ರಾಮನಗರ: ನೂತನ ಶಾಲಾ ಕಟ್ಟಡ ಉದ್ಘಾಟನೆಯಾಗಲಿಲ್ಲ. ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆಯಾಗಲಿಲ್ಲ, ಜಿಲ್ಲಾ ಕೇಂದ್ರ ರಾಮನಗರದ ಸದ್ಯದ ಪರಿಸ್ಥಿತಿ ಇದು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಮನಗರ ಶಾಸಕರ ಅಲಭ್ಯದಿಂದಾಗಿ ಜಿಲ್ಲಾ ಕೇಂದ್ರದ ಅಭಿವೃದ್ಧಿ ಕಾಮಗಾರಿಯ ಲಾಭ ಜನರಿಗೆ ಸಿಗದೆ ಪರದಾಡುವಂತಾಗಿದೆ.
ನಗರದ ಅಗ್ರಹಾರದಿಂದ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಅಪ್ರೋಚ್ ರಸ್ತೆ ಕಾಮಾಗರಿಗೆ ಶಂಕು ಸ್ಥಾಪನೆ ನೆರೆವೇರಬೇಕಾಗಿದೆ. ನಗರದ ನಾಲಬಂದವಾಡಿ ಮೊಹಲ್ಲದಾಮೂಲಕ ಕೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ಅಪ್ರೋಚ್ ರಸ್ತೆ ನಿರ್ಮಾಣಕ್ಕೆ ತಕರಾರು ಇದ್ದು, ಚುನಾಯಿತ ಪ್ರತಿನಿಧಿಗಳು ಬರದೆ ಇತ್ಯರ್ಥವಾಗುತ್ತಿಲ್ಲ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ 4.5 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವಜಿ.ಕೆ.ಬಿ.ಎಂ.ಎಸ್ ನೂತನ ಶಾಲಾ ಕಟ್ಟಡ ನಿರ್ಮಾಣ ಪೂರ್ಣಗೊಂಡು 2 ತಿಂಗಳು ಕಳೆದರು ಉದ್ಘಾಟನಾ ಭಾಗ್ಯ ಸಿಗಲಿಲ್ಲ. ಇದಕ್ಕೆ ಕಾರಣ ರಾಮನಗರ ಕ್ಷೇತ್ರದಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಬ್ಬರು ಜಂಟಿಯಾಗಿ ಬರಲು ದಿನಾಂಕಗಳು ಸಿಗದಿರುವುದು!
ಅವರು ಸಿಕ್ಕರೆ, ಇವರು ಸಿಗೋಲ್ಲ!: ಕೋವಿಡ್- 19 ಸೋಂಕು ಕಾರಣ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಬೆಂಗಳೂರು ಮನೆಯಿಂದಲೇ ಅಧಿಕಾರ ಚಲಾಯಿಸುತ್ತಿದ್ದಾರೆ. ಕ್ಷೇತ್ರಕ್ಕೆ ಬರೋದು ಆಗೊಮ್ಮೆ-ಈಗೊಮ್ಮೆ. ರಾಮನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರೆಡಿಟ್ ತೆಗೆದುಕೊಳ್ಳಲು ಜೆಡಿಎಸ್, ಬಿಜೆಪಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಕಾಮಗಾರಿಗಳಆರಂಭಕ್ಕೆ ಶಾಸಕರು ಇರಲೇ ಬೇಕು ಎಂದು ಜೆಡಿಎಸ್ ನಾಯಕರ ಪಟ್ಟು. ಇನ್ನೊಂದೆಡೆ ಪ್ರೋಟೋಕಾಲ್ ಅನುಸರಿಸಬೇಕಾದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೂ ಕಾಯಬೇಕು. ಅವರು ಒಪ್ಪಿದರೆ ಇವರು ಸಿಗೋಲ್ಲ, ಇವರು ಸಿಕ್ಕರೆ ಅವರು ಸಿಗೋಲ್ಲ ಎಂಬ ಪರಿಸ್ಥಿತಿಯ ಅಡಕತ್ತರಿಯಲ್ಲಿ ಸರ್ಕಾರಿ ಅಧಿಕಾರಿಗಳು ಸಿಲುಕಿದ್ದಾರೆ.
