Advertisement

ಶಾಲಾ ಮಕ್ಕಳ ಸೌಲಭ್ಯದ ಯೋಜನೆಗೂ ಬೀಳುವುದೇ ಕತ್ತರಿ?

11:08 PM Apr 11, 2020 | Sriram |

ಬೆಂಗಳೂರು: ಕೋವಿಡ್ 19 ಭೀತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸೌಲಭ್ಯದ ಮೇಲೂ ಕರಿಛಾಯೆ ಮೂಡಿಸುವ ಲಕ್ಷಣ ಗೋಚರವಾಗುತ್ತಿದೆ. ಸರಕಾರಿ ಶಾಲೆಯ ಒಂದರಿಂದ 10ನೇ ತರಗತಿಯ ಸುಮಾರು 40 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸರಕಾರದಿಂದ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ ಸಹಿತವಾಗಿ ಅನೇಕ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ.

Advertisement

ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿಯನ್ನೂ ಸರಕಾರವೇ ಮಾಡುತ್ತಿದೆ.ಇದರಲ್ಲಿ ಕೆಲವು ಯೋಜನೆಗೆ ಕೇಂದ್ರ ಸರಕಾರದಿಂದ ಅನುದಾನ ಬರು ತಿತ್ತು. ಇನ್ನು ಕೆಲವು ಯೋಜನೆಗೆ ರಾಜ್ಯ ಸರಕಾರವೇ ಅನುದಾನ ಭರಿಸುತಿತ್ತು. ಮತ್ತೆ ಕೆಲವು ಯೋಜನೆಯನ್ನು ಕೇಂದ್ರ-ರಾಜ್ಯದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.

2019-20ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಎರಡನೇ ಸೆಟ್‌ ಸಮವಸ್ತ್ರ ವಿತರಿಸಿಲ್ಲ, ಆ ಅನುದಾನವನ್ನೇ ಮುಂದಿನ ವರ್ಷದ ಸಮವಸ್ತ್ರ ವಿತರಿಸುವಾಗ ಬಳಸಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸೂಚಿಸಲಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರಕ್ಕೆ ಅನುದಾನ ಬಿಡುಗಡೆ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.ಶಿಕ್ಷಣ ಇಲಾಖೆಯ ವಿವಿಧ ಯೋಜನೆಗೆ ಕೇಂದ್ರ ದಿಂದ ಪ್ರತಿವರ್ಷ ಬಜೆಟ್‌ ಘೋಷಣೆ ಪ್ರಕಾರ ಸಾವಿರಾರು ಕೋ.ರೂ. ಯೋಜನೆ ಅನುಸಾರ ಬರುತ್ತಿತ್ತು. ಒಂದೆರೆಡು ವರ್ಷದಲ್ಲಿ ಈ ಅನುದಾನದ ಪ್ರಮಾಣವೂ ಕಡಿಮೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರ್‌ಟಿಇ ಅನುದಾನ ಬಾಕಿ
ಕೇಂದ್ರದ ಅನುದಾನ ಕೊರತೆ ಒಂದೆಡೆ ಯಾದರೆ, ರಾಜ್ಯ ಸರಕಾರವೂ ಆರ್‌ಟಿಇ ಮಕ್ಕಳ ಶುಲ್ಕ ಮರು ಪಾವತಿ ಅನುದಾನವನ್ನು ಖಾಸಗಿ ಶಾಲೆಗಳಿಗೆ ನೀಡಿಲ್ಲ. 2019- 20ನೇ ಸಾಲಿನ ಆರ್‌ಟಿಇ ಶುಲ್ಕ ಮರು ಪಾವತಿಯೇ ಸಾವಿರ ಕೋ. ರೂ.ಗೂ ಹೆಚ್ಚಿದೆ. ಮುಂದಿನ ವರ್ಷವೂ ಈ ಅನುದಾನ ನೀಡಬೇಕು. ಆರ್ಥಿಕತೆ ಸುಧಾರಿಸುವ ಮೊದಲೇ ಹಣಕಾಸಿನ ಹೊಡೆತ ಬೀಳುವ ಸಾಧ್ಯತೆ ಇದೆ ಮತ್ತು ಕೆಲವು ಯೋಜನೆಗಳನ್ನು ಸರಕಾರ ಏಕಾಏಕಿ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಅನುದಾನ ಹಂಚಿಕೆ ಸಭೆಯೇ ನಡೆದಿಲ್ಲ
ಪ್ರತಿ ವರ್ಷ ಮುಂದಿನ ವರ್ಷದ‌‌ ವಿವಿಧ ಯೋಜನೆಯ ಅಂಗೀಕಾರ ಮತ್ತು ಅನುದಾನ ಬಳಕೆಗೆ ಸಂಬಂಧಿಸಿ ದಂತೆ ಕೇಂದ್ರ ಸರಕಾರದಿಂದ ಎಲ್ಲ ರಾಜ್ಯಗಳ ಸಮಗ್ರ ಶಿಕ್ಷಣ ಅಥವಾ ಸರ್ವಶಿಕ್ಷಾ ಅಭಿಯಾನದ ಯೋಜನ ನಿರ್ದೇಶಕ ರೊಂದಿಗೆ ಸಭೆ ನಡೆಸಲಾಗುತ್ತಿದೆ. 2020-21ರ ಕಾರ್ಯಕ್ರಮ ಅಂಗೀಕಾರ ಮತ್ತು ಅನುದಾನ ಹಂಚಿಕೆ ಸಂಬಂಧಿಸಿ ದಂತೆ ಈವರೆಗೂ ಸಭೆ ನಡೆದಿಲ್ಲ. ಕೋವಿಡ್ 19 ಭೀತಿ ಇರುವುದ ರಿಂದ ವೀಡಿಯೋ ಸಂವಾದದ ಮೂಲಕ ವಾದರೂ ಸಭೆ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಸಭೆ ನಡೆಯದೇ ಇದ್ದರೆ ಅನುದಾನ ಬಳಕೆ ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next