Advertisement

Scholarship ಏಕರೂಪ ವ್ಯವಸ್ಥೆಯಡಿ ಸ್ಕಾಲರ್‌ಶಿಪ್‌: ರಾಜ್ಯ ಸರಕಾರ ನಿರ್ಧಾರ

11:01 PM Nov 15, 2023 | Team Udayavani |

ಉಡುಪಿ: ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲ ರೀತಿಯ ವಿದ್ಯಾರ್ಥಿ ವೇತನವನ್ನು 2023-24ನೇ ಸಾಲಿನಿಂದಲೇ ಏಕರೂಪ ವ್ಯವಸ್ಥೆಯಡಿ ತರಲು ರಾಜ್ಯ ಸರಕಾರ ನಿರ್ಧರಿಸಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ಅನಂತರದ ಶಿಷ್ಯವೇತನ/ ಶುಲ್ಕ ಮರುಪಾವತಿ/ ಪ್ರೋತ್ಸಾಹಧನ ಯೋಜನೆಯನ್ನು ಒಂದೇ ಪೋರ್ಟಲ್‌ ಅಡಿಯಲ್ಲಿ ಆನ್‌ಲೈನ್‌ ಮೂಲಕ ಅನುಷ್ಠಾನಕ್ಕೆ ರೂಪರೇಖೆ ಸಿದ್ಧಪಡಿಸಲಾಗಿದೆ.

Advertisement

ಇಲಾಖೆಯಡಿ ಬರುವ ಅಧೀನ ಇಲಾಖೆಗಳು, ಸಾರ್ವಜನಿಕ ವಿಶ್ವವಿದ್ಯಾನಿಲಯ, ಸರಕಾರದ ಅನುದಾನಿತ, ಅರೆಸರಕಾರಿ, ಸ್ವಂತ ನಿಧಿ, ದತ್ತಿನಿಧಿ, ಎಸ್‌ಸಿಪಿ/ಟಿಎಸ್‌ಪಿ, ಒಬಿಸಿ, ಮೈನಾರಿಟಿ, ಅನುದಾನದಿಂದ ಒದಗಿಸುವ ಎಲ್ಲ ತರಹದ ವಿದ್ಯಾರ್ಥಿವೇತನ/ ಸಹಾಯಧನ/ ನಗದು ಪುರಸ್ಕಾರಗಳನ್ನು 2023-24ನೇ ಸಾಲಿನಿಂದ ಇ- ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿರುವ “ಸ್ಟೇಟ್‌ ಸ್ಕಾಲರ್‌ಶಿಪ್‌ ಪೋರ್ಟಲ್‌'(ಎಸ್‌ಎಸ್‌ಪಿ) ತಂತ್ರಾಂಶದ ಮೂಲಕವೇ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಪಾವತಿಸಲು ಸರಕಾರ ಆದೇಶ ಹೊರಡಿಸಿದೆ.

ಕಾಲೇಜಿನಲ್ಲಿ ಹೆಲ್ಪ್ ಡೆಸ್ಕ್
ಏಕರೂಪ ವ್ಯವಸ್ಥೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಅಡಿಯಲ್ಲಿರುವ ಸಂಯೋಜಿತ ಕಾಲೇಜುಗಳು ಕೋರ್ಸ್‌ವಾರು ಮತ್ತು ಕಾಂಬಿನೇಶನ್‌ ವಾರು ಮಾಹಿತಿಯನ್ನು ಸಲ್ಲಿಸುವಂತೆ ಇಲಾಖೆಯಿಂದ ಈಗಾಗಲೇ ಎಲ್ಲ ಕಾಲೇಜು, ಶಿಕ್ಷಣ ಸಂಸ್ಥೆಗಳು ಹಾಗೂ ವಿ.ವಿ.ಗಳಿಗೆ ನಿರ್ದೇಶನ ನೀಡಿದೆ. ಎಸ್‌ಎಸ್‌ಪಿಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಮೆಟ್ರಿಕ್‌ ಅನಂತರದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಬೇಕು ಮತ್ತು ವಿ.ವಿ., ಕಾಲೇಜುಗಳು ನಿರ್ದಿಷ್ಟ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಬೇಕು ಎಂಬ ಸೂಚನೆ ನೀಡಿದೆ.

ವಿವಿಧ ವಿದ್ಯಾರ್ಥಿವೇತನ
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರತಿಭಾ ಪುರಸ್ಕಾರ, ಶುಲ್ಕ ವಿನಾಯಿತಿ, ಶುಲ್ಕ ಮಂಜೂರಾತಿ, ಮರುಪಾವತಿ, ವಿದ್ಯಾರ್ಥಿವೇತನ, ಶಿಷ್ಯವೇತನ, ಶಿಷ್ಯವೇತನ ಪರಿಷ್ಕರಣೆ, ಉಚಿತ ಶಿಕ್ಷಣ, ಬೋಧನಾ ಶುಲ್ಕ, ಜೀವನೋಪಾಯ ಭತ್ಯೆ ಕಾರ್ಯಕ್ರಮಗಳನ್ನು ಕೆಲವೊಂದು ಷರತ್ತು ವಿಧಿಸಿ ನೀಡುವ ಹಣವನ್ನು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸಲು ಈ ತಂತ್ರಾಂಶ ಸಿದ್ಧಪಡಿಸಲಾಗಿದೆ.

https://ssp.postmatric.karnataka.gov.in/ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಮಾಹಿತಿ ಪಡೆಯಬಹುದಾಗಿದೆ. ಇಲ್ಲಿಯವರೆಗೂ ಎಸ್‌ಎಸ್‌ಪಿ ತಂತ್ರಾಂಶದಲ್ಲಿ ಖಾತೆ ಸೃಜಿಸದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಖಾತೆ ಸೃಷ್ಟಿಸಬೇಕು. 2023-24ನೇ ಸಾಲಿನ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಬಗೆಯನ್ನು ವೆಬ್‌ಸೈಟ್‌ ಮೂಲಕವೇ ಪಡೆಯಬಹುದಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಮೆಟ್ರಿಕ್‌ ಅನಂತರದ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ಆರಂಭವಾಗಿಲ್ಲ. ಅದಾಗ್ಯೂ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಿತ ಸರಕಾರದ ಆದೇಶ ಹೊರಬಿದ್ದ ಅನಂತರ ಅರ್ಹತೆಯನುಸಾರ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next