Advertisement

ಮಾರ್ಚ್‌ ಎರಡನೇ ವಾರ ವೇಳಾಪಟ್ಟಿ ?​​​​​​​

12:30 AM Feb 26, 2019 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಮಾರ್ಚ್‌ 2ನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

Advertisement

ಹಾಲಿ ಲೋಕಸಭೆಯ ಅವಧಿ ಈ ವರ್ಷ ಮೇ 26ಕ್ಕೆ ಕೊನೆಗೊಳ್ಳಲಿದ್ದು, ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ವಿವಿಧ ಹಂತಗಳಲ್ಲಿ ಮತದಾನ ನಡೆಸಬೇಕಾದರೆ ಕನಿಷ್ಠ ಒಂದೂವರೆ ತಿಂಗಳು ಬೇಕು. ಅಧಿಸೂಚನೆ ಹೊರಬಿದ್ದ ದಿನಾಂಕ ಹಾಗೂ ಮತದಾನದ ದಿನಕ್ಕೆ ಕನಿಷ್ಠ 45 ದಿನಗಳ ಅಂತರ ಇರಬೇಕು ಎಂಬ ನಿಯಮವಿದ್ದು ಮಾರ್ಚ್‌ 2ನೇ ವಾರದಲ್ಲಿ ವೇಳಾಪಟ್ಟಿ ಪ್ರಕಟವಾಗಿ, ಏಪ್ರಿಲ್‌ ಇಡೀ ತಿಂಗಳು ಹಾಗೂ ಮೇ 2ನೇ ವಾರದವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಮಾ.5ರಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಅದರಂತೆ ಆಂಧ್ರಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಜೊತೆಗೆ ದೇಶದ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ 543 ಲೋಕಸಭಾ ಸ್ಥಾನಗಳಿಗೆ 9 ಹಂತಗಳಲ್ಲಿ ಮತದಾನ ನಡೆದಿತ್ತು. ಈ ಬಾರಿಯೂ ಅಷ್ಟೇ ಹಂತಗಳಲ್ಲಿ ಮತದಾನ ನಡೆಯಬಹುದು.

2019ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ 2018ರ ಆರಂಭದಿಂದಲೇ ಸಿದ್ಧತೆಗಳನ್ನು ಆರಂಭಿಸಿತ್ತು. ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, 2019ರ ಜ.1ರಂದು 18 ವರ್ಷ ತುಂಬಿದವರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವುದು ಸೇರಿದಂತೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಫೆ.23-23 ಹಾಗೂ ಮಾ.2-3ರಂದು “ಮಿಂಚಿನ ನೋಂದಣಿ ಅಭಿಯಾನ’ ಹಮ್ಮಿಕೊಂಡಿದೆ. ಮಾ.3ರಂದು ಮಿಂಚಿನ ನೋಂದಣಿ ಅಭಿಯಾನ ಮುಗಿಯಲಿದ್ದು, ಮಾ.4ರಂದು ಮಹಾ ಶಿವರಾತ್ರಿ ಪ್ರಯುಕ್ತ ಸರ್ಕಾರಿ ರಜೆ ಇದೆ. ಹಾಗಾಗಿ ಮಾ.5 ಅಥವಾ ಅದರ ಬಳಿಕ ಮಾ.11ರೊಳಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಬಹುದು ಎಂದು ಅಂದಾಜಿಸಲಾಗುತ್ತಿದೆ.

ರಾಜ್ಯದಲ್ಲಿ ಏಪ್ರಿಲ್‌ ಎರಡನೇ ವಾರ ಮತದಾನ?
2014ರ ಲೋಕಸಭಾ ಚುನಾವಣೆ ವೇಳೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ಮತದಾನ ನಡೆದಿತ್ತು. ಈ ಬಾರಿ ಏಪ್ರಿಲ್‌ ಮೊದಲ ವಾರದಲ್ಲಿ ಅಂದರೆ ಏ.4ರ ಬಳಿಕ ಏ.7 ಅಥವಾ ಏ.14 ಮತದಾನ ನಡೆಯಬಹುದು. ಏಕೆಂದರೆ, ಮಾ.1ರಿಂದ 18ರವರೆಗೆ ಪಿಯುಸಿ ಹಾಗೂ ಮಾ.21ರಿಂದ ಏಪ್ರಿಲ್‌ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಅಲ್ಲದೇ ಎಪ್ರಿಲ್‌ 23ರಿಂದ ಸಿಇಟಿ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ, ರಾಜ್ಯದಲ್ಲಿ ಏಪ್ರಿಲ್‌ 2ನೇ ವಾರದಲ್ಲಿ ಮತದಾನ ನಡೆಯುವ ಸಾಧ್ಯತೆಗಳು ಹೆಚ್ಚಿವೆ. 2009ರ ಲೋಕಸಭಾ ಚುನಾವಣೆಗೂ ರಾಜ್ಯದಲ್ಲಿ ಏಪ್ರಿಲ್‌ ತಿಂಗಳಲ್ಲೇ ಮತದಾನ ನಡೆದಿತ್ತು.

Advertisement

“ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾವುದೇ ಸಂದರ್ಭದಲ್ಲೂ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಬಹುದು. ಇಂತಹ ದಿನ ಅಥವಾ ಇಂತಹ ವಾರ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ’.
– ಸಂಜೀವಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next