಿನ ಶೌಚಾಲಯ

10:42 AM Nov 24, 2018 | |

ಬಡಗನ್ನೂರು: ಕುಂಬ್ರ ಕಾಲೇಜು ಮತ್ತು ಹೈಸ್ಕೂಲಿನ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳಬೇಕಾದರೆ 26 ಅಡಿ ಆಳಕ್ಕಿಳಿಯಬೇಕು. ಶೌಚಾಲಯಕ್ಕೆ ತೆರಳಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಶೌಚಾಲಯದ ಮೂರು ದಿಕ್ಕಿನಲ್ಲೂ ಗುಡ್ಡ ಇದೆ. ಇನ್ನೊಂದು ಬದಿಯಲ್ಲಿ ಕಾಡು ಇದೆ. ಆಕಸ್ಮಿಕವಾಗಿ ಏನೇ ಘಟನೆ ನಡೆದರೂ ಇಲ್ಲಿ ಗಮನಕ್ಕೆ ಬರುವುದು ಸುಲಭವಲ್ಲ.

Advertisement

ಕುಂಬ್ರ ಸರಕಾರಿ ಪ.ಪೂ. ಕಾಲೇಜು ಮತ್ತು ಹೈಸ್ಕೂಲ್‌ ತರಗತಿಗಳು ಒಂದೇ ಆವರಣದಲ್ಲಿದೆ. ಒಟ್ಟು 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಬಹುಪಾಲು. ಕಾಲೇಜಿಗೆ ಶೌಚಾಲಯ ಬೇಕೆಂದು ಪ್ರಾರಂಭದ ಹಂತದಲ್ಲಿ ಕಾಲೇಜು ಆಡಳಿತ ಮಂಡಳಿ ಮನವಿ ಮಾಡಿದ್ದು, ಅನುದಾನವೂ ಬಿಡುಗಡೆಯಾಗಿತ್ತು. ನಿರ್ಮಿಸಿದ್ದ ಶೌಚಾಲಯ ಉಪಯೋಗಕ್ಕೆ ಬಾರದಂತಿದೆ. ಕಾಲೇಜಿನಲ್ಲಿ ಇನ್ನೂ ಎರಡು ಶೌಚಾಲಯವಿದೆ. ಅದರಲ್ಲಿ ಒಂದು ಮಾತ್ರ ಸದ್ಯಕ್ಕೆ ಸುಸ್ಥಿತಿಯಲ್ಲಿದೆ.

ಹಾವುಗಳು ಬರುತ್ತಿದೆ
26 ಅಡಿ ಪಾತಾಳದಲ್ಲಿ ಶೌಚಾಲಯವಿದೆ. ಅದರ ಪಕ್ಕದಲ್ಲೇ ಕಾಡು ಇದೆ. ಅಲ್ಲಿಂದ ಹಾವುಗಳು ಬಂದು ಶೌಚಾಲಯ ಸೇರಿಕೊಳ್ಳುತ್ತಿವೆ. ಶೌಚಾಲಯದ ಪಕ್ಕದಲ್ಲೇ ಇರುವ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿದೆ. ಹಾಗಾಗಿ ಅಲ್ಲಿನ ಗಿಡಗಂಟಿಗಳನ್ನು ಶಾಲೆಯವರು ತೆರವುಗೊಳಿಸಲೂ ಆಗುವುದಿಲ್ಲ ಎಂದು ಶಾಲೆಗೆ ಸಂಬಂಧಪಟ್ಟವರು ಹೇಳುತ್ತಾರೆ. ಇಲ್ಲಿ ಶೀಘ್ರ ಶೌಚಾಲಯದ ವ್ಯವಸ್ಥೆಯಾಗಬೇಕು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. 

ಶೌಚಾಲಯಕೆ ಬಾಗಿಲುಗಳೇ ಇಲ್ಲ!
ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡ ಶೌಚಾಲಯದಲ್ಲಿ ಪೂರ್ತಿ ಕತ್ತಲು ಆವರಿಸಿದೆ. ಬಾಗಿಲುಗಳೇ ಇಲ್ಲ. ನೀರಿನ ಸಂಪರ್ಕವೂ ಸಮರ್ಪಕವಾಗಿಲ್ಲ. ಅದರೊಳಗೆ ಏನಾದರೂ ಇರಬಹುದು ಎನ್ನುವ ಭಯದಿಂದ ಬಹುತೇಕ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳುವುದೇ ಇಲ್ಲ ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿನಿಯರು. ಮೂಲಸೌಕರ್ಯದ ಯಾವ ನಿಯಮವೂ ಪಾಲನೆಯಾಗುತ್ತಿಲ್ಲ. 

ಶೌಚಾಲಯ ಆಗಬೇಕು
ಕಾಲೇಜಿಗೆ ಹೊಸದಾದ ಶೌಚಾಲಯ ಬೇಕಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವ ಸರಕಾರಿ ಕಾಲೇಜಿನಲ್ಲಿ ಮೂಲ ಸೌಕರ್ಯ ಇಲ್ಲದೇ ಇರುವುದು ಬಹಳ ಬೇಸರದ ಸಂಗತಿ. ಇರುವ ಹಳೆಯ ಎರಡು ಶೌಚಾಲಯಕ್ಕೆ ವಿದ್ಯಾರ್ಥಿನಿಯರು ತೆರಳದ ಕಾರಣ ಇರುವ ಒಂದು ಶೌಚಾಲಯವನ್ನೇ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ.  
– ದುಗ್ಗಪ್ಪ, ಕಾಲೇಜು ಪ್ರಾಂಶುಪಾಲ

Advertisement

ಬಗೆಹರಿಸಲು ಯತ್ನ
ಕಾಲೇಜಿನ ಹೊಸ ಕಟ್ಟಡಕ್ಕೆ ಅನುದಾನ ಮಂಜೂರಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ. ಇರುವ ಎರಡು ಶೌಚಾಲಯ ಉಪಯೋಗಕ್ಕೆ ಇಲ್ಲದಂತಾಗಿದೆ. ಇಲ್ಲಿನ ಸಮಸ್ಯೆಯ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು.
– ನಿತೀಶ್‌ಕುಮಾರ್‌,
ಕುಂಬ್ರ ಕಾಲೇಜಿನ ಕಾರ್ಯಾಧ್ಯಕ್ಷರು

 ದಿನೇಶ್‌ ಬಡಗನ್ನೂರು 

Advertisement

Udayavani is now on Telegram. Click here to join our channel and stay updated with the latest news.

Next