Advertisement

ಗದ್ದೆಗಿಳಿದ ಶಾಲಾ ಮಕ್ಕಳು; ಭತ್ತ ನಾಟಿ 

03:45 AM Jul 03, 2017 | |

ಬದಿಯಡ್ಕ: ಶಿಕ್ಷಣ ಸಾಮಾನ್ಯವಾಗಿ ಜ್ಞಾನ, ಕೌಶಲ ಅಥವಾ ಬೋಧನೆ, ತರಬೇತಿ ಮುಂತಾದ ಅರ್ಥವನ್ನು ಹೊಂದಿದೆ. ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು. ಶಿಕ್ಷಣ ಉತ್ತಮ ಮಾರ್ಗದರ್ಶನದಲ್ಲಿ ನಡೆದಾಗ ರೂಪಿತವಾಗುವ ಸಮಾಜ ಮೌಲ್ಯಯುತವಾಗಿರುತ್ತದೆ. ಶಿಕ್ಷಕನ ಚಾಣಾಕ್ಷತೆ ಅನಾವರಣಗೊಳ್ಳುವುದು ಇಲ್ಲಿಯೇ.

Advertisement

ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವ್ಯವಸ್ಥೆ ಯಲ್ಲ. ಶಾಲೆಯಿಂದ ಹೊರಗಿಳಿದು ಸುಂದರವಾದ ಪ್ರಕೃತಿಯನ್ನು ನಿರೀಕ್ಷಿಸಬೇಕು. ಪರಿಸರದ ಆಗುಹೋಗು ಗಳನ್ನು ಗಮನಿಸಬೇಕು. ಪುಸ್ತಕದ ಜ್ಞಾನ ಮಾತ್ರ ಸಾಲದು. ಬಯಲು ಪ್ರವಾಸಗಳ ಮೂಲಕ  ಪ್ರತ್ಯಕ್ಷ ನಿರೀಕ್ಷಣೆಗೆ ಅವಕಾಶ ನೀಡಿದಾಗ ಮಕ್ಕಳು ಪಂಚೇಂದ್ರಿಯಗಳ ಮೂಲಕ ಜ್ಞಾನಾರ್ಜಿಸುತ್ತಾರೆ. ಇದರಿಂದ ಮಕ್ಕಳಿಗೆ ಹಲವು ರೀತಿಯ ಅನುಭವಗಳು ಏಕಕಾಲದಲ್ಲಿ ಲಭಿಸುತ್ತವೆೆ. ಈ ನಿಟ್ಟಿನಲ್ಲಿ ಉದಯಗಿರಿ ಎಸ್‌.ಎಸ್‌.ಪಿ.ಎ.ಎಲ್‌.ಪಿ. ಶಾಲೆಯ ಮಕ್ಕಳು ಈಗಾಗಲೇ ನಡೆಸಿದ ಸಂದರ್ಶನಗಳು ಅರ್ಥಪೂರ್ಣ ಹಾಗೂ ಅನುಕರಣೀಯ.

ಮಕ್ಕಳಿಗೆ ಬನಗಳ ಮಹತ್ವವನ್ನೂ ಹಾಗೂ ಅಗತ್ಯವನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ನಡೆಸಿದ ಬನ ಸಂದರ್ಶನ, ಕಲೆಯ ಮಹತ್ವವನ್ನು ತಿಳಿಸುವ ಯಕ್ಷಗಾನ ತರಬೇತಿ ಶಿಬಿರ ಎಡನೀರು, ಭಾರತದ ಬೆನ್ನೆಲುಬಾಗಿರುವ ಭತ್ತದ ಕೃಷಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗದ್ದೆಗಳ ಸಂದರ್ಶನ, ಭಕ್ತಿ ಭಾವೈಕ್ಯದ ಸಂಕೇತವಾದ ಕೆಡೆಂಜಿ ದೇವಸ್ಥಾನ, ಪ್ರಕೃತಿಯ ಕೊಡುಗೆಗಳಾದ ಅರಣ್ಯ ಪ್ರದೇಶಗಳು ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ತಮ್ಮ ಅನುಭವ ಬುತ್ತಿಯನ್ನು ತುಂಬಿಸಿಕೊಂಡಿದ್ದಾರೆ.ಸ್ಥಳ ಸಂದರ್ಶನದ ಭಾಗವಾಗಿ ಕರಿಂಬಿಲ ಶ್ರೀ ಕೇಶವ ಪ್ರಭುರವರ ಗದ್ದೆಗಳನ್ನು ಸಂದರ್ಶಿಸಿ ಭತ್ತದ ಕೃಷಿಯ ಹಲವು ಮಾಹಿತಿಗಳನ್ನು ಪಡೆದುಕೊಂಡರು. 

ಭತ್ತದ ತಳಿಗಳ ಹೆಸರು, ಕೃಷಿಯ ಹಂತಗಳು, ರೀತಿಗಳು, ಲಾಭ-ನಷ್ಟ ಇತ್ಯಾದಿಗಳ ಕುರಿತು ಕೇಶವ ಪ್ರಭುರವರ ಪುತ್ರ ಅನಿಶ್‌ ಕುಮಾರ್‌ರವರು ವಿವರಣೆ ನೀಡಿದರು. 

ಮಕ್ಕಳು ಗದ್ದೆಗೆ ಇಳಿದು ನೇಜಿ ತೆಗೆದು ನಾಟಿಮಾಡುವುದರ ಮೂಲಕ ಹೊಸ ಆನಂದ ಅನುಭವಿಸಿದರು. ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ, ಅಧ್ಯಾಪಕರಾದ ರಾಜೇಶ್‌ ಎಸ್‌.,  ದೇವಕಿ ಪಿ., ಗೀತಾ ಮಾಲಿನಿ ಮಕ್ಕಳ ಜತೆಗೆ ಕೃಷಿ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಹಲಸಿನ ಹಪ್ಪಳವನ್ನು ನೀಡಿ ಮನೆಯವರು ಸತ್ಕರಿಸಿದರು. ಮರೆಯಲಾಗದ ಅನುಭವದೊಂದಿಗೆ  ಮರಳುವಾಗ ಮಕ್ಕಳು ಹಾಗೂ ಶಿಕ್ಷಕರ ಮುಖದಲ್ಲಿ ಸಂತೃಪ್ತಿ ಲಾಸ್ಯವಾಡುತ್ತಿತ್ತು.

Advertisement

– ಅಖೀಲೇಶ್‌ ನಗುಮುಗಂ

ಚಿತ್ರ: ರಾಜೇಶ್‌

Advertisement

Udayavani is now on Telegram. Click here to join our channel and stay updated with the latest news.

Next