ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಕಣದಲ್ಲೀಗ ಕಸಬ್ ದಾಳಿ ಇಟ್ಟಿದ್ದಾನೆ! ಪ್ರಧಾನಿ ನರೇಂದ್ರ ಮೋದಿ ಬೀಸಿದ್ದ “ಸ್ಕ್ಯಾಮ್’ ಚಾಟಿಯಿಂದ ವಿರೋಧ ಪಕ್ಷಗಳು ಸುಧಾರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ “ಕಸಬ್’ ಪಟ್ಟ ಕೊಟ್ಟಿದ್ದಾರೆ. ಅವರ ಪ್ರಕಾರ ಕಸಬ್ ಎಂದರೆ, ‘ಓಅ’ ಕಾಂಗ್ರೆಸ್, ‘ಖಅ’ ಸಮಾಜವಾದಿ ಪಕ್ಷ, ‘ಆ’ ಬಿಎಸ್ಪಿ!
“ಉ.ಪ್ರ. ಜನತೆ ಈ ಬಾರಿ ಕಸಬ್‌ಗ ಮುಕ್ತಿ ಕಾಣಿಸಲೇಬೇಕಿದೆ. ನನ್ನ ಅರ್ಥದಲ್ಲಿ ಕಸಬ್ ಎಂದರೆ, ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ! ಎಲ್ಲಿಯವರೆಗೆ ನಾವು ಕಸಬ್‌ಗ ಮುಕ್ತಿ ನೀಡುವುದಿಲ್ಲವೋ, ಅಲ್ಲಿಯ ತನಕ ಈ ರಾಜ್ಯ ಪ್ರಗತಿ ಕಾಣದು. ಕಸಬ್ ವಿರುದ್ಧ ಬಿಜೆಪಿಯ ಹೋರಾಟ ನಿರಂತರ’ ಎಂದು ಹೇಳಿದ್ದಾರೆ.
ರೇಪ್‌ನಲ್ಲಿ ನಂ.1: ಅಖೀಲೇಶ್ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿದ ಶಾ, “ಅಖೀಲೇಶ್ ಪ್ರತಿ ಭಾಷಣದಲ್ಲೂ ಕಾಮ್ ಬೋಲ್ತಾ ಹೈ (ಕೆಲಸ ಎಲ್ಲ ಹೇಳುತ್ತೆ) ಎನ್ನುತ್ತಿದ್ದಾರೆ. ಆದರೆ, ಇಡೀ ರಾಜ್ಯ ಸುತ್ತಿದ ಮೇಲೆ ಎಲ್ಲೂ ಅಖೀಲೇಶ್ ಮಾಡಿದ ಕೆಲಸ ಕಾಣಲಿಲ್ಲ. ಅತ್ಯಾಚಾರ, ಮಹಿಳೆ ಮೇಲಿನ ದೌರ್ಜನ್ಯ, ಲೂಟಿ ದರೋಡೆಗೆ ಉತ್ತರಪ್ರದೇಶ ನಂ.1 ಆಗಿ ಕಾಣುತ್ತಿದೆ’ ಎಂದು ಆರೋಪಿಸಿದರು. “ಅಖೀಲೇಶ್ ಯಾದವ್ ಲ್ಯಾಪ್‌ಟಾಪ್ ಹಂಚಲೂ ಜಾತಿ- ಧರ್ಮವನ್ನೇ ಆಧಾರವಾಗಿಸುತ್ತಾರೆ. ಎಸ್ಪಿ ಸರ್ಕಾರ ಒಳ್ಳೆಯ ಅಭಿವೃದ್ಧಿ ಯೋಜನೆಗಳ ಮೂಲಕ ರಾಜ್ಯದ ಜನತೆಯನ್ನು ಮೇಲಕ್ಕೆತ್ತಿದ್ದೇ ಆಗಿದ್ದರೆ, ಕಾಂಗ್ರೆಸ್ ಜೊತೆಗಿನ ಮೈತ್ರಿಯ ಅವಶ್ಯಕತೆಯೇ ಬರುತ್ತಿರಲಿಲ್ಲ’ ಎನ್ನುವ ಮೂಲಕ ಮೈತ್ರಿ ಪಕ್ಷಗಳಿಗೆ ಬಿಸಿಮುಟ್ಟಿಸಿದ್ದಾರೆ.
ಮತದಾರರಿಗೆ ಸೋನಿಯಾ ಪತ್ರ: ಚುನಾವಣೆ ಮೂರನೇ ಹಂತಕ್ಕೆ ಬರುವ ವೇಳೆಗೆ ಕಾಂಗ್ರೆಸ್‌ಗೆ ಭಾವನಾತ್ಮಕ ತಂತ್ರ ಪ್ರಯೋಗಿಸಿದೆ. ಅನಾರೋಗ್ಯ ಕಾರಣ ಪ್ರಚಾರದಿಂದ ದೂರ ಉಳಿದಿರುವ ಸೋನಿಯಾ ಗಾಂಧಿಯ ಪ್ರಚಾರ ಪತ್ರ ರಾಯ್‌ಬರೇಲಿ ಮತ್ತು ಅಮೇಥಿಯ ಸಭೆಯನ್ನು ತಲುಪಿದೆ. ಆದರೆ, ಇಡೀ ಪತ್ರದಲ್ಲಿ ಎಲ್ಲೂ ಎಸ್ಪಿ ಜೊತೆಗಿನ ಪಕ್ಷದ ಮೈತ್ರಿ ಕುರಿತು ಪ್ರಸ್ತಾಪವೇ ಇಲ್ಲ! “ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ’ ಎಂಬುದಷ್ಟೇ ಇದೆ! “ಮೋದಿ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸಲಿ. ನಂತರ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿ’ ಎಂದಿದ್ದಾರೆ.
ಫೆ.23ರಂದು ಉ.ಪ್ರ.ದ 12 ಜಿಲ್ಲೆಯ 53 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ದೀಪಾವಳಿಗೇ ಹೆಚ್ಚು ವಿದ್ಯುತ್!
ಪ್ರಧಾನಿ ಮೋದಿ “ರಂಜಾನ್ ತಿಂಗಳು ಪೂರ್ತಿ ಕರೆಂಟು ನೀಡುವ ಅಖೀಲೇಶ್ ಸರ್ಕಾರ, ದೀಪಾವಳಿ ತಿಂಗಳಲ್ಲಿ ಇಡೀ ರಾಜ್ಯವನ್ನು ಕತ್ತಲಿಗೆ ದೂಡುತ್ತದೆ’ ಎಂದು ಆರೋಪಿಸಿದ್ದರು. ಆದರೆ, ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಅಸೋಸಿಯೇಶನ್, “ರಂಜಾನ್‌ಗಿಂತ ದೀಪಾವಳಿಗೆ ಹೆಚ್ಚು ವಿದ್ಯುತ್ ನೀಡಲಾಗಿದೆ’ ಎಂದು ದಾಖಲೆ ತೆರೆದಿಟ್ಟಿದೆ. 2016ರ ರಂಜಾನ್ ವೇಳೆ 13, 500 ಮೆಗಾವ್ಯಾಟ್ ವಿದ್ಯುತ್ ಪೂರೈಸಲಾಗಿದ್ದು, ದೀಪಾವಳಿ ಮಾಸದಲ್ಲಿ 15,400 ಮೆಗಾವ್ಯಾಟ್ ಸರಬರಾಜು ಮಾಡಲಾಗಿದೆ. ಹೀಗಿದ್ದರೂ ಬಿಜೆಪಿಯ ಯೋಗಿ ಆದಿತ್ಯನಾಥ್, “ರಂಜಾನ್‌ಗಿಂತ ದೀಪಾವಳಿಗೆ ನಾಲ್ಕು ಪಟ್ಟು ವಿದ್ಯುತ್ ನೀಡಬೇಕಿತ್ತು’ ಎಂದು ಹೇಳಿದ್ದಾರೆ.