Advertisement
ಆರ್. ಕೆ. ನಾರಾಯಣರ ಭಾಷಣದ ಪರಿಣಾಮವಾಗಿ ಜನವಿಜ್ಞಾನಿ ಪ್ರೊಫೆಸರ್ ಯಶ್‌ಪಾಲರ ನೇತೃತ್ವದಲ್ಲಿ 1991ರಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಸ್ಕೂಲ್ ಬ್ಯಾಗುಗಳೇಕೆ ಭಾರವಾಗುತ್ತಿವೆ ಮತ್ತು ಅದಕ್ಕೆ ಪರಿಹಾರ ಏನು ಎಂದು ಪರಿಶೀಲಿಸುವ ಪ್ರಯತ್ನ ನಡೆಯಿತು. ಪರಿಣಾಮವಾಗಿ 1993ರಲ್ಲಿ “ಭಾರವಿಲ್ಲದ ಕಲಿಕೆ’ ಎನ್ನುವ ಹೆಸರಲ್ಲಿ ಆ ಸಮಿತಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿತು. ಈ ದಿನಗಳಲ್ಲಿ ಮಕ್ಕಳು ಬೇಗಬೇಗನೆ ಶಾಲೆ ಒಳಗೆ ಹೊಗುತ್ತಿದ್ದಾರೆ ! ಎರಡು-ಎರಡೂವರೆ ವರ್ಷದ ಮಕ್ಕಳು ಶಿಶುವಿಹಾರಗಳನ್ನು ಸೇರಿ ವಯಸ್ಸಿಗೆ ಮೀರಿದ, ಬುದ್ಧಿಗೆ ಎಟುಕದ ಪಾಠಗಳನ್ನು ಕಲಿಯಲು ಶುರು ಮಾಡುತ್ತಾರೆ. ಪ್ರತಿ ತರಗತಿಯ ಜೊತೆಗೆ ಸ್ಕೂಲ್ ಬ್ಯಾಗಿನ ಗಾತ್ರ-ಭಾರಗಳು ಹೆಚ್ಚಾಗುತ್ತವೆ. ಸಣ್ಣ ಪ್ರಾಯದಲ್ಲಿ ಅನುಭವಕ್ಕೆ ನಿಲುಕದ ಕ್ಲಿಷ್ಟ ವಿಷಯಗಳನ್ನು ಮನಸ್ಸಲ್ಲಿ ತುಂಬಿ ಅವನ್ನು ಹಾಗೆಯೇ ಒಪ್ಪಿಸಬೇಕಾದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪಠ್ಯಗಳನ್ನು ರಚಿಸುವ ಪರಿಣಿತರು ಶಾಲಾ ತರಗತಿಗಳಿಂದ ದೂರ ಇರುವವರಾಗಿದ್ದು ಮಕ್ಕಳ ಬೌದ್ಧಿಕ ಬೆಳವಣಿಗೆ, ಶಿಕ್ಷಕರೊಂದಿಗಿನ ಸಂವಹನದ ಅಗತ್ಯಗಳ ಬಗ್ಗೆ ಗಮನಹರಿಸಿರುವುದಿಲ್ಲ. ಪಾಠ ಹೇಳಿಕೊಡುವ ಅಧ್ಯಾಪಕರು ಪಠ್ಯಪುಸ್ತಕಗಳನ್ನು ಜಡ ಆವರಣವೆಂದು ತಿಳಿದು ಅವುಗಳ ಆಚೀಚೆ ನೋಡದೆ ತರಗತಿಗಳಲ್ಲಿ ಬೋಧಿಸುತ್ತಾರೆ. ಹೆತ್ತವರ ಮಟ್ಟಿಗೆ ಶೈಕ್ಷಣಿಕ ಸ್ಪರ್ಧೆ ಮತ್ತು ಯಶಸ್ಸಿನ ಓಟಗಳೇ ಸಾಮಾಜಿಕ ತತ್ವಗಳಾಗಿವೆ. ಇವುಗಳ ಹೊರತಾಗಿ ಶಿಕ್ಷಣ ಸಂಬಂಧಿ ನಿಧಿ ಕಡಿಮೆ ಇರುವುದು, ಇರುವ ನಿಧಿ ಸರಿಯಾಗಿ ಬಳಸಲ್ಪಡದೆ ಇರುವುದು, ಹಲವು ಶಾಲೆಗಳಲ್ಲಿ ಆಟದ ಬಯಲುಗಳು- ಉಪಕರಣಗಳು- ವಾಚನಾಲಯಗಳು- ಪ್ರಯೋಗಾಲಯಗಳು ಇಲ್ಲದಿರುವುದು ಕೂಡ ಕಲಿಕೆಯನ್ನು ಹೊರೆಯನ್ನಾಗಿಸಿವೆ. ಹೀಗೆ ಸಮಸ್ಯೆಗಳ ಸುದೀರ್ಘ ಪಟ್ಟಿಯ ಜೊತೆಗೆ ಕೆಲ ಪರಿಹಾರಗಳನ್ನೂ ಯಶ್‌ಪಾಲ್ ವರದಿ ಸೂಚಿಸಿತ್ತು. ಪಠ್ಯಪುಸ್ತಕ ರಚನೆಯಲ್ಲಿ ಶಿಕ್ಷಣತಜ್ಞರ ಜೊತೆಗೆ ತರಗತಿಯಲ್ಲಿ ನಿತ್ಯ ಪಾಠ ಹೇಳುವ ಅಧ್ಯಾಪಕರೂ ಭಾಗವಹಿಸಬೇಕು. ಚಿಕ್ಕ ತರಗತಿಗಳಲ್ಲಿ ಕಠಿಣವಾದ ವಿಷಯಗಳ ಭಾರವನ್ನು ಮಕ್ಕಳ ಮೇಲೆ ಹೊರಿಸಬಾರದು, ಮನೆಕೆಲಸಗಳನ್ನು ಕೊಡದಂತೆ ಕಾನೂನು ರಚಿಸಬೇಕು. ಪ್ರಾಥಮಿಕ ವಿದ್ಯಾಭ್ಯಾಸದಲ್ಲಿ ಪರೀಕ್ಷೆಗಳು ಇಲ್ಲದಾಗಬೇಕು. ಗುರು ಹಾಗೂ ಶಿಷ್ಯರ ಅನುಪಾತ 1:40ಕ್ಕಿಂತ ಜಾಸ್ತಿ ಇರಬಾರದು. ಹೆಚ್ಚಿನ ಪಾಠಗಳನ್ನು ದೃಶ್ಯ-ಶ್ರಾವ್ಯ ತಂತ್ರಗಳನ್ನು ಬಳಸಿ ಮಾಡಬೇಕು.
Related Articles
Advertisement
ಇಂಗ್ಲೆಂಡ್‌ನಲ್ಲಿ ಸ್ಕೂಲ್ ಬ್ಯಾಗ್ಬ್ರಿಟನ್ನಿನ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಮೊತ್ತಮೊದಲು ಸಂಸದೆಯಾಗಿ ಆಯ್ಕೆಯಾದಾಗ ಆರೋಗ್ಯ ಹಾಗೂ ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡಿದವರು. ಆರೋಗ್ಯ ಹಾಗೂ ಶಿಕ್ಷಣ ಮಂತ್ರಿಯ ಹೊಣೆ ಪ್ರಧಾನಿಯ ಹೊಣೆಗಿಂತ ಹೆಚ್ಚಿನದು ಎಂದು ಆಕೆ ತನ್ನ ಜವಾಬ್ದಾರಿಯ ಗುರುತ್ವದ ಬಗ್ಗೆ ಹೊಗಳಿಕೊಂಡಿದ್ದಿದೆ. ಶಿಕ್ಷಣ ಮತ್ತದರ ವ್ಯವಸ್ಥೆ ಒಂದು ದೇಶಕ್ಕೆ ಎಷ್ಟು ಮುಖ್ಯವಾದದ್ದು ಎನ್ನುವುದು ಮಾತ್ರ ಇದರ ಒಳಾರ್ಥ. ಇಂಗ್ಲೆಂಡಿನ ಮಕ್ಕಳ ಮೊದಲ ಪಾಠಗಳು ಕತೆಗಳನ್ನು ಕೇಳುವುದು-ಹೇಳುವುದು-ಓದುವುದರ ಸುತ್ತವೇ ಇರುತ್ತವೆ. ಅವರ ಬದುಕಿನ ಮೊದಲ ಪುಟ್ಟ ಹೆಜ್ಜೆಗಳು ಅಂದಚಂದದ ಚಿತ್ರಗಳಿಂದ ಕೂಡಿದ ಕಥಾಪ್ರಪಂಚದ ಪ್ರವೇಶಿಕೆಯಾಗಿರುತ್ತವೆ. ಮಗು ಸುಮಾರು ಏಳು ವರ್ಷ ಆಗುವವರೆಗೂ ಬರೆಯಲು ಕಲಿಯುವುದಿಲ್ಲ. ಕೇಳುವುದು, ಓದುವುದು ಗಟ್ಟಿಯಾದ ನಂತರ ಬರೆಯುವ ಕಲಿಕೆ ಶುರು ಆಗುತ್ತದೆ. ತಿದ್ದಿ ತಿದ್ದಿ ಪುಟಗಟ್ಟಲೆ ಕಾಪಿ ಬರೆಯುವ ಸಂಪ್ರದಾಯವೂ ಇಲ್ಲ. ಇಂಗ್ಲಿಷ್ ಭಾಷೆ ಮತ್ತು ಗಣಿತದ ಪಾಠಗಳು ಪ್ರಾಥಮಿಕ ಶಾಲೆಯ ಮಧ್ಯ ಹಂತದಲ್ಲಿ ಲಘುವಾಗಿ ಶುರುವಾಗುತ್ತವೆ. ಕೂಡಿಸುವುದು-ಕಳೆಯುವುದರ ಪಾಠಗಳು ಕಣ್ಣೆದುರು ವಸ್ತುಗಳನ್ನಿಟ್ಟು ಹಾಡು ಹೇಳುತ್ತ ಕಲಿಸುವ ಪದ್ಧತಿ ಇದೆ. ಪ್ರಾಥಮಿಕ ಶಾಲೆಗಳಲ್ಲಿ ವಾರಕ್ಕೆ ಒಂದು ಹಾಳೆಯಷ್ಟು ಮನೆಗೆಲಸ ನೀಡುತ್ತಾರೆ. ಒಂದು ಕತೆ ಪುಸ್ತಕವೋ ಒಂದೆರಡು ಹಾಳೆಗಳೂ ಇರುವ ತೆಳುವಾದ ಕೈಚೀಲವನ್ನು ಬೀಸುತ್ತ ಮಕ್ಕಳು ಶಾಲೆಗೆ ಬರುತ್ತಾರೆ. ಹೈಸ್ಕೂಲು ತರಗತಿಗಳಲ್ಲಿ ಗಣಿತದ, ವಿಜ್ಞಾನದ ಶಾಖೆಗಳ ಅಧ್ಯಯನ ಶುರು ಆಗುತ್ತವೆ, ಆಗ ಸ್ಕೂಲ್‌ಬ್ಯಾಗಿನ ಭಾರವೂ ಹೆಚ್ಚಾಗುತ್ತದೆ. ಇಲ್ಲಿನ ಶಿಕ್ಷಣ ವ್ಯವಸ್ಥೆಗಳ ಬಗ್ಗೆಯೂ ಟೀಕೆಗಳು ಇದ್ದೇಇವೆ. ಭಾರತದ ಹತ್ತನೆಯ ತರಗತಿಯ ಪರೀಕ್ಷೆಗೆ ಸಮನಾದ ಅಲ್ಲಿನ ಜಿಸಿಎಸ್‌ಸಿಯಲ್ಲಿ ಭಾಷೆಗಳು, ಸಾಹಿತ್ಯ, ಗಣಿತ, ವಿಜ್ಞಾನ ಶಾಖೆಗಳು, ಇನ್ನಿತರ ಆಯ್ಕೆಯ ವಿಷಯಗಳು ಹೀಗೆ ಬಹಳ ವಿಚಾರಗಳನ್ನು ಅಭ್ಯಾಸ ಮಾಡಬೇಕಾಗಿರುವುದು ವಿದ್ಯಾರ್ಥಿಗಳಲ್ಲಿ ಅತಿ ಒತ್ತಡವನ್ನು ಹೇರಿ, ಪರೀಕ್ಷೆಯಲ್ಲಿ ಸರಿಯಾದ ಅಂಕಗಳಿಸಲಾಗದೆ ಶಿಕ್ಷಣವನ್ನು ಅಲ್ಲಿಗೆ ಮೊಟಕುಗೊಳಿಸಿದ ಉದಾಹರಣೆಗಳೂ ಇವೆ. ಮಕ್ಕಳು ಇಷ್ಟಪಡುವಂತೆ ಸುಲಲಿತವಾಗಿ ಸಾಗುವ ಇಲ್ಲಿನ ಪ್ರಾಥಮಿಕ ವಿದ್ಯಾಭ್ಯಾಸ, ಹೈಸ್ಕೂಲ್‌ಹಂತದಲ್ಲಿ ಗಂಭೀರ ಸವಾಲುಗಳನ್ನು ಒಡ್ಡುತ್ತದೆ. ಇಲ್ಲಿನ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೂ ಈ ಬಗ್ಗೆ ಪರವಿರೋಧ ನಿಲುವುಗಳಿವೆ, ಶೈಕ್ಷಣಿಕ ಪದ್ಧತಿಯ ಸುಧಾರಣೆ ಇಲ್ಲಿನ ಚುನಾವಣಾ ಪ್ರಣಾಳಿಕೆಯ ಭಾಗವೂ ಹೌದು. ಮಕ್ಕಳ ಸ್ಕೂಲ್‌ಬ್ಯಾಗ್ ಅವರ ತೂಕದ 10%ಗಿಂತ ಕಡಿಮೆ ಇರಬೇಕೆನ್ನುವ ನಿಯಮ ಇಲ್ಲೂ ಇದೆ. ಪ್ರಾಥಮಿಕ ಶಿಕ್ಷಣವು, ಸ್ಕೂಲ್‌ಬ್ಯಾಗ್ ಭಾರವನ್ನು ಇಳಿಸುವಂತೆ ವಿನ್ಯಾಸಗೊಂಡಿರುವುದರಿಂದ ಆ ನಿಯಮ ಪಾಲನೆ ಸುಲಭವಾಗಿದೆ. ಸ್ಕೂಲ್ ಬ್ಯಾಗ್ ಎಂಬುದು ಶಿಕ್ಷಣ ವ್ಯವಸ್ಥೆಯ ಪ್ರತಿಬಿಂಬ
ಜಗತ್ತಿನ ಯಾವ ಮೂಲೆಯಲ್ಲಿಯೇ ಇದ್ದರೂ ಸ್ಕೂಲ್‌ಬ್ಯಾಗ್ ಅಲ್ಲಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಚಿತ್ರಸಬಲ್ಲ ಒಂದು ರೂಪಕವೇ. ಕೆಲವು ಕಡೆಗಳಲ್ಲಿ ಮಕ್ಕಳ ಬೆನ್ನಿಗೆ ಬ್ಯಾಗು ಭಾರ. ಇನ್ನು ಕೆಲವು ಕಡೆಗಳಲ್ಲಿ ಮಕ್ಕಳು ಕೈಯಲ್ಲಿ ಬ್ಯಾಗು ಹಿಡಿದುಕೊಂಡು ನಲಿಯುತ್ತ ಶಾಲೆಗೆ ಹೋಗಿ ಬರುತ್ತವೆ. 1989ರಲ್ಲಿ ರಾಜ್ಯಸಭೆಯ ಚರ್ಚೆಯ ಕೇಂದ್ರವಾದ ಸ್ಕೂಲ್ ಬ್ಯಾಗ್‌ನ ವಿಚಾರ ಈಗಿನ ಹಾಗೂ ಹಿಂದಿನ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಚರ್ಚೆಗಳಲ್ಲಿ ಆದೇಶಗಳಲ್ಲಿ ಮತ್ತೆ ಮತ್ತೆ ಬಂದು ಹೋಗುತ್ತಲೇ ಇದೆ. ಆದರೆ, ಈ ಆದೇಶಗಳು ಸ್ಕೂಲ್ ಬ್ಯಾಗ್ ಸಮಸ್ಯೆಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ. ಯೋಗಿಂದ್ರ ಮರವಂತೆ