Advertisement

ಸ್ಕ್ಯಾನ್‌ ಮಾಡಿದ್ರೆ ಚರಿತ್ರೆ ಹೇಳ್ಳೋ ಚಿತ್ರಗಳು!

10:25 AM Dec 04, 2019 | Suhan S |

ಬೆಂಗಳೂರು: ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ನಿಮಗೆ ಗೊತ್ತು. ಆದರೆ, ಈ ಚಿತ್ರಗಳು ಇತಿಹಾಸವನ್ನೇ ಹೇಳುತ್ತವೆ!

Advertisement

ಹೌದು, ಸ್ಮಾರ್ಟ್‌ಫೋನ್‌ನಿಂದ ಈ ಫೋಟೋಗಳನ್ನು ಸ್ಕ್ಯಾನ್‌ ಮಾಡಿದರೆ ಸಾಕು, ಆಯಾ ಚಿತ್ರದಲ್ಲಿರುವ ತಾಣದ ಇತಿಹಾಸ ದೃಶ್ಯ ಮತ್ತು ಧ್ವನಿಯೊಂದಿಗೆ ಬಿತ್ತರವಾಗುತ್ತದೆ. ಇದು ತಂತ್ರಜ್ಞಾನದ ಚಮತ್ಕಾರ. ಫ್ಲಿಪರ್‌ ಗೊಮೂವಿಂಗ್‌ ಪ್ರಾಡಕ್ಟ್ಸ್ ಲಿ. ಕಂಪನಿಯು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಸರ್ಕಾರದ ಪ್ರವಾಸೋದ್ಯಮ ಇಲಾಖೆಯೊಂದಿಗೂ ಒಪ್ಪಂದ ಮಾಡಿಕೊಂಡಿದೆ.

ಇದರಡಿ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಇಲಾಖೆಯು ಕಂಪನಿಗೆ ಅನುದಾನ ನೀಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಂಪನಿಯು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ಗುರುತಿಸಿ, ಪೋಸ್ಟ್‌ ಕಾರ್ಡ್‌ ಗಾತ್ರದ ಫೋಟೋಗಳನ್ನು ಸಿದ್ಧಪಡಿಸುತ್ತಿದೆ. ಅವುಗಳನ್ನು ಕಬ್ಬನ್‌ ಉದ್ಯಾನ, ಲಾಲ್‌ ಬಾಗ್‌, ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರ ಹಾಲಯ, ಜವಾಹರಲಾಲ್‌ ನೆಹರು ತಾರಾಲಯ, ಕೆಲವು ಪ್ರಸಿದ್ಧ ಪುಸ್ತಕದ ಅಂಗಡಿಗಳು ಮತ್ತಿತರ ಕಡೆಗಳಲ್ಲಿ ಆ ಪೋಸ್ಟ್‌ ಕಾರ್ಡ್‌ ಮಾದರಿಯ ಫೋಟೋಗಳನ್ನು ಸರ್ಕಾರವು ಮಾರಾಟಕ್ಕೆ ಇಡಲಿದೆ. ಈ ವ್ಯವಸ್ಥೆ ಕನಿಷ್ಠ ಅರ್ಧ ನಿಮಿಷದಿಂದ ಗರಿಷ್ಠ ಐದು ನಿಮಿಷದವರೆಗೆ ಮಾಹಿತಿ ನೀಡಲಿದೆ.

ನಗರದ ಯಶವಂತಪುರದ ತಾಜ್‌ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೆಂಟರ್‌ ಆಫ್ ಎಕ್ಸಲೆನ್ಸ್‌ ಮುಕ್ತ ಪ್ರಯೋಗಾಲಯದಲ್ಲಿ ಭಾಗವಹಿಸಿದ್ದ ಅವರು, ಈ ವಿನೂತನ ಉತ್ಪನ್ನದ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದರು. ನಮ್ಮ ಸುತ್ತಲಿನ ಪಾರಂಪರಿಕ ಕಟ್ಟಡಗಳು, ಐತಿಹಾಸಿಕ ತಾಣಗಳ ಬಗ್ಗೆ ಮಕ್ಕಳು ಸೇರಿದಂತೆ ಯುವಪೀಳಿಗೆಗೆ ಅರಿವು ಮೂಡಿಸುವುದರ ಜತೆಗೆ ಆಸಕ್ತಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮಕ್ಕಳಿಗೆ ಪಠ್ಯದಲ್ಲಿನ ಪಾಠಗಳನ್ನು ಓದಿ ಪಾರಂಪರಿಕ ತಾಣಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಇದೆ. ಆದರೆ, ಅಲ್ಲಿ ಕಲಿಕೆ ಸೀಮಿತವಾಗಿರುತ್ತದೆ. ಅಥವಾ ಗೂಗಲ್‌ ಟ್ರಿಪ್‌ ಅಡ್ವೆಸರ್‌ ಪ್ರಸ್ತುತ ಪ್ರವಾಸಿಗರಿಗೆ ಮಾಹಿತಿ ನೀಡುತ್ತದೆ.

ಆದರೆ, ಇವೆರಡರ ಮುಂದುವರಿದ ತಂತ್ರಜ್ಞಾನ ಈ ಫ್ಲಿಪರ್‌ ಗೊ. ನಗರದ 60-70 ಕಟ್ಟಡ, ಪ್ರದೇಶಗಳು ಸೇರಿದಂತೆ ಸುಮಾರು 120ಕ್ಕೂ ಅಧಿಕಪಾರಂಪರಿಕ ತಾಣಗಳನ್ನು ನಾವು ಗುರುತಿಸಿ, ಅವುಗಳ ಇತಿಹಾಸ, ಹಳೆಯ ಫೋಟೋಗಳನ್ನು ಸಂಗ್ರಹಿಸಿ ಈ ಡಿವೈಸ್‌ನಲ್ಲಿ ಹಾಕಿದ್ದೇವೆ. ಹಾಗಾಗಿ, ಸ್ಕ್ಯಾನ್‌ ಮಾಡುತ್ತಿದ್ದಂತೆ, ಅದರ ಸಮಗ್ರ ಚಿತ್ರಣ ಮುಂಗೈನಲ್ಲಿ ದೊರೆಯುತ್ತದೆ ಎಂದರು.

Advertisement

ಇದರಿಂದ ಮಕ್ಕಳಿಗೆ ಒಂದು ರೀತಿ ಮನರಂಜನೆ ಜತೆಗೆ ಮಾಹಿತಿ ದೊರೆಯಲಿದೆ. ಮತ್ತೂಂದೆಡೆ ಪ್ರವಾಸಿಗರಿಗೂ ಅನುಕೂಲ ಆಗಲಿದೆ. ಇದಲ್ಲದೆ, ಆ್ಯಪ್‌ ಬಳಕೆದಾರರು ಆಯಾ ತಾಣಗಳಲ್ಲಿನ ಸೆಲ್ಫಿಗಳನ್ನೂ ಸಂಗ್ರಹಿಸಿಡುವ ಗ್ಯಾಲರಿ ಇದರಲ್ಲಿದೆ ಎಂದು ಹೇಳಿದರು.

ಕನ್ನಡದಲ್ಲೂ ಇತಿಹಾಸ ಲಭ್ಯ : ಇದಲ್ಲದೆ, ಕೆಲವು ತಾಣಗಳಲ್ಲಿ ಮುಂದಿನ ದಿನಗಳಲ್ಲಿ ಆಯಾ ತಾಣಗಳ ಪೋಸ್ಟರ್ ಗಳನ್ನು ಅಂಟಿಸಲಾಗಿರುತ್ತದೆ. ಆ ಪೋಸ್ಟರ್‌ ಮೂಲೆಯಲ್ಲಿ ಒಂದು ಸಣ್ಣ ಸಂಕೇತ ನೀಡಲಾಗಿರುತ್ತದೆ. ಅಲ್ಲಿಂದ ಸ್ಕ್ಯಾನ್‌ ಮಾಡಿದರೆ ಸಾಕು, ಆ ತಾಣದ ಇತಿಹಾಸವನ್ನು ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ತಿಳಿಯಬಹುದು. ಗೈಡ್‌ಗಳ ಅವಶ್ಯಕತೆಯೂ ಇರುವುದಿಲ್ಲ. ಕೆಲವೆಡೆ ಈಗಾಗಲೇ ಪ್ರಾಯೋಗಿಕವಾಗಿ ಇದನ್ನು ಅನುಷ್ಠಾನಗೊಳಿಸಲಾಗಿದೆ. ಹಂಪಿ ಸೇರಿದಂತೆ ಇನ್ನೂ ಕೆಲವೆಡೆ ಪರಿಚಯಿಸುವ ಬಗ್ಗೆ ಮಾತುಕತೆ ನಡೆದಿದೆ. ಆದರೆ, ಈ ಸೌಲಭ್ಯಕ್ಕಾಗಿ ಪ್ರವಾಸಿಗರು ಮೊಬೈಲ್‌ ಪ್ಲೇಸ್ಟೋರ್‌ನಲ್ಲಿ ಫ್ಲಿಪರ್‌ ಗೊಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಂಪೆನಿಯ ಹರ್ಷವರ್ಧನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next