ಹೊಸದಿಲ್ಲಿ: 2020ರ ಟೋಕಿಯೊ ಒಲಿಂಪಿಕ್ಸ್‌ನ ಮೊದಲ ಸುತ್ತಿನ ಅರ್ಹತಾ ಕೂಟಕ್ಕಾಗಿ ನಡೆಯಲಿರುವ “ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ಸಿರೀಸ್ ಫೈನಲ್ಸ್’ ಪಾಲ್ಗೊಳ್ಳುವ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಭಾರತ ತಂಡ ಕಠಿನ ಸ್ಪರ್ಧೆ ಇಲ್ಲದಿರುವ ಗುಂಪಿನಲ್ಲಿ ಸ್ಥಾನ ಲಭಿಸಿದೆ.
ಈ ವಿಚಾರವನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದ್ದು, ಭಾರತದ ಪಂದ್ಯಗಳು ಜೂನ್ 6ರಿಂದ 16ರ ವರೆಗೆ ಭುವನೇಶ್ವರದಲ್ಲಿ ನಡೆಯಲಿವೆ.
“ಒಲಿಂಪಿಕ್ಸ್ ಗೇಮ್ಸ್ ಪ್ರವೇಶಿಸಲು ಎಫ್ಐಎಚ್ ಸಿರೀಸ್ ಫೈನಲ್ಸ್ ಒಂದು ದಾರಿಯಾಗಿದ್ದು. ಈ ಸಿರೀಸ್ ಫೈನಲ್ಸ್‌ನಲ್ಲಿ ಅಗ್ರ ಸ್ಥಾನ ಸಂಪಾದಿಸಿದರ ತಂಡಗಳು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಎರಡು ಸುತ್ತಿನ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ’ ಎಂದು ಎಫ್ಐಎಚ್ ತಿಳಿಸಿದೆ.
ವನಿತಾ ಹಾಕಿ ತಂಡಗಳು ಕೂಡ ಈ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿವೆ. ಎರಡು ವಿಭಾಗದಲ್ಲೂ 8 ತಂಡಗಳ 3 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
ಭಾರತದ ಪುರುಷರ ತಂಡ ಜಪಾನ್, ಮೆಕ್ಸಿಕೋ, ಪೋಲ್ಯಾಂಡ್, ರಶ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕಾ ಹಾಗೂ ಉಜ್ಬೇಕಿಸ್ಥಾನ ತಂಡಗಳೊಂದಿಗೆ ಸೆಣೆಸಾಟ ನಡೆಸಲಿದೆ.