Advertisement

SCDCC Bank 61.29 ಕೋ.ರೂ. ಲಾಭ: ಸಾರ್ವಕಾಲಿಕ ಗರಿಷ್ಠ ದಾಖಲೆ; ಶೇ. 9 ಡಿವಿಡೆಂಡ್‌ ಘೋಷಣೆ

12:08 AM Aug 20, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್‌ ವಿವಿಧ ಯೋಜನೆಗಳ ಮೂಲಕ ಆಧುನಿಕ ಬ್ಯಾಂಕಿಂಗ್‌ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದೆ. 2022-23ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 61.29 ಕೋಟಿ ರೂ. ಲಾಭ ಗಳಿಸಿ ಸದಸ್ಯ ಸಂಘಗಳಿಗೆ ಶೇ. 9 ಡಿವಿಡೆಂಡನ್ನು ಘೋಷಿಸುತ್ತಿದ್ದೇವೆ ಎಂದು ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.

Advertisement

ಶನಿವಾರ ಬ್ಯಾಂಕ್‌ನ ಸಭಾಭವನದಲ್ಲಿ ನಡೆದ 109ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಕೋರ್‌ ಬ್ಯಾಂಕಿಂಗ್‌ನಂಥ ಸೇವೆಗಳು ಬ್ಯಾಂಕಿನ 111 ಶಾಖೆಗಳಲ್ಲೂ ದೊರೆಯುತ್ತಿವೆ. ಮೊಬೈಲ್‌ ಆ್ಯಪ್‌, ಟ್ಯಾಬ್‌ ಬ್ಯಾಂಕಿಂಗ್‌ನಂಥ ವಿನೂತನ ವ್ಯವಸ್ಥೆಯನ್ನು ಬ್ಯಾಂಕ್‌ ಪರಿಚಯಿಸಿದೆ. ಮುಂದೆ ಇಮೀಡಿಯೆಟ್‌ ಪೇಮೆಂಟ್‌ ಸರ್ವಿಸ್‌ ಹಾಗೂ ಇಂಟರ್‌ ಬ್ಯಾಂಕಿಂಗ್‌ ಸೇವೆಯನ್ನು ರೂಪಿಸಲು ಮುಂದಾ ಗಿದೆ ಎಂದರು.

ಗುರಿ ಮೀರಿದ ಸಾಧನೆ
ವರ್ಷದಲ್ಲಿ 13,514.51 ಕೋಟಿ ರೂ. ವ್ಯವಹಾರ ನಡೆಸಿ ಗುರಿಮೀರಿದ ಸಾಧನೆಗೈದಿದೆ. ವಾಣಿಜ್ಯ ಬ್ಯಾಂಕು ಗಳಲ್ಲಿ ಠೇವಣಿ ಸಂಗ್ರಹದಲ್ಲಿ ಪೈಪೋಟಿ ಇದ್ದರೂ ನಮ್ಮ ಬ್ಯಾಂಕ್‌ 111 ಶಾಖೆ ಗಳ ಮೂಲಕ 6,371.89 ಕೋಟಿ ರೂ. ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಆರ್ಥಿಕ ವರ್ಷದಲ್ಲಿ 5,793.40 ಕೋಟಿ ರೂ. ಮುಂಗಡ ನೀಡಿದೆ. 1,054 ಸಹಕಾರಿ ಸಂಘಗಳು ಬ್ಯಾಂಕ್‌ಗೆ ಸದಸ್ಯರಾಗಿದ್ದು ಪಾಲು ಬಂಡವಾಳ 343.44 ಕೋಟಿ ರೂ., ದುಡಿಯುವ ಬಂಡವಾಳ 9,930.69 ಕೋಟಿ ರೂ. ಹಾಗೂ 240.82 ಕೋಟಿ ರೂ. ವಿವಿಧ ನಿಧಿಗಳನ್ನು ಹೊಂದಿದೆ ಎಂದರು.

