Advertisement

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

10:03 PM Sep 23, 2020 | mahesh |

ಬೆಳ್ತಂಗಡಿ: ತಾಲೂಕು ಸಮುದಾಯ ಅಸ್ಪತ್ರೆಯಲ್ಲಿರುವ 6 ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಹೋಗಿದ್ದು, ಇದರಿಂದಾಗಿ ರೋಗಿಗಳು ತೀರ ತೊಂದರೆಗೀಡಾಗುತ್ತಿರುವುದನ್ನು ಮನಗಂಡು ಬ್ಲಾಕ್‌ ಕಾಂಗ್ರೆಸ್‌ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕು ಆರೋಗ್ಯಾಧಿಕಾರಿ ಸಹಿತ ಸಿದಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.

Advertisement

ಈ ವೇಳೆ ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿರುವ 6 ಡಯಾಲಿಸ್‌ ಯಂತ್ರವನ್ನು ಸೂಕ್ತ ನಿರ್ವಹಣೆ ಮಾಡದೆ ರೋಗಿಗಳು ಮುಂಗಡವಾಗಿ ಕಾಯ್ದಿರಿಸಿದ ಪಟ್ಟಿ ಬೆಳೆಯುತ್ತಿದೆ. ಇಷ್ಟಾದರೂ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗುತ್ತಿದೆ. ಕಳೆದ ಒಂದು ತಿಂಗಳಿಂದ ನಿರಂತರ ದೂರುಗಳು ಬರುತ್ತಿದ್ದು, ಶಾಸಕರಾಗಲಿ, ಸಂಬಂಧಪಟ್ಟ ಮೇಲಧಿಕಾರಿಗಳು ಗಮನಹರಿಸಿಲ್ಲ. ಈ ರೀತಿಯ ನಿರ್ಲಕ್ಷé ಧೋರಣೆ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತಾಗಿ ಆಸ್ಪತ್ರೆ ವಿಭಾಗ ಮುಖ್ಯಸ್ಥರಿಗೆ ದೂರಿದರೆ ಪೊಲೀಸ್‌ ದೂರು ನೀಡುವ ಮಟ್ಟಿಗೆ ತಲುಪಿದೆ. ಶಾಸಕರು ಈ ಕುರಿತು ಕ್ರಮ ವಹಿಸದಿರುವುದರಿಂದ ಸಿಬಂದಿ, ವೈದ್ಯಾಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಿರುವುದು ಕಂಡುಬರುತ್ತಿದೆ. ನನ್ನ ಅವಧಿಯಲ್ಲೇ ಇದ್ದ ಡಯಾಲಿಸಿಸ್‌ ಯಂತ್ರಗಳು ಇಂದೂ ಇವೆ. ಆದರೆ ನಿರ್ವಹಣೆಯಾಗುತ್ತಿಲ್ಲ. ಇದರಿಂದ ರೋಗಿಗಳ ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವೈದ್ಯಾಧಿಕಾರಿಗಳ ಅಸಮರ್ಪಕ ಮಾಹಿತಿಗೆ ಗರಂ
ಮಾಜಿ ಶಾಸಕರು ಸಂಬಂಧಪಟ್ಟ ವೈದ್ಯಾಧಿಕಾರಿಗಳನ್ನು ಕರೆದು ಡಯಾಲಿಸಿಸ್‌ ಯಂತ್ರದ ಮಾಹಿತಿ ನೀಡುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯರು, 6ರಲ್ಲಿ ಒಂದು ಯಂತ್ರ ಒಂದು ತಿಂಗಳಿಂದ ಕೆಟ್ಟಿದೆ. ಉಳಿದ 5 ಯಂತ್ರಗಳು ಸುಸ್ಥಿತಿಯಲ್ಲಿವೆ ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಗರಂಗೊಂಡ ಮಾಜಿ ಶಾಸಕರು, ಕಳೆದ 6 ತಿಂಗಳಿಂದ ಯಂತ್ರ ಕೆಟ್ಟಿದ್ದರೂ ಒಂದು ತಿಂಗಳು ಎಂಬ ಉತ್ತರ ನೀಡುತ್ತಿದ್ದೀರಿ. ಮಾಹಿತಿ ಸಮರ್ಪಕ ನೀಡಿ, ಇಲ್ಲವಾದಲ್ಲಿ ಸಂಬಂಧಪಟ್ಟವರನ್ನು ಕರೆಸಿ ಎಲ್ಲ ಯಂತ್ರಗಳನ್ನು ಪರಿಶೀಲಿಸುವುದಾಗಿ ಹೇಳಿದಾಗ ಅಧಿಕಾರಿಗಳು ತಬ್ಬಿಬ್ಟಾದ ಘಟನೆ ಸಂಭವಿಸಿತು.

ಬ್ಲಾಕ್‌ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ರಂಜನ್‌ ಜಿ. ಗೌಡ, ಜಿ.ಪಂ. ಸದಸ್ಯರಾದ ಶೇಖರ್‌, ನಮಿತಾ, ಮುಖಂಡರಾದ ಅಭಿನಂದನ ಹರೀಶ್‌ ಕುಮಾರ್‌, ಕೇಶವ ಪಿ. ಬೆಳಾಲು, ಪ್ರವೀಣ್‌ ಗೌಡ, ನ್ಯಾಯವಾದಿ ಮನೋಹರ್‌ ಕುಮಾರ್‌ ಇಳಂತಿಲ, ಮುಖಂಡರಾದ ಜಯವಿಕ್ರಮ್‌ ಕಲ್ಲಾಪು, ದಯನಾಂದ ಬೆಳಾಲು, ಅನಿಲ್‌ ಪೈ, ಎ.ಸಿ. ಮ್ಯಾಥು ಮತ್ತಿತರರಿದ್ದರು.

Advertisement

ಮಾಸಿಕ ನಿರ್ವಹಣೆ ಇಲ್ಲದೆ ಕೈಕೊಡುತ್ತಿರುವ ಯಂತ್ರ
ಸರಕಾರಿ ಆಸ್ಪತ್ರೆಗೆ ಹಲವಾರು ಅನುದಾನಗಳು ಬರುತ್ತಿವೆ. ಇಷ್ಟೆಲ್ಲ ಇದ್ದರೂ ಚುಚ್ಚುಮದ್ದು ಇಡಲು ರೆಫ್ರಿಜರೇಟರ್‌ ವ್ಯವಸ್ಥೆ ಇಲ್ಲ. ಡಯಾಲಿಸಿಸ್‌ ಮೂರು ಯಂತ್ರಗಳಷ್ಟೇ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ. ಡಯಾಲಿಸಿಸ್‌ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಯಂತ್ರ ಆಗಾಗ ಕೆಡುತ್ತಿದೆ. ರಕ್ತ ತೆಳುಗೊಳಿಸುವ ಹೆಪರಿನ್‌ ಚುಚ್ಚುಮದ್ದು ಸ್ಟಾಕ್‌ ಇಲ್ಲ. ಇದಕ್ಕಾಗಿ 2 ಎಂ.ಎಲ್‌. ಬದಲಾಗಿ 1 ಎಂ.ಎಲ್‌. ಕೊಡಲಾಗುತ್ತಿದೆ. ಡಯಾಲಿಸ್‌ ಸಂದರ್ಭ ಯಂತ್ರ ಕೆಟ್ಟಲ್ಲಿ ರೋಗಿಗಳ ರಕ್ತ ಸೋರಿಕೆಯಾದಲ್ಲಿ ಚೇತರಿಕೆಗೆ 2 ತಿಂಗಳು ಬೇಕಾಗಲಿದೆ. ಇತ್ತ ಡಯಾಲೈಸರ್‌, ಕ್ಯೂಬಿಂಗ್‌ ಪೈಪ್‌ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಮತ್ತೂಂದೆಡೆ ಹಿಮೋಗ್ಲೋಬಿನ್‌ ಚುಚ್ಚುಮದ್ದು ಹೊರಗಿನಿಂದ ತರಲು ಸೂಚಿಸಲಾಗುತ್ತಿದೆ ಎಂದು ರೋಗಿಗಳು ಆರೋಪಿಸುತ್ತಿದ್ದಾರೆ. ಇದನ್ನು ಡಿಎಚ್‌ಒ ಗಮನಕ್ಕೆ ತಂದಿದ್ದು, ರೋಗಿಗಳು ಬಿಲ್‌ ನೀಡಿದಲ್ಲಿ ಹಣ ಹಿಂದಿರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅವ್ಯವಸ್ಥೆ ಮುಂದುವರಿದರೆ ಕಾಂಗ್ರೆಸ್‌ ನಿಯೋಗ ಸರಕಾರಿ ಆಸ್ಪತ್ರೆ ಎದುರು ಧರಣಿ ಕೂರಬೇಕಾದಿತು ಎಂದು ವಸಂತ ಬಂಗೇರ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next