ಜಮಖಂಡಿ: ತಾಲೂಕಿನ ರಬಕವಿ ಪಟ್ಟಣದ ಬಸವಾ ಫೌಂಡೇಶನ್ ಕನ್ನಡ ಪ್ರಾಥಮಿಕ ಶಾಲೆ ಸ್ಥಗಿತಗೊಳಿಸಿ, ಹೊಸದಾಗಿ ಆಂಗ್ಲ ಮಾಧ್ಯಮ ಆರಂಭಿಸಿರುವ ಹಿನ್ನೆಲೆಯಲ್ಲಿ ಆರ್‌ಟಿಇ ನಿಯಮದಡಿಯಲ್ಲಿ ಆಯ್ಕೆಗೊಂಡಿರುವ 77 ಮಕ್ಕಳು ಗತೀಯೇನು ಎಂದು ಪಾಲಕರು ಆರೋಪಿಸಿ ನಗರದ ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಸವರಾಜ ನಮ್ನಿ ಮಾತನಾಡಿ, ಕಳೆದ 10 ವರ್ಷಗಳಿಂದ ರಬಕವಿ ಪಟ್ಟಣದ ಬಸವಾ ಫೌಂಡೇಶನ್ ಸಂಸ್ಥೆ ಕನ್ನಡ ಪ್ರಾಥಮಿಕ ತರಗತಿಗಳನ್ನು ನಡೆಸುತ್ತಿದೆ. ಏಕಾಏಕಿಯಾಗಿ ಕನ್ನಡ ಪ್ರಾಥಮಿಕ ಶಾಲೆ ಸ್ಥಗಿತಗೊಳಿಸಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರೇ ಕಲಿಯುತ್ತಿರುವ ವಿದ್ಯಾರ್ಥಿಗಳು ಗತಿಯೇನು?. ಸಂಬಂಧಿಸಿದ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರಬಕವಿ ಪಟ್ಟಣದ ಬಸವಾ ಫೌಂಡೇಶನ್ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ಲಭಿಸಬೇಕು. ಸಂಸ್ಥೆಗಳು ಹಾಗೂ ಅಧಿಕಾರಿಗಳು ಮನಬಂದಂತೆ ವರ್ತಿಸಿದರೆ ಪಾಲಕರು ಹಾಗೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಕನ್ನಡ ಮಾಧ್ಯಮ ಶಾಲೆ ಸ್ಥಗಿತಗೊಳಿಸಿ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅ ಧಿಕಾರಿಗಳು ಮಕ್ಕಳ ಶಿಕ್ಷಣ ಕುರಿತು ಪಾಲಕರಿಗೆ ಮಾಹಿತಿ ನೀಡಬೇಕಾಗಿತ್ತು. ಶಿಕ್ಷಣ ನಿರ್ಲಕ್ಷ್ಯ ಹಾಗೂ ಖಾಸಗಿ ಸಂಸ್ಥೆಯ ಧೋರಣೆ ಖಂಡಿಸುತ್ತೇವೆ. ಶಾಲಾ ಮಕ್ಕಳಿಗೆ ನ್ಯಾಯ ಲಭಿಸದಿದ್ದಲ್ಲಿ ರಸ್ತೆಗಳಿಗೆ ಹೋರಾಟ ಮಾಡುವುದಾಗಿ ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಬಿಇಒ ಪ್ರಮೀಳಾ ಜೋಶಿ ಮಾತನಾಡಿ, ರಬಕವಿ ಪಟ್ಟಣದ ಬಸವಾ ಫೌಂಡೇಶನ್ ಸಂಸ್ಥೆ ಹಾಗೂ ಡಿಡಿಪಿಐ ಚರ್ಚಿಸುತ್ತೇನೆ. ಮಕ್ಕಳಿಗೆ ಅನ್ಯಾಯವಾಗದ ರೀತಿಯಲ್ಲಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಪ್ರತಿಭಟನಾಕಾರರು ಲಿಖಿತ ರೂಪದಲ್ಲಿ ನೀಡಲು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರಗುತ್ತಿರುವುದನ್ನು ಅರಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಫೋನ್ ಮೂಲಕ ಮಾತುಕತೆ ನಡೆಸುವ ಮೂಲಕ ಮಂಗಳವಾರ ಸಮಸ್ಯೆ ಬಗೆಹರಿಸುವ ಭರವಸೆ ಲಭಿಸಿದಾಗಿ ಪ್ರತಿಭಟನೆ ವಾಪಸ್ ಪಡೆದರು.
ಮಹಾದೇವ ಜಮಖಂಡಿ, ರಾಮಚಂದ್ರ ಕಂಕಣವಾಡಿ, ರಾಜು ಬೋಪರೆ, ಸಂಜಯ ಹೊನಕಡಬಿ, ಸದಾಶಿವ ಕಳಸಾಲಗಿ, ಭರತ ಹಳಿಂಗಳಿ, ಅಶೋಕ ಕಾವಾಸೆ, ಶ್ರೀಶೈಲ ಮೂರತಲಿ, ಬಾನು ಮುಲ್ಲಾ, ಭಾರತಿ ಹೊನಕಡಬಿ, ಲಕ್ಷ್ಮೀ ಕಟಗಿ, ಶಾಂತಾ ಮೂರತಲಿ, ಮಕ್ಕಳು ಇದ್ದರು.