ಹೊಲದಲ್ಲಿ ಮರಗಳ ಸಂಖ್ಯೆ ಕಡಿಮೆಯಾದ ಬಳಿಕ ಕೀಟನಾಶಕ, ರಸಗೊಬ್ಬರ ಮಾರಾಟ ಅಂಗಡಿಗಳು ವಿಪರೀತ ಹೆಚ್ಚಿವೆ. ನಿಸರ್ಗದ ಏರುಪೇರಿನಿಂದ ವಿಷವರ್ತುಲದಲ್ಲಿ ಕೃಷಿಕರು ನಿಲ್ಲುವಂತಾಗಿದೆ. ಪಕ್ಷಿಗಳ ಆವಾಸವಾದ ಮರಗಳ ಕೊರತೆಯಿಂದ ಬೇಸಾಯ ರಾಸಾಯನಿಕ ಬಳಕೆಯ ದಾರಿ ಕುಸಿದಿದೆ. ಹವಾಮಾನ ಬದಲಾವಣೆ, ಬರದ ಭವಣೆಗಳಿಂದ ಸೋಲುತ್ತಿದ್ದೇವೆ. ನಿಸರ್ಗ ಸಂಹಾರದ ಕೆಲಸ ನಿಲ್ಲಿಸಿ ನಿಸರ್ಗ ಸಂಧಾನದ ಮೂಲಕ ಕೃಷಿ ಬದುಕಿಸುವ ಉಪಾಯ ಹುಡುಕಬೇಕಿದೆ.
ಕರಾವಳಿಯಲ್ಲಿ ನೊಣಗಳ ಹಾವಳಿ, ಊಟಕ್ಕೆ ಕುಳಿತರೆ ನೊಣ ಓಡಿಸುವ ಸಾಹಸ. ಈಗ್ಗೆ 20-25 ವರ್ಷಗಳ ಹಿಂದೆ ಹಲವು ಮನೆಗಳ ಅಡುಗೆ ಮನೆ ನೊಣ ನಿಯಂತ್ರಣಕ್ಕೆ ಜೇಡ ಬಳಸುವ ಉಪಾಯವಿತ್ತು. ಕಾಡಿನ ಕಲ್ಲು ಗುಡ್ಡದ ಕಂಟಿಗೆ ಬಲೆನೇಯ್ದು ಬದುಕುವ ಜೇಡವನ್ನು ಗಿಡ ಸಹಿತ ಕಡಿದು ತಂದು ಅಡುಗೆ ಕೋಣೆಯಲ್ಲಿಡುತ್ತಿದ್ದರು. ಅವು ದಿನವಿಡೀ ನೆಲದಲ್ಲಿ ಹರಿದಾಡುತ್ತ ಆಹಾರಕ್ಕಾಗಿ ನೊಣ ಹಿಡಿಯುತ್ತಿದ್ದವು. ಬೇಟೆ ಮುಗಿದ ಬಳಿಕ ಗೂಡು ಸೇರುತ್ತಿದ್ದವು. ನೊಣ ಹಿಡಿಯುತ್ತ ಜೇಡದ ಸಂತಾನ ಬೆಳೆಯುತ್ತಿತ್ತು. ಒಮ್ಮೆ ಕಡಿದು ತಂದ ಜೇಡದ ಗಿಡ ವರ್ಷಗಳ ಕಾಲ ನೊಣ ಹಿಡಿಯಲು ಸಹಾಯಕವಾಗುತ್ತಿತ್ತು. ವಿಷ ರಾಸಾಯನಿಕಗಳ ಬಳಕೆ ಇಲ್ಲದೇ ಮನೆ ನೊಣ ಸಂಹಾರಕ್ಕೆ ಜೇಡದ ಬಲೆಯ ಉಪಯೋಗವಿತ್ತು.
ಭತ್ತದ ಗದ್ದೆಯ ಒಂದಿಷ್ಟು ಜಾಗದಲ್ಲಿ ಮನೆ ಬಳಕೆಗೆ ಬೆಲ್ಲ ತಯಾರಿಸಲು ಕಬ್ಬು ಬೆಳೆಯುವುದು ಕರಾವಳಿ, ಮಲೆನಾಡಿನ ಪರಂಪರೆ. ಕಾಡಿನ ಪಕ್ಕ ಕಬ್ಬು ಬೆಳೆಯಲು ವನ್ಯಜೀವಿಗಳ ಉಪಟಳ ಸಾಮಾನ್ಯ. ರಾತ್ರಿ ಕಬ್ಬಿನ ಗದ್ದೆಯಲ್ಲಿ ಮಾಳ ಹಾಕಿ ನಿದ್ದೆಗೆಟ್ಟು ಕಾಯುತ್ತಿದ್ದರು. ಮುಂಜಾನೆಯ ಸವಿ ನಿದ್ದೆಯ ಸಮಯಕ್ಕೆ ನರಿಗಳು ಮೆಲ್ಲಗೆ ಬಂದು ಕಬ್ಬು ತಿಂದು ಹಾನಿ ಮಾಡುತ್ತಿದ್ದವು. ಕಬ್ಬಿನ ಗರಿ ಮುರಿದು ಹಿಂಡಿಗೆಗೆ ಸುತ್ತುವ ಕೃಷಿಕರು ನೆಲದ ಕೆಸರು ಮಣ್ಣನ್ನು ಬುಡದಿಂದ ಎರಡು ಮೂರು ಅಡಿಯೆತ್ತರಕ್ಕೆ ಲೇಪಿಸುತ್ತಿದ್ದರು. ನೆಲಕ್ಕೆ ಮಣ್ಣು ಸಾರಿಸಿದಂತೆ ಕಬ್ಬಿನ ಹಿಂಡಿಗೆಗೆ ಮಣ್ಣಿನ ಹೊದಿಕೆ ಇರುತ್ತಿತ್ತು. ಸಿಹಿ ಕಬ್ಬು ತಿನ್ನಲು ಬಾಯಿ ಹಾಕುವ ನರಿ ಬಾಯಿಗೆ ಮಣ್ಣು ತಾಗುತ್ತಿತ್ತು. ಕಬ್ಬು ಮಣ್ಣೆಂದು ಭಾವಿಸಿ ನರಿ ಕಾಲೆ¤ಗೆಯುತ್ತಿತ್ತು. ಜಾಣ ನರಿಯನ್ನು ಕೃಷಿಕರು ಮಣ್ಣಿನಿಂದ ಮೋಸಗೊಳಿಸುತ್ತಿದ್ದರು.
ಕರಾವಳಿ ಗದ್ದೆಗಳಲ್ಲಿ ಬೇಸಿಗೆಯಲ್ಲಿ ದ್ವಿದಳ ಧಾನ್ಯ, ತರಕಾರಿ ಬೆಳೆಯುತ್ತಾರೆ. ಕಾಡು ಪ್ರಾಣಿ, ದನಕರುಗಳಿಂದ ಬೆಳೆ ರಕ್ಷಣೆ ಸವಾಲು. ಅದರಲ್ಲಿಯೂ ಕೆಲವು ಕಿಲಾಡಿ ದನಕರುಗಳು ಎಂಥ ಬೇಲಿಗಳನ್ನು ನುಸುಳಿ ಬೆಳೆ ಮೇಯುತ್ತವೆ. ಹೊಲದ ಸುತ್ತ ಮರಳಿನ ಕಂಟ ಕಟ್ಟುವುದು ಬೇಸಿಗೆ ಬೆಳೆ ರಕ್ಷಣೆಯ ಸರಳ ಉಪಾಯವಾಗಿತ್ತು. ಮರಳು ಮಿಶ್ರಿತ ಮಣ್ಣನ್ನು ಸಲಿಕೆಯಿಂದ ಎತ್ತಿ ತೆಗೆದು ಗೋಡೆಯಂತೆ ಐದಾರು ಅಡಿ ಏರಿಸುತ್ತಿದ್ದರು. ಬುಡದಲ್ಲಿ ಎರಡಡಿ ದಪ್ಪದ ಮರಳಿನ ಗೋಡೆ ಮೇಲೇರುತ್ತ ತೆಳ್ಳಗಾಗಿ ಅರ್ಧ ಅಡಿ ಇರುತ್ತಿತ್ತು. ಬೇಸಿಗೆಯ ಮೂರು ನಾಲ್ಕು ತಿಂಗಳು ಬೆಳೆ ರಕ್ಷಣೆಯ ತಾತ್ಕಾಲಿಕ ಮರಳಿನ ಗೋಡೆ ಬಡವರ ಕೃಷಿ ಗೆಲುವಿನ ಕೋಟೆಯಾಗಿತ್ತು. ಬೇಲಿ ನಿರ್ಮಾಣಕ್ಕೆ ಕಾಡಿನ ಗಿಡ ಕಡಿಯದೇ ಬೆಳೆ ರಕ್ಷಣೆಯ ಉಪಾಯವನ್ನು ಹಿರಿಯರು ಕಂಡುಕೊಂಡಿದ್ದರು. ಹಸಿರಿನ ಸುತ್ತ ಕೋಟೆಯಂತೆ ಮಣ್ಣಿನ ಗೋಡೆ ಮಾತ್ರ ಕಾಣುತ್ತಿದ್ದರಿಂದ ದನಕರುಗಳು ಬೇಲಿ ಹಾರುವ ಪ್ರಮೇಯರಲಿಲ್ಲ. ನಮ್ಮ ಕೃಷಿಕರು ಯಾವತ್ತೂ ಸಮಸ್ಯೆ ಪರಿಹಾರಕ್ಕೆ ಕಂಪನಿಗಳನ್ನು, ವಿಶ್ವವಿದ್ಯಾಲಯಗಳನ್ನು ಕಂಡವರಲ್ಲ. ಮೊದಲು ನೆಲದ ಸಾಧ್ಯತೆ ಹುಡುಕಿದವರು. ಹೆಚ್ಚಿನ ಖರ್ಚಿಲ್ಲದ ದಾರಿ ಕಂಡವರು. ಭತ್ತ, ಧ್ವಿದಳ ಧಾನ್ಯ ರಕ್ಷಣೆಗೆ ವಿಷ ರಾಸಾಯನಿಕ ಬಳಸುತ್ತಿರಲಿಲ್ಲ. ಮತ್ತಿ ಮರದ ಬೂದಿ, ಲಕ್ಕಿ ಸೊಪ್ಪು, ನೆಲತುಂಬೆ, ಬೇನ ಸೊಪ್ಪು, ಗೇರು ಬೀಜ ಬಳಸುತ್ತಿದ್ದರು. ಕೃಷಿ ಬದುಕಿನ ವಿಧಾನ ಹೇಗಿತ್ತೆಂಬುದಕ್ಕೆ ಪ್ರತಿ ಹಳ್ಳಿಯಲ್ಲಿ ಇಂಥ ಹಲವು ಸಂಗತಿ ಗುರುತಿಸಬಹುದು.
ಭತ್ತದ ಗದ್ದೆಗೆ ಇಲಿ ಕಾಟ ತಡೆಯಲು ಗೂಬೆಗಳನ್ನು ಸೆಳೆಯುವ ತಂತ್ರದ ಬಗ್ಗೆ ಹಿಂದೊಮ್ಮೆ ಹೇಳಿದ್ದೇನೆ. ತೂಬರು ( ಬೀಡಿ ಎಲೆ ಮರ) ಗಿಡದ ಗೂಟವನ್ನು ಗದ್ದೆಯಲ್ಲಿ ನಿಲ್ಲಿಸುತ್ತಿದ್ದರು. ನಿಶಾಚರ ಗೂಬೆಗಳು ರಾತ್ರಿ ಗೂಟದಲ್ಲಿ ಕುಳಿತು ಇಲಿ ಬೇಟೆ ನಡೆಸುತ್ತಿದ್ದವು. ಈ ಗೂಟ ಊರುವುದರಿಂದ ಭತ್ತ ಹುಲುಸಾಗಿ ಬೆಳೆಯುತ್ತದೆಂಬ ನಂಬಿಕೆ ಇತ್ತು. ಭತ್ತದ ಬಿಳಿಕೊಳೆ ರೋಗಕ್ಕೆ ಮುಕ್ಕಡಕನ ಸೊಪ್ಪು, ಏಡಿಗಳ ನಿಯಂತ್ರಣಕ್ಕೆ ಕೌಲು ಸೊಪ್ಪು, ಬೇಲಿ ಬಳ್ಳಿಗಳಿಗೆ ಬಗಿನೆ ಗೊನೆ ಹೀಗೆ ಹಲವು ರೀತಿಯಲ್ಲಿ ಸಸ್ಯ ಸಂಬಂಧಗಳು ಕೃಷಿ ಜೊತೆಗೆ ಬೆಳೆದವು. ಬಿಳಿಗಿರಿ ರಂಗನ ಬೆಟ್ಟದ ಕಾಫಿ ತೋಟಕ್ಕೆ ರಾತ್ರಿ ಪುನುಗಿನ ಬೆಕ್ಕುಗಳು ಬರುತ್ತವೆ. ಅಲ್ಲಿನ ಕಾಫಿ ಹಣ್ಣು ತಿಂದು ಬೀಜಗಳು ಅವುಗಳ ಮಲದಲ್ಲಿ ವಿಸರ್ಜನೆಯಾಗುತ್ತದೆ. ಆ ಕಾಫಿ ಬೀಜ ಸಂಗ್ರಹಿಸಿ ಪುಡಿ ಮಾಡಿದರೆ ವಿಶೇಷ ಸುಗಂಧ ಕಾಫಿಗೆ ಬರುತ್ತದಂತೆ. ಈ ಸಿಲ್ವೆಟ್ ಕಾಫೀ’ (cಜಿvಛಿಠಿ cಟffಛಿ) ಇಂದು ದೇಶಗಳಲ್ಲೂ ಬೇಡಿಕೆ ಪಡೆದಿದೆ. ಮಾಮೂಲಿ ಕಾಫಿಗಿಂತ ಇದಕ್ಕೆ ಮೂರು ಪಟ್ಟು ಬೆಲೆ ಜಾಸ್ತಿ ಇದೆ. ಇಲಿ ಕಾಟಕ್ಕೆ ತೂಬರ ಗೂಟದ ಪರಿಹಾರ ನೆಲದ ಸಾಧ್ಯತೆಯ ಮುಖವಾದರೆ ಸಿವ್ವೆಟ್ ಕಾಫೀ ಪರಿಸರ ಸ್ನೇಹಿ ಮಾರ್ಗದಲ್ಲಿ ಕೃಷಿ ಗೆಲ್ಲಿಸುವ ದಾರಿಯಾಗಿದೆ. ಹುಡುಕುತ್ತ ಹೋದರೆ ನಿಸರ್ಗ ಒಡನಾಟದ ಲಾಭದ ಗುರುತು ಹಲವಿದೆ.
ಇಂದು ಕೃಷಿಕರ ಮನಸ್ಸು ಆಧುನಿಕ ಬೇಸಾಯದ ಪ್ರಭಾವದಿಂದ ಬದಲಾಗಿದೆ. ನಮ್ಮ ಹೊಲದ ಬೆಳೆ ಮಾತ್ರ ನೋಡುತ್ತಿದ್ದೇವೆ. ಕಾಡು ಸಸ್ಯಗಳ ಪರಿಚಯ ಕಡಿಮೆಯಾಗುತ್ತಿದೆ. ಹೊಲದಲ್ಲಿ ಮರ ಬೆಳೆದರೆ ಹೇಗೆ ಬೆಳೆ ಕಡಿಮೆಯಾಗುತ್ತದೆಂದು ಹೇಳಲು ಪಳಗಿದ್ದೇವೆ. 60 ವರ್ಷಗಳೀಚೆಗೆ ನೀರಾವರಿ ಪ್ರದೇಶವಾಗಿ ಬದಲಾದ ಗಂಗಾವತಿ, ಸಿಂಧನೂರು ಪ್ರದೇಶಗಳಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಮಳೆ ಆಶ್ರಿತ ನೆಲೆಯಾಗಿದ್ದ ಸಂದರ್ಭದಲ್ಲಿ ಬೇವು, ಕರಿಜಾಲಿ ಮುಂತಾದ ಮರಗಳಿದ್ದವು. ಈಗ ಎಕರೆಗೆ ಒಂದೆರಡು ಮರಗಳು ಇಲ್ಲಿ ಇಲ್ಲ. ಹೊಲದಲ್ಲಿ ಮರಗಳ ಸಂಖ್ಯೆ ಕಡಿಮೆಯಾದ ಬಳಿಕ ಕೀಟನಾಶಕ, ರಸಗೊಬ್ಬರ ಮಾರಾಟ ಅಂಗಡಿಗಳು ವಿಪರೀತ ಹೆಚ್ಚಿವೆ. ನಿಸರ್ಗದ ಏರುಪೇರಿನಿಂದ ವಿಷವರ್ತುಲದಲ್ಲಿ ಕೃಷಿಕರು ನಿಲ್ಲುವಂತಾಗಿದೆ. ಪಕ್ಷಿಗಳ ಆವಾಸವಾದ ಮರಗಳ ಕೊರತೆಯಿಂದ ಬೇಸಾಯ ರಾಸಾಯನಿಕ ಬಳಕೆಯ ದಾರಿ ಕುಸಿದಿದೆ. ಹವಾಮಾನ ಬದಲಾವಣೆ, ಬರದ ಭವಣೆಗಳಿಂದ ಸೋಲುತ್ತಿದ್ದೇವೆ. ನಿಸರ್ಗ ಸಂಹಾರದ ಕೆಲಸ ನಿಲ್ಲಿಸಿ ನಿಸರ್ಗ ಸಂಧಾನದ ಮೂಲಕ ಕೃ ಬದುಕಿಸುವ ಉಪಾಯ ಹುಡುಕಬೇಕಿದೆ. ನಮಗೆ ಸಸ್ಯ ಬಳಸುವ ಜಾnನವಿದ್ದರೆ ಮಾತ್ರ ಸಾಲದು, ಸನಿಹದಲ್ಲಿ ಸಸ್ಯಗಳೂ ಇರಬೇಕಲ್ಲವೇ ? ಸಂರಕ್ಷಣೆಯ ಪ್ರೀತಿಯಲ್ಲಿ ಪರಿಸರ ಪರ ಕೃಷಿ ನೀತಿ ಅಡಗಿದೆ.
ಕಾಡು ತೋಟ- 14. ಕಾಡು ಕೃಷಿಗೆ ನರ್ಸರಿ ಬೇಕು
– ಶಿವಾನಂದ ಕಳವೆ