ಟೊಯೋಟಾ ಮುಷ್ಕರವೂ ಕಾರಣ!: ನಗರದಲ್ಲಿ ಹಳೆ ಕಟ್ಟಡ ಕಡೆವಿ, 4.5 ಕೋಟಿ ರೂ., ವೆಚ್ಚದಲ್ಲಿ ಸುಸಜ್ಜಿತವಾಗಿ ಜಿ.ಕೆ.ಬಿ.ಎಂ.ಎಸ್.ಕಟ್ಟಡವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ನಿರ್ಮಿಸಿದೆ. ಒಂದೆಡೆ ಚುನಾಯಿತ ಪ್ರತಿನಿಧಿಗಳದಿನಾಂಕಗಳು ಸಿಗದ ಕಾರಣ ಕಟ್ಟಡ ಉದ್ಘಾಟನೆ ವಿಳಂಬವಾಗಿದೆ. ಇದೀಗ ಟೊಯೋಟಾ ಕರ್ಮಿಕರ58 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಜಪಾನ್ ನಿಂದ ಟೊಯೋಟಾದ ಹಿರಿಯ ಅಧಿಕಾರಿಗಳುಉದ್ಘಾಟನೆಗೆ ಬಂದರೆ ಕಾರ್ಮಿಕರು ಇಲ್ಲಿಗೂ ಬಂದು ಪ್ರತಿಭಟನೆ ನಡೆಸಬಹುದು ಎಂಬ ಆತಂಕವೂ ಸೃಷ್ಠಿಯಾಗಿದೆ.
ಉದ್ಘಾಟನೆಗೆ ನಾನು ಬರುತ್ತೇನೆ: ಶಿಕ್ಷಣ ಸಚಿವ ಇತ್ತೀಚೆಗೆ ರಾಮನಗರಕ್ಕೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ನೂತನ ಜಿ.ಕೆ.ಬಿ.ಎಂ.ಎಸ್ ಕಟ್ಟಡ ಕಂಡು ಸಂತಸ ವ್ಯಕ್ತಪಡಿಸಿದ್ದರು. ಮೇಡಂ (ಶಾಸಕರಿ ಅನಿತಾ ಕುಮಾರಸ್ವಾಮಿ) ಅವರಿಂದ ದಿನಾಂಕಪಡೆಯಿರಿ, ನನಗೂ ತಿಳಿಸಿ, ಉದ್ಘಾಟನೆಗೆ ನಾನುಬರುತ್ತೇನೆ ಎಂದು ಸಚಿವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೀಗ ಅಧಿಕಾರಿಗಳು ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಮೂವರು ಪ್ರತಿನಿಧಿಗಳ ದಿನಾಂಕ ಪಡೆಯಬೇಕಾಗಿದೆ.
ರಾಮನಗರ ನಗರ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಶಾಸಕರು ಸದ್ಯದಲ್ಲೇರಾಮನಗರಕ್ಕೆ ಭೇಟಿ ನೀಡಲಿದ್ದು, ಅಭಿವೃದ್ಧಿಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೆಲವುತಾಂತ್ರಿಕ ಕಾರಣಗಳಿಗೆ ಕಾಮಗಾರಿ ಆರಂಭವಿಳಂಬವಾಗಿರಬಹುದು. ಆದರೆ, ಶಾಸಕರಿಂದ ವಿಳಂಬವಾಗುತ್ತಿಲ್ಲ.
–ರಾಜಶೇಖರ್, ತಾಲೂಕು ಜೆಡಿಎಸ್ ಅಧ್ಯಕ
ಜಿ.ಕೆ.ಬಿ.ಎಂ.ಎಸ್ ಶಾಲೆ ನೂತನ ಕಟ್ಟಡ ಉದ್ಘಾಟನೆ ಜನವರಿ ಮಾಹೆಯಲ್ಲೇ ನೆರೆವೇರುವ ವಿಶ್ವಾಸವಿದೆ. ಈ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು, ಟೊಯೋಟಾದ ಅಧಿಕಾರಿಗಳ ಗಮನಸೆಳೆಯಲಾಗಿದೆ.
–ಮರೀಗೌಡ, ಬಿಇಒ, ರಾಮನಗರ
–ಬಿ.ವಿ.ಸೂರ್ಯ ಪ್ರಕಾಶ್