ಸಾಗರ: ಸಾಗರ ಮತ್ತು ಸೊರಬ ತಾಲೂಕಿನ ಪ್ರತಿಭಾವಂತ ಕ್ರಿಕೆಟ್ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಕಾಲರ್‌ಶಿಪ್ ಯೋಜನೆಯನ್ನು ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿ ಈ ಸಾಲಿನಿಂದ ಜಾರಿಗೆ ತರುತ್ತಿದೆ. ಹಿರಿಯ ಕ್ರಿಕೆಟ್ ಆಟಗಾರ ದಿವಂಗತ ಸಿ.ಪಿ.ಭಾಸ್ಕರ್ ಅವರ ನೆನಪಿನಲ್ಲಿ ಕುಟುಂಬಸ್ಥರು ಮತ್ತು ಮೊಮ್ಮಗ ನಿಶಾಂತ್ ವಿ.ಜಿ. ಈ ಸ್ಕಾಲರ್‌ಶಿಪ್ ನೀಡಲು ಮುಂದೆ ಬಂದಿದ್ದಾರೆ ಎಂದು ಅಕಾಡೆಮಿ ಮುಖ್ಯಸ್ಥ ನಾಗೇಂದ್ರ ಪಂಡಿತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷದೊಳಗೆ, 16 ವರ್ಷದೊಳಗೆ ಮತ್ತು 19 ವರ್ಷದೊಳಗಿನ ಮೂರುವಿಭಾಗದಲ್ಲಿ ತಲಾ ಇಬ್ಬರು ಕ್ರಿಕೆಟಿಗರಿಗೆ ಸ್ಕಾಲರ್‌ಶಿಪ್ ಸೌಲಭ್ಯ ದೊರಕಲಿದೆ. ಈ ಪೈಕಿ 14 ವರ್ಷದೊಳಗಿನ ಕ್ರಿಕೆಟಿಗರು ಸೌಲಭ್ಯ ಪಡೆಯಬೇಕಾದರೆ ನಾಗೇಂದ್ರ ಪಂಡಿತ್ ಕ್ರಿಕೇಟ್ ಅಕಾಡೆಮಿಯ ನೋಂದಾಯಿತ ಸದಸ್ಯನಾಗುವುದು ಕಡ್ಡಾಯವಾಗಿದೆ ಎಂದರು.
16 ವರ್ಷದೊಳಗಿನ ವಿಭಾಗದಲ್ಲಿ ಕೆಎಸ್‌ಸಿಎ ಶಿವಮೊಗ್ಗ ವಲಯದಲ್ಲಿ ನೋಂದಾವಣೆಗೊಂಡ ಲೀಗ್ ಕ್ರಿಕೆಟ್ ಕ್ಲಬ್‌ನಲ್ಲಿ ಆಡುತ್ತಿರುವ ಸದಸ್ಯರು ಯೋಜನೆಗೆ ಅರ್ಹರಾಗಿರುತ್ತಾರೆ. 19 ವರ್ಷದೊಳಗಿನ ವಿಭಾಗದಲ್ಲಿ ಮೇಲಿನ ಎರಡೂ ವಿಭಾಗದಲ್ಲಿ ಬರುವ ಆಟಗಾರರು ಅರ್ಹರಾಗಿರುತ್ತಾರೆ. ಮೂರು ವಿಭಾಗಗಳಲ್ಲಿ ಆಯ್ಕೆಯಾದ ಆಟಗಾರರಿಗೆ 2020-21ನೇ ಸಾಲಿನಿಂದ ಮುಂದಿನ ಐದು ವರ್ಷದವರೆಗೆ ಸ್ಕಾಲರ್‌ಶಿಪ್ ಯೋಜನೆಯಡಿ ನೆರವು ನೀಡಲಾಗುತ್ತದೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಆಗಸ್ಟ್ ವರೆಗೆ ಆಟಗಾರರ ಮೌಲ್ಯಮಾಪನ ಮಾಡಲಾಗುತ್ತದೆ. ಈ ಸ್ಕಾಲರ್‌ಶಿಪ್ ನಗದು, ಸ್ಮರಣಿಕೆ ಹಾಗೂ ಕ್ರಿಕೆಟ್ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ ಎಂದರು.
ಸ್ಕಾಲರ್‌ಶಿಪ್‌ಗೆ ನಿಗದಿಪಡಿಸಿರುವ ಮೂರು ವಯೋಮಾನಗಳ ವರ್ಗದಡಿ ಅರ್ಜಿ ಸಲ್ಲಿಸುವ ಆಟಗಾರರ ಅರ್ಜಿಯನ್ನು ನಾಗೇಂದ್ರ ಕೆ. ಪಂಡಿತ್, ಕೆ.ಆರ್. ಗಣೇಶ ಪ್ರಸಾದ್, ಎಂ.ರಾಘವೇಂದ್ರ, ಪಿ.ಅತ್ರಿ ಈ ನಾಲ್ವರನ್ನು ಒಳಗೊಂಡ ಪರಿಶೀಲನಾ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಸುತ್ತದೆ. ಆಗಾಗ ಈ ಪರಿಶೀಲನಾ ಸಮಿತಿ ಸಭೆ ಸೇರಿ ಸ್ಥಳೀಯಕ್ರಿಕೆಟ್ ಕ್ಲಬ್‌ಗಳ ಪ್ರಮುಖರ, ಶಿವಮೊಗ್ಗ ವಲಯ ಕ್ರಿಕೆಟ್ ಅಂಪೈರ್‌ಗಳ ಸಲಹೆ ಪಡೆದು ಫಲಾನುಭವಿಗಳ ಆಯ್ಕೆ, ಆಯ್ಕೆಯಾದ ಫಲಾನುಭವಿಗಳ ಪ್ರಗತಿ ಮೊದಲಾದ ವಿಷಯ ಕುರಿತು ನಿರಂತರವಾಗಿ ಪರಿಶೀಲಿಸುತ್ತದೆ. ಈ ಸಾಲಿನ ಸೆ.23ರಿಂದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಾಗರದಲ್ಲಿ ಪ್ರತಿಭಾವಂತ ಕ್ರಿಕೆಟ್ ಪಟುಗಳಿದ್ದಾರೆ. ಕ್ರಿಕೆಟ್ ನನ್ನ ಬದುಕಿಗೆ ದೊಡ್ಡ ಕೊಡುಗೆ ನೀಡಿದೆ. ನನ್ನೂರಿನ ಪ್ರತಿಭಾವಂತ ಯುವ ಕ್ರಿಕೆಟಿಗರಿಗೆ ಸಹಕಾರ ನೀಡಬೇಕು ಎನ್ನುವ ಉದ್ದೇಶದಿಂದ ನಾಗೇಂದ್ರ ಪಂಡಿತ್ ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲಾಗಿದೆ. ವರದಹಳ್ಳಿ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಒಳಾಂಗಣ ಕ್ರಿಕೆಟ್ ಅಂಕಣಕ್ಕೆ ಕಡಿಮೆ ಇಲ್ಲದ ರೀತಿಯಲ್ಲಿ ಅಂಕಣ ಸಿದ್ಧಗೊಳಿಸಲಾಗಿದೆ. ಹೊನಲು ಬೆಳಕಿನ ಸೌಲಭ್ಯದೊಂದಿಗೆ ಗುಣಮಟ್ಟದ ಟರ್ಫ್ ಅಂಕಣವಿದ್ದು, ಮಲೆನಾಡಿನಲ್ಲಿ ಮಳೆಗಾಲದಲ್ಲೂ ಕ್ರಿಕೆಟ್ ತರಬೇತಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ವರ್ಷದ 365 ದಿನವೂ ದಿನದ 24 ಗಂಟೆಯೂ ನಮ್ಮ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಅವಕಾಶ ಇದೆ ಎಂದು ತಿಳಿಸಿದರು.
ಕೆ.ಆರ್.ಗಣೇಶ ಪ್ರಸಾದ್, ಪಿ.ಅತ್ರಿ, ಯಾಯಾ ಖಾನ್, ಪ್ರೇಮ್ ಸಿಂಗ್, ಶಶಾಂಕ್, ಹರ್ಷ ಮಂಚಾಲೆ, ಮಾಲತೇಶ್, ವೆಂಕಟೇಶ್ ಹಾಜರಿದ್ದರು.