ಬೆಂಗಳೂರು: ನಕಲಿ ಆ್ಯಪ್ ಮೂಲಕ ಪೇಮೆಂಟ್ ಮಾಡಲಾಗಿದೆ ಎಂಬ ಸಂದೇಶ ತೋರಿಸಿ ಚಿನ್ನಾಭರಣ ಮಳಿಗೆ ಮಾಲೀಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.
ತಾವರೆಕೆರೆ ಸಮೀಪದ ಕೋಡಿಗೇಹಳ್ಳಿ ನಿವಾಸಿ ಕಾರ್ತೀಕ್ ಅಲಿಯಾಸ್ ಶಿವ (32) ಬಂಧಿತ. ಈತನಿಂದ 7 ಗ್ರಾಂನ 2 ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಮಂಗಳೂರು ಪಾಲಿಕೆ ನೂತನ ಮೇಯರ್ ಆಗಿ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ ಆಯ್ಕೆ
ಬಿಬಿಎಂ ಪದವಿ ಪಡೆದುಕೊಂಡಿರುವ ಆರೋಪಿ, ಜೂನ್ 19ರಂದು ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯ ಪಾರಸ್ಮಲ್ ಎಂಬುವರ ಚಿನ್ನದ ಅಂಗಡಿಗೆ ಹೋಗಿದ್ದು, ಮೂರೂವರೆ ಗ್ರಾಂನ ಚಿನ್ನದ ಉಂಗುರ ಖರೀದಿಸಿದ್ದಾನೆ. ಬಳಿಕ ತಾನೇ ಸಿದ್ಧಪಡಿಸಿರುವ ಆನ್‌ಲೈನ್ ಪೇಮೆಂಟ್ ಸಂದೇಶ ತೋರಿಸಿ, ಹಣ ವರ್ಗಾವಣೆ ಮಾಡಿದ್ದೇನೆ ಎಂದು ಪಾರಸ್ಮಲ್‌ಗೆ ತೋರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆದರೆ, ಅಂಗಡಿ ಮಾಲೀಕರ ಖಾತೆಗೆ ಹಣ ಜಮೆ ಆಗಿರಲಿಲ್ಲ. 2 ತಿಂಗಳ ಬಳಿಕ ಪಾರಸ್ಮಲ್‌ರ ಪುತ್ರ ಭಾವಿಕ್ ಮೆಹ್ತಾ ಖಾತೆಗಳ ವಿವರ ಪರಿಶೀಲಿಸಿದಾಗ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಬಳಿಕ ಆನ್ ಲೈನ್ ಪೇಮೆಂಟ್‌ಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.
ನಂತರ ಆರೋಪಿ ಕಾರ್ತೀಕ್ ಕಳುಹಿಸಿದ್ದ ಸಂದೇಶದ ಬಗ್ಗೆ ಅನುಮಾನಗೊಂಡು ಗಮನಿಸಿದಾಗ ಒಂದೆಡೆ 19-7-2022 ಎಂದು ನಮೂದಾಗಿದ್ದರೆ, ಮತ್ತೊಂದು ಕಡೆ 19-05-2022 ಎಂದು ಉಲ್ಲೇಖೀಸಿತ್ತು. ಈ ಸಂಬಂಧ ಅಂಗಡಿ ಮಾಲೀಕರು ಆರೋಪಿಯ ವಿರುದ್ಧ ದೂರು ನೀಡಿದ್ದರು. ಬಳಿಕ ಅಂಗಡಿಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧಾರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವಿಪಿಎನ್ ಮೂಲಕ ವಂಚನೆ?
ಆರೋಪಿ ವಿಪಿಎನ್ ಎಂಬ ಆ್ಯಪ್ ಮೂಲಕ ಅದರಲ್ಲಿ ನಕಲಿ ಪೇಮೆಂಟ್ ಸಂದೇಶ ಅಥವಾ ಆ್ಯಪ್ ಸೃಷ್ಟಿಸಿ ಈ ರೀತಿ ವಂಚನೆ ಮಾಡುತ್ತಿರುವುದು ಗೊತ್ತಾಗಿದೆ. ಆರೋಪಿ ಇದೇ ರೀತಿ ಮತ್ತೊಂದು ಚಿನ್ನಾಭರಣ ಅಂಗಡಿ ಮಾಲೀಕರಿಗೂ ವಂಚಿಸಿದ್ದಾನೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.