ಮಾನ್ವಿ: ಶಾಲೆ ತೆರೆಯದ ಕಾರಣ ತಾಲೂಕಿನಲ್ಲಿ ಕೂಲಿ ಕೆಲಸಕ್ಕೆ ತೆರಳುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ಬೆಳೆಗಳು ಕಟಾವಿಗೆ ಬಂದಿದ್ದು, ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಶಾಲೆಯೂ ಮುಚ್ಚಿರುವುದರಿಂದ ರಾಯಚೂರು, ಮಾನ್ವಿ, ದೇವದುರ್ಗದಲ್ಲಿ ಹತ್ತಿ ಬಿಡಿಸಲು, ಕೆಲವೆಡೆ ಮೆಣಸಿಕಾಯಿ ಬಿಡಿಸಲು, ಭತ್ತದ ಗದ್ದೆ ಕೆಲಸಕ್ಕೆ 16 ವರ್ಷದೊಳಗಿನ ಮಕ್ಕಳು ಹೋಗುತ್ತಿದ್ದಾರೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವ ಕಾರಣ ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿರುವ ಬಗ್ಗೆ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ. 2019-20ರಲ್ಲಿ 6 ವಾಹನಗಳನ್ನು ಜಪ್ತಿ ಮಾಡಿ 22 ಮಕ್ಕಳನ್ನು ರಕ್ಷಿಸಲಾಗಿದ್ದು, ಯಾವುದೇ ಪ್ರಕರಣಗಳು ದಾಖಲಿಸಿಲ್ಲ. 2020-21ರ ನವೆಂಬರ್ ತಿಂಗಳ ಒಂದರಲ್ಲೇ ತಾಲೂಕಿನಲ್ಲಿ 3 ವಾಹನ ಜಪ್ತಿ ಮಾಡಿ 19ಮಕ್ಕಳನ್ನು ಪಾಲಕರಿಗೆ ಒಪ್ಪಿಸಲಾಗಿದೆ. ಅಕ್ಟೋಬರ್‌ನಲ್ಲಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡ ಕಾರಣಕ್ಕೆ 4 ಅಂಗಡಿಗಳ ಮೇಲೆ ದೂರುದಾಖಲಿಸಲಾಗಿದೆ. ಜಿಲ್ಲೆಯಲ್ಲಿ 47 ವಾಹನ ಜಪ್ತಿಮಾಡಿ 256 ಮಕ್ಕಳನ್ನು ಪಾಲಕರಿಗೆ ಒಪ್ಪಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮಕ್ಕಳು ರಜೆ ದಿನಗಳಲ್ಲಿ ಮಾತ್ರ ಕೃಷಿ ಕೆಲಸಕ್ಕೆ ತೆರಳುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಇಲ್ಲದಿರುವುದರಿಂದ ಮಕ್ಕಳು ನಿತ್ಯ ಕೂಲಿಗೆ ತೆರಳುತ್ತಿದ್ದಾರೆ. ಮನೆಯಲ್ಲಿ ಮಕ್ಕಳನ್ನು ಬಿಟ್ಟಿರಲಾರದ ಕೆಲ ಪೋಷಕರು ಹಾಗೂ ಬಡವರುಕೂಲಿದಾಸೆಗೆ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ. ಟಿವಿ,ಮೊಬೈಲ್‌ಗೆ ಅಂಟಿಕೊಳ್ಳುವುದು, ಇತರೆ ಚಟಕ್ಕೆಬಾಲಿಶರಾಗುತ್ತಿದ್ದಾರೆ. ಇದರಿಂದ ಶೈಕ್ಷಣಿಕ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ಮಕ್ಕಳು ಮಾಡುತ್ತಿರುವ ಕೆಲಸದ ಸ್ಥಳಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಬಳಕೆಯಿಲ್ಲ. ಚಿಕ್ಕ ಆಟೋಗಳಲ್ಲಿ 30ಕ್ಕೂ ಅಧಿಕ ಜನರನ್ನು ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಮಕ್ಕಳುಮನೆಯಲ್ಲಿ ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಶಾಲೆ ಬಂದ್ ಮಾಡಿ, ಆಹಾರ ಪದಾರ್ಥಗಳನ್ನುಮನೆಗೆ ತಲುಪಿಸಲಾಗುತ್ತಿತ್ತು. ಈಗ ಮಕ್ಕಳು ಗುಂಪಾಗಿ ಕೆಲಸಕ್ಕೆ ತೆರಳುತ್ತಿದ್ದಾರೆ. ನೂರಾರು ಜನ ಬರುವ ಅಂಗಡಿಗಳಲ್ಲಿ ದುಡಿಯುತ್ತಿದ್ದಾರೆ. ಆದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಂಡು ಶಾಲೆ ತೆರೆಯುವುದೇ ಉತ್ತಮ ಎನ್ನುತ್ತಾರೆ ಸಾರ್ವಜನಿಕರು.
ರಜೆ ದಿನಗಳಲ್ಲಿ ಮಾತ್ರ ಕೆಲಸಕ್ಕೆ ತೆರಳುತ್ತಿದ್ದ ಮಕ್ಕಳು ಶಾಲೆ ಇಲ್ಲದಿರುವುದರಿಂದ ನಿತ್ಯ ಕೂಲಿಗೆತೆರಳುತ್ತಿರುವುದು ನಿಜ. ಆಟೋದಲ್ಲಿ ಧ್ವನಿವರ್ಧಕ ಮೂಲಕ ಜಾಗೃತಿಮೂಡಿಸಲಾಗುತ್ತಿದೆ. 2020-21ರ ನವೆಂಬರ್‌ನಲ್ಲಿ ತಾಲೂಕಿನಲ್ಲಿ 3 ವಾಹನಗಳನ್ನು ಜಪ್ತಿ ಮಾಡಿ 19ಮಕ್ಕಳನ್ನು ರಕ್ಷಿಸಲಾಗಿದೆ. ಅಕ್ಟೋಬರ್ ನಲ್ಲಿ 4 ಅಂಗಡಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಕಳೆದೆರಡು ತಿಂಗಳಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು,ದುಡಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
-ಮಂಜುನಾಥ ರಡ್ಡಿ, ಜಿಲ್ಲಾ ಯೋಜನಾ ನಿರ್ದೇಶಕ, ಎನ್‌ಸಿಎಲ್‌ಪಿ.
ಕೋವಿಡ್ ಭೀತಿಯಲ್ಲಿ ಶಾಲೆಗಳು ಮುಚ್ಚಿರುವ ಕಾರಣ ಬಾಲಕಾರ್ಮಿಕತೆ, ಬಾಲಾಪರಾಧಂತಹ ಮಕ್ಕಳ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಕುಂಠಿತವಾಗಬಹುದು. ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಸರ್ಕಾರ ಕೋವಿಡ್ ತಡೆಗೆ ಕ್ರಮ ಕೈಗೊಂಡು ಶಾಲೆಗಳನ್ನು ತೆರೆಯುವುದು ಉತ್ತಮ.
– ಗಿರಿಧರ ಪೂಜಾರಿ, ಸಂಪನ್ಮೂಲ ವ್ಯಕ್ತಿ, ಮಾನ್ವಿ
-ರವಿ ಶರ್ಮಾ