ರಾಷ್ಟ್ರೀಯ ದಾಖಲೆ
ಎಲ್ಲ ಕೃಷಿ ಸಾಲಗಳು ಶೇ. 100 ಮರುಪಾವತಿಯಾಗಿವೆ. 28 ವರ್ಷಗಳಿಂದ ನಿರಂತರವಾಗಿ ಈ ಸಾಧನೆ ಮಾಡುತ್ತಿರುವುದೂ ರಾಷ್ಟ್ರೀಯ ದಾಖಲೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಬಾರಿ 12 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಿಯಲ್ಲಿ ಶೇ. 100 ಸಾಧನೆ ಮಾಡಿವೆ. 34,178 ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ 141.38 ಕೋಟಿ ರೂ. ಒಟ್ಟು 34,069 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ 458.86 ಕೋಟಿ ರೂ. ಸಾಲ ಹೊರಬಾಕಿ ಇದೆ ಎಂದರು.

Advertisement

ಯಶ್‌ಪಾಲ್‌ಗೆ ಸಮ್ಮಾನ
ಉಡುಪಿಯ ಶಾಸಕರಾದ ದ.ಕ. ಮೀನು ಮಾರಾಟ ಸಹಕಾರ ಮಹಾಮಂಡಳ ಹಾಗೂ ಮಹಾಲಕ್ಷ್ಮೀ ಕೋ-ಅಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಅವರನ್ನು ಸಮ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕಾರ
2022-23ನೇ ಸಾಲಿನಲ್ಲಿ ಶೇ. 100ರ ವಸೂಲಾತಿಯಲ್ಲಿ ಸಾಧನೆಗೈದ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳಿಗೆ ಪ್ರಶಸ್ತಿ ಪತ್ರ, ಲೆಕ್ಕಪರಿಶೋಧನೆ “ಅ’ ವರ್ಗ ಮತ್ತು “ಬಿ’ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಸಿಇಒಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

2022-23ನೇ ಸಾಲಿನ ಜಿಲ್ಲಾ ಬ್ಯಾಂಕ್‌ನ ಪ್ರೋತ್ಸಾಹಕ ಪ್ರಶಸ್ತಿಯನ್ನು 134 ಸಹಕಾರಿ ಸಂಘಗಳು, 2021-22ನೇ ಸಾಲಿನ ಅಪೆಕ್ಸ್‌ ಬ್ಯಾಂಕ್‌ನ ಪ್ರಶಸ್ತಿಯನ್ನು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. 2022-23ನೇ ಸಾಲಿನ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು 11 ಸಂಘಗಳಿಗೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ನೀಡುವ ಪ್ರಶಸ್ತಿಯನ್ನು 4 ಬ್ಯಾಂಕುಗಳಿಗೆ ನೀಡಲಾಗಿದೆ.

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಶಸ್ತಿಗೆ ದ.ಕ., ಉಡುಪಿ ಜಿಲ್ಲೆಯಿಂದ ತಲಾ 6 ಸಂಘಗಳು ಆಯ್ಕೆಯಾಗಿವೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್‌ನ 9 ಸಿಬಂದಿ ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 13 ಮಂದಿ ಸಿಇಒಗಳು ನಿವೃತ್ತರಾಗಿದ್ದು ಅವರಿಗೆ ಬ್ಯಾಂಕ್‌ನಿಂದ ತಲಾ 50 ಸಾವಿರ ರೂ. ನೀಡಿ ಗೌರವಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ, ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ ಎಸ್‌. ಕೋಟ್ಯಾನ್‌, ದೇವಿ ಪ್ರಸಾದ ಶೆಟ್ಟಿ ಬೆಳಪು, ಎಂ. ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಶಶಿಕುಮಾರ್‌ ರೈ ಬಿ., ಎಸ್‌.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಎಂ. ಮಹೇಶ್‌ ಹೆಗ್ಡೆ, ಕೆ. ಜೈರಾಜ್‌ ಬಿ. ರೈ, ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಸದಾಶಿವ ಉಳ್ಳಾಲ, ಬಿ. ರಾಜೇಶ್‌ ರಾವ್‌, ಉಭಯ ಜಿಲ್ಲೆಗಳ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್‌ ಎಚ್‌.ಎನ್‌., ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ., ಉಭಯ ಜಿಲ್ಲೆಗಳ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಪ್ರಸಾದ್‌ ಕೌಶಲ್‌ ಶೆಟ್ಟಿ, ಬ್ಯಾಂಕ್‌ನ ಸಿಇಒ ಎಂ. ಗೋಪಾಲಕೃಷ್ಣ ಭಟ್‌, ಮಹಾ ಪ್ರಬಂಧಕ ಅಶೋಕ್‌ ಕುಮಾರ್‌ ಕೆ. ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next