Advertisement

Fraud: ಜಪ್ತಿ ಮಾಡಿದ ವಾಹನ ಕಡಿಮೆ ಬೆಲೆಗೆ ಕೊಡಿಸುವುದಾಗಿ ವಂಚನೆ; ಬಂಧನ

11:32 AM Dec 10, 2023 | Team Udayavani |

ಬೆಂಗಳೂರು:  ಪೊಲೀಸರ ಸೋಗಿನಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು, ನಗರದ ವಿವಿಧೆಡೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಕಡಿಮೆ ಮೊತ್ತಕ್ಕೆ ಕೊಡಿಸುತ್ತೇನೆ ಎಂದು ವಂಚಿಸಿದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ವೈಟ್‌ಫೀಲ್ಡ್‌ ನಿವಾಸಿ ಲೂಥರ್‌ನಾಥನ್‌(53) ಬಂಧಿತ. ಆರೋಪಿಯಿಂದ 50 ಸಾವಿರ ರೂ. ನಗದು, ಬೈಕ್‌ ವಶಕ್ಕೆ ಪಡೆಯಲಾಗಿದೆ.

ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರಿಗೆ, ತಾನೂ ಪೊಲೀಸ್‌ ಎಂದು ಹೇಳಿಕೊಂಡು ಪರಿಚಯಿಸಿ ಕೊಂಡು, ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಕಡಿಮೆ ಮೊತ್ತಕ್ಕೆ ಕೊಡಿಸುತ್ತೇನೆ. ಅದರಲ್ಲೂ ಬುಲೆಟ್‌ಗಳನ್ನು 25 ಸಾವಿರ ರೂ.ಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅದನ್ನು ನಂಬಿದ ದೂರುದಾರ ಆರೋಪಿಗೆ ಎರಡು ಬುಲೆಟ್‌ಗಳು ಬೇಕೆಂದು 50 ಸಾವಿರ ರೂ. ಕೊಟ್ಟಿದ್ದರು. ಹಣ ಪಡೆದ ಆರೋಪಿ ನಾಪತ್ತೆಯಾಗಿದ್ದ. ಕೆಲ ದಿನಗಳ ಬಳಿಕ ಅನುಮಾನಗೊಂಡ ದೂರುದಾರ ಬೇಗೂರು ಠಾಣೆಗೆ ಬಂದು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಈ ಹಿಂದೆ ಖಾಸಗಿ ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ. ಆ ನಂತರ ಗೃಹ ರಕ್ಷಕ ದಳದಲ್ಲಿ ಎರಡೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾನೆ. ಅಲ್ಲದೆ, ಇದೇ ಮಾದರಿಯಲ್ಲಿ ವಂಚಿಸಿದ ಆರೋಪದಡಿ ಈ ಹಿಂದೆಯೂ ಬಂಧನಕ್ಕೊಳಗಾಗಿದ್ದ. ಆಗ ಈತನ ಮನೆಯವರು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ವೈಟ್‌ಫೀಲ್ಡ್‌ ನಲ್ಲಿ ಯೇ ಪ್ರತ್ಯೇಕವಾಗಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದ. ಸದ್ಯ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರಿಂದ ಆರೋಪಿ ಜೀವನ ನಿರ್ವಹಣೆಗಾಗಿ ಪೊಲೀಸ್‌ ಸಮವಸ್ತ್ರ ಧರಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಬೇಗೂರು  ಇನ್‌ಸ್ಪೆಕ್ಟರ್‌ ಕೃಷ್ಣಕುಮಾರ್‌ ನೇತೃತ್ವದಲ್ಲಿ  ಆರೋಪಿಯನ್ನು ಬಂಧಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next