ಹೊಸದಿಲ್ಲಿ : ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವೇಳೆ ಟಿವಿ ಪತ್ರಕರ್ತ ರಾಜದೀಪ್ ಸರ್‌ದೇಸಾಯ್ ವಿರುದ್ಧದ ಮಾನಹಾನಿ ದಾವೆಯನ್ನು ಪುನರಾರಂಭಿಸಲು ಅದು ನಿರಾಕರಿಸಿದೆ.
ಬಿಹಾರದ ಹಿರಿಯ ಸರಕಾರಿ ಅಧಿಕಾರಿಯ ಪುತ್ರಿ ಸಲ್ಲಿಸಿದ ಮೇಲ್ಮನವಿಯನ್ನು ವಜಾ ಮಾಡಿದ ವರಿಷ್ಠ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, “ನೀವು ಪ್ರಜಾಸತ್ತೆಯನ್ನು ಸಹಿಸಿಕೊಳ್ಳಲು ಕಲಿಯಬೇಕು; ಈ ನ್ಯಾಯಾಲಯ ಮಾನಹಾನಿ ಕಾನೂನಿನ ಸಿಂಧುತ್ವನ್ನು ಎತ್ತಿ ಹಿಡಿದಿರಬಹುದು; ಹಾಗೆಂದು ಎಲ್ಲ ಕೇಸುಗಳನ್ನು ಮಾನಹಾನಿ ವರ್ಗದಡಿ ಪರಿಗಣಿಸಲಾಗದು’ ಎಂದು ಹೇಳಿತು.
ಬಿಹಾರ ಅಧಿಕಾರಿಯ ಪುತ್ರಿಯು ಭೂ ಹಂಚಿಕೆ ಹಗರಣದಲ್ಲಿ ಶಾಮೀಲಾಗಿದ್ದಳೆಂದು ಆರೋಪಿಸಲಾಗಿತ್ತು. ಈ ವಿಷಯ ಕುರಿತ ವರದಿಯನ್ನು 2010ರಲ್ಲಿ ಪ್ರಸಾರಿಸಿದ ಕಾರಣಕ್ಕೆ ಟಿವಿ ಪತ್ರಕರ್ತ ರಾಜದೀಪ್ ಸರ್‌ದೇಸಾಯ್ ಅವರು ಮಾನಹಾನಿ ದಾವೆಯನ್ನು ಎದುರಿಸಬೇಕು ಎಂದು ಆಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು.
“ಮಾಧ್ಯಮಗಳಲ್ಲಿ ಕೆಲವೊಮ್ಮೆ ತಪ್ಪಾಗಿ ವರದಿಗಳಾಗಿರುವ ಸಾಧ್ಯತೆಗಳು ಇರುತ್ತವೆ; ಆದರೆ ಅದರಿಂದ ಮಾನಹಾನಿ ಎಸಗಿದಂತಾಗುವುದಿಲ್ಲ” ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ “ಈ ಪ್ರಕರಣವನ್ನು ಅಲ್ಲಿಗೇ ವಿರಮಿಸಲು ಬಿಡಿ; ಅದನ್ನೇ ಸದಾ ಕಾಲ ಹಿಡಿದು ಕೂರಬೇಡಿ” ಎಂದು ಬುದ್ಧಿವಾದ ಹೇಳಿತು.
ರಾಜ್‌ದೀಪ್ ಸರ್‌ದೇಸಾಯ್ ವಿರುದ್ಧ ನೇರ ಆರೋಪಗಳ ಇಲ್ಲದಿದ್ದ ಕಾರಣಕ್ಕೆ ಅವರ ವಿರುದ್ಧದ ಮಾನಹಾನಿ ದಾವೆಯನ್ನು ವಜಾ ಮಾಡಿದ್ದ 2017ರ ಪಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್‌ದೇಸಾಯ್ ಅವರು ಐಬಿಎನ್ ನೆಟ್‌ವರ್ಕ್‌ನ ಪ್ರಧಾನ ಸಂಪಾದಕರಾಗಿದ್ದರು.