Advertisement

ಅನುದಾನ ಕೊರತೆ: ಗಂಗೊಳ್ಳಿ ಕಸ ವಿಲೇವಾರಿ ಘಟಕಕ್ಕೆ ಬೀಗ

09:04 PM Nov 02, 2019 | mahesh |

ಗಂಗೊಳ್ಳಿ: ಪ್ರಮುಖ ಮೀನುಗಾರಿಕಾ ಪ್ರದೇಶವಾಗಿರುವ ಗಂಗೊಳ್ಳಿಯು ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮ ಪಂಚಾಯತ್‌ ಎನ್ನುವ ಹಿರಿಮೆಯಿದ್ದರೂ, ಇಲ್ಲಿನ ಕಸದ ವಿಲೇವಾರಿಗೆ ಇನ್ನೂ ಕೂಡ ಸರಿಯಾದ ವ್ಯವಸ್ಥೆಯೇ ಇಲ್ಲ. ಕಳೆದ ವರ್ಷ ಆರಂಭವಾದ ಘನ – ದ್ರವ ತ್ಯಾಜ್ಯ ವಿಲೇವಾರಿ ಘಟಕವು ಅನುದಾನ ಸಮಸ್ಯೆಯಿಂದಾಗಿ ಕಳೆದ 4 ತಿಂಗಳಿನಿಂದ ಕಾರ್ಯಾಚರಿಸುತ್ತಿಲ್ಲ. 2018ರ ಆಗಸ್ಟ್‌ನಲ್ಲಿ ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಸ ವಿಲೇವಾರಿಗೆ ಇಲ್ಲಿನ ಮೀನುಗಾರಿಕಾ ಬಂದರು ಸಮೀಪದಲ್ಲಿ ಹಿಂದಿದ್ದ ರೋಟರಿ ಭವನದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣ ಘಟಕ ಆರಂಭಗೊಂಡಿತ್ತು. ಆಗ ಪ್ರಾಯೋಗಿಕವಾಗಿ 850 ಮನೆಗಳಿಂದ ಸೈಕಲ್‌ ಮೂಲಕವಾಗಿ ಕಸ ಸಂಗ್ರಹಿಸಲಾಗುತ್ತಿತ್ತು.

Advertisement

50 ಸಾವಿರ ರೂ. ಖರ್ಚು
ಆಗ ಈ ಮನೆಗಳಿಂದ ಕಸ ಸಂಗ್ರಹಿಸಿ, ಅವುಗಳನ್ನು ಈ ಘಟಕದಲ್ಲಿ ಘನ, ದ್ರವ ಕಸಗಳಾಗಿ ವಿಂಗಡಿಸಿ ವಿಲೇವಾರಿ ಮಡಲಾಗುತ್ತಿತ್ತು. ಮೊದಲಿಗೆ 7-8 ಮಂದಿ, ಬಳಿಕ 5 ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಇವರ ವೇತನ, ನಿರ್ವಹಣೆ ಖರ್ಚೆಲ್ಲ ಸೇರಿ ತಿಂಗಳಿಗೆ 50ರಿಂದ 55 ರೂ.ವರೆಗೆ ಖರ್ಚಾಗುತ್ತಿತ್ತು. ಇದನ್ನು ಪಂಚಾಯತೇ ಭರಿಸಬೇಕಾಗಿದ್ದುದರಿಂದ ಹೊರೆಯಾಗುತ್ತಿತ್ತು. ಕಸ ಸಂಗ್ರಹಕ್ಕೆ ಬಳಸುವ ಸೈಕಲ್‌ನಿಂದ ಹೆಚ್ಚಿನ ಮನೆಗಳಿಂದ ಕಸ ಸಂಗ್ರಹಿಸಲು ಸಾಧ್ಯವಿಲ್ಲ. ಅದಕ್ಕಾಗಿ ಈಗ ಟೆಂಪೋದಂತಹ ವಾಹನವನ್ನು ಶೀಘ್ರ ಖರೀದಿಗೆ ಮುಂದಾಗಿದ್ದು, ಇದಕ್ಕೆ ಪಂಚಾಯತ್‌ 3 ಲಕ್ಷ ರೂ. ಹಾಗೂ ಸ್ವಯಂ ಸೇವಾ ಸಂಸ್ಥೆಯೊಂದು 2 ಲಕ್ಷ ರೂ. ನೀಡಿದೆ.

ಡಿಸಿ, ಜಿ.ಪಂ.ಗೂ ಪತ್ರ
ಪಂಚಾಯತ್‌ ವತಿಯಿಂದ ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿ ಪತ್ರ ಬರೆಯಲಾಗಿದೆ. ಇದಕ್ಕೆ ಸ್ಪಂದಿಸಿದ್ದ ಆಗಿನ ಡಿಸಿಯವರು ಕೊಲ್ಲೂರು ದೇವಸ್ಥಾನದಿಂದ 5 ಲಕ್ಷ ರೂ. ನೀಡುವಂತೆ ಪತ್ರ ಬರೆದಿದ್ದರು. ಆದರೆ ದೇವಸ್ಥಾನದಿಂದ ಈವರೆಗೆ ಹಣ ನೀಡಿಲ್ಲ. ಈ ಬಗ್ಗೆ ಪಂಚಾಯತ್‌ನಿಂದಲೂ ಕೊಲ್ಲೂರು ದೇವಸ್ಥಾನಕ್ಕೆ ಪತ್ರ ಬರೆದಿದ್ದು, ಮತ್ತೆ ಡಿಸಿಯವರ ಗಮನಕ್ಕೆ ತರಲಾಗುವುದು ಎಂದು ಪಂಚಾಯತ್‌ ಕಾರ್ಯದರ್ಶಿ ಮಾಧವ “ಉದಯವಾಣಿ’ಗೆ ತಿಳಿಸಿದ್ದಾರೆ.

3,000 ಮನೆ
ಗಂಗೊಳ್ಳಿಯು ದೊಡ್ಡ ಗ್ರಾಮವಾಗಿದ್ದು, 1 ಸಾವಿರ ಎಕರೆ ವಿಸ್ತೀರ್ಣದಲ್ಲಿ 3,041 ಮನೆಗಳಿದ್ದು, 13 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಸುಮಾರು 200ಕ್ಕೂ ಮಿಕ್ಕಿ ಅಂಗಡಿ ಸೇರಿದಂತೆ ವಾಣಿಜ್ಯ ಮಳಿಗೆಗಳಿವೆ. 850 ಮನೆಗಳಿಂದ ಕಸ ಸಂಗ್ರಹ ಮಾಡುತ್ತಿದ್ದಾಗ ದಿನಕ್ಕೆ 2 ಕ್ವಿಂಟಾಲ್‌ ಕಸ ಸಂಗ್ರಹವಾಗುತ್ತಿತ್ತು. ಈಗ ಇದನ್ನು ಮತ್ತಷ್ಟು ವಿಸ್ತರಿಸಿದರೆ ದಿನಕ್ಕೆ 1ರಿಂದ ಒಂದೂವರೆ ಟನ್‌ ಕಸ ಸಂಗ್ರಹವಾಗಬಹುದು. ಆಗ ಇದರ ವಿಲೇವಾರಿಗೆ ಇನ್ನಷ್ಟು ಸಮರ್ಪಕ ನಿರ್ವಹಣೆಯ ಅಗತ್ಯವಿದೆ.

ಕಸ ವಿಲೇವಾರಿ ಸಮಸ್ಯೆ
ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಗಿತಗೊಂಡಿರುವುದರಿಂದ ಈಗ ಗ್ರಾಮದಲ್ಲಿ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವ ಬೆಳವಣಿಗೆ ನಡೆಯುತ್ತಿದೆ. ರಸ್ತೆ ಬದಿ, ಕೆರೆ, ಕಡಲ ತೀರ ಪ್ರದೇಶಗಳು ಕಸ ಎಸೆಯುವ ಡಂಪಿಂಗ್‌ ಯಾರ್ಡ್‌ಗಳಾಗುತ್ತಿವೆ. ಇದಲ್ಲದೆ ಮೀನುಗಾರಿಕಾ ಪ್ರದೇಶವಾಗಿರುವುದರಿಂದ ಕಸ ವಿಲೇವಾರಿ ಇಲ್ಲಿನ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಶೀಘ್ರ ಕಸ ವಿಲೇವಾರಿ ಘಟಕವನ್ನು ಆರಂಭಿಸಿ, ಕಸದ ಸಮಸ್ಯೆಗೆ ಮುಕ್ತಿ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಗ್ರಾಮಸ್ಥರ ಸಹಕಾರ ಬೇಕು
ಕಸ ವಿಲೇವಾರಿ ಘಟಕ ಅನುದಾನ ಕೊರತೆಯಿಂದ ಕೆಲ ತಿಂಗಳಿನಿಂದ ಸ್ಥಗಿತಗೊಂಡಿದೆ. ಮತ್ತೆ ಈಗ ಪಂಚಾಯತ್‌ ಅನುದಾನ ಹಾಗೂ ಜಿ.ಪಂ.ನಿಂದ ಹೆಚ್ಚುವರಿ ಅನುದಾನ ಸಿಕ್ಕಿದಲ್ಲಿ ಶೀಘ್ರ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಆರಂಭಿಸಲಾಗುವುದು. ಆದರೆ ನಿರ್ವಹಣೆಗೆ ಪ್ರತಿ ತಿಂಗಳು ಸಾವಿರಾರು ರೂ. ಖರ್ಚಾಗುತ್ತಿದ್ದು, ಕಸ ಸಂಗ್ರಹಕ್ಕೆ ವಿಲೇವಾರಿ ಸಲುವಾಗಿ ಪ್ರತಿ ಮನೆಯವರು, ಅಂಗಡಿಯವರು ಇಂತಿಷ್ಟು ಹಣ ನೀಡಿ ಸಹಕರಿಸಿದರೆ ಸಮರ್ಪಕ ನಿರ್ವಹಣೆ ಸಾಧ್ಯ.
– ಬಿ. ಮಾಧವ, ಗ್ರಾ.ಪಂ. ಕಾರ್ಯದರ್ಶಿ ಗಂಗೊಳ್ಳಿ

